ದೇವಸ್ಥಾನಗಳಿಗೆ ಭಕ್ತರು ನೀಡುವ ದೇಣಿಗೆ ದೇವರಿಗೆ ಸೇರಿದ್ದು, ಅದನ್ನು ಸರ್ಕಾರದ ಯೋಜನೆಗಳಿಗೆ ಅಥವಾ ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.  ದೇವಾಲಯದ ನಿಧಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಸರ್ಕಾರಗಳಿಗೆ ತಾಕೀತು ಮಾಡಿದೆ.

ಕೆಲವೊಂದು ಸರ್ಕಾರಗಳಿಗೆ ರಸ್ತೆ ರಿಪೇರಿ, ಮೂಲ ಸೌಕರ್ಯ ಕಲ್ಪಿಸಲು ದೇವಸ್ಥಾನಗಳ ದುಡ್ಡಿನ ಮೇಲೆ ಕಣ್ಣು ಹೋಗುತ್ತಿರುವುದನ್ನು ಮನಗಂಡಿರುವ ಹೈಕೋರ್ಟ್​, ದೇವಸ್ಥಾನಗಳ ದುಡ್ಡನ್ನು ಹೀಗೆಲ್ಲಾ ಖರ್ಚು ಮಾಡುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದೆ. ದೇವಸ್ಥಾನದಲ್ಲಿ ಭಕ್ತರು ನೀಡುವ ದುಡ್ಡು ದೇವರಿಗೆ ಸೇರಿದ್ದು, ಅದು ದೇವಸ್ಥಾನದ ದುಡ್ಡು. ಅದನ್ನು ಸರ್ಕಾರ ಮುಟ್ಟುವಂತಿಲ್ಲ ಎಂದು ಕೋರ್ಟ್​ ಸರ್ಕಾರಕ್ಕೆ ತಾಕೀತು ಮಾಡಿದೆ. ಇದಾಗಲೇ ಇದೇ ರೀತಿಯ ತೀರ್ಪನ್ನು ಹಿಂದೆ ತಮಿಳುನಾಡಿನ ಹೈಕೋರ್ಟ್​ ನೀಡಿತ್ತು. ಇದೀಗ ಹಿಮಾಚಲ ಪ್ರದೇಶದ ಹೈಕೋರ್ಟ್​ ಕೂಡ ಇದೇ ತೀರ್ಪನ್ನು ಹೊರಡಿಸಿದ್ದು, ಇದೀಗ ಎಲ್ಲಾ ರಾಜ್ಯಗಳಿಗೂ ಅನ್ವಯ ಆಗುವ ಸಾಧ್ಯತೆ ಇದೆ.

ಗ್ಯಾರೆಂಟಿ ಯೋಜನೆಗಳಿಗೆ...

ದೇವಾಲಯಗಳಿಗೆ ದೇಣಿಗೆ ನೀಡುವವರು ದೇವಾಲಯ ಮತ್ತು ಧಾರ್ಮಿಕ ಮನೋಭಾವದಿಂದ ದೇಣಿಗೆ ನೀಡುತ್ತಾರೆ. ಆ ಹಣ ಇರುವುದು ಧಾರ್ಮಿಕ ಉದ್ದೇಶಗಳಿಗಾಗಿ ಅಥವಾ ದೇವಾಲಯ ನಿರ್ವಹಣೆಗೆ ಬಳಸಬಹುದು. ಅವುಗಳನ್ನು ವಾಣಿಜ್ಯಿಕವಾಗಿ ಬಳಸಲಾಗುವುದಿಲ್ಲ ಎಂದು ಕೋರ್ಟ್​ ಹೇಳಿದೆ. ಹಿಮಾಚಲ ಪ್ರದೇಶದಲ್ಲಿರುವ ಇಂಡಿ ಮೈತ್ರಿಕೂಟದ ಸರ್ಕಾರವು ದೇವಸ್ಥಾನದ ದುಡ್ಡನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿವೆ ಎಂಬ ಆರೋಪವೂ ಇರುವ ಹಿನ್ನೆಲೆಯಲ್ಲಿ, ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ, ದೇವಾಲಯದ ನಿಧಿಯನ್ನು ಬಳಸಿಕೊಂಡು ಮದುವೆ ಮಂಟಪ ನಿರ್ಮಿಸಲು ತಮಿಳುನಾಡಿನ ಸರ್ಕಾರ ಮುಂದಾಗಿತ್ತು. ಆಗಲೂ ಕೋರ್ಟ್​ ಇದೇ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಹಿಮಾಚಲ ಪ್ರದೇಶದ ಹೈಕೋರ್ಟ್​ ಕೂಡ ಮತ್ತೊಮ್ಮೆ ಎಚ್ಚರಿಸಿದೆ.

ದೇವಾಲಯದ ನಿಧಿ ದೇವರಿಗೆ ಮಾತ್ರ ಸೇರಿದ್ದು ಮತ್ತು ಸರ್ಕಾರಿ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಸಿಂಗ್ ಠಾಕೂರ್ ಮತ್ತು ರಾಕೇಶ್ ಕೈಂತ್ಲಾ ಅವರ ವಿಭಾಗೀಯ ಪೀಠವು ಹೇಳಿದೆ. ದೇವಾಲಯಗಳಿಗೆ ದಾನ ಮಾಡುವ ನಿಧಿ ಮತ್ತು ಆಸ್ತಿ ದೇವರಿಗೆ ಸೇರಿದ್ದು, ಆದ್ದರಿಂದ ದೇವರು ಅದರ ನಿಜವಾದ ಮಾಲೀಕ ಎಂದು ಹೇಳಿದೆ. ದೇವಾಲಯಗಳು ಲಾಭ ಗಳಿಸುವ ಸಂಸ್ಥೆಗಳಲ್ಲ ಮತ್ತು ಅವುಗಳ ನಿಧಿಗಳು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆಯ ವಿವಿಧ ವಿಭಾಗಗಳಲ್ಲಿ ವಿವರಿಸಿರುವ ಶಾಸನಬದ್ಧ ಉದ್ದೇಶಗಳೊಳಗೆ ಇರಬೇಕು ಎಂದು ಕೋರ್ಟ್​ ಇದಾಗಲೇ ಹೇಳಿದೆ.

ಧಾರ್ಮಿಕ ಮತ್ತು ದತ್ತಿ ಕಾಯ್ದೆಯಲ್ಲಿ ಏನಿದೆ?

ಧಾರ್ಮಿಕ ಮತ್ತು ದತ್ತಿ ಕಾಯ್ದೆಯ ಪ್ರಕಾರ, ಸರ್ಕಾರಕ್ಕೆ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರ ನೀಡುತ್ತದೆ, ಆದರೆ ರಾಜ್ಯವು ದೇವಾಲಯದ ನಿಧಿಯನ್ನು ಭಕ್ತರು ಅಥವಾ ದಾನಿಗಳು ಬಯಸಿದಂತೆ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಅಂತಹ ಕೊಡುಗೆಗಳನ್ನು ದೇವಾಲಯದ ಉತ್ಸವಗಳು, ನಿರ್ವಹಣೆ ಅಥವಾ ದೇವಾಲಯಗಳ ಅಭಿವೃದ್ಧಿಗೆ ಬಳಸಬೇಕು ಮತ್ತು ಸರ್ಕಾರಿ ಉದ್ದೇಶಗಳಿಗಾಗಿ ಅಲ್ಲ.

ಇದಕ್ಕಿದೆ ಇತಿಹಾಸ

19 ನೇ ಶತಮಾನದ ಆರಂಭದಲ್ಲಿ, ಈಸ್ಟ್ ಇಂಡಿಯಾ ಕಂಪೆನಿಯು ದೇವಾಲಯದ ನಿಧಿಯ ದುರುಪಯೋಗವನ್ನು ತಡೆಗಟ್ಟಲು ನಿಯಮಗಳನ್ನು ಘೋಷಿಸುವ ಮೂಲಕ ದೇವಾಲಯ ನಿರ್ವಹಣೆಯಲ್ಲಿ ರಾಜ್ಯದ ಹಸ್ತಕ್ಷೇಪಕ್ಕೆ ಒಂದು ಪೂರ್ವನಿದರ್ಶನವನ್ನು ಸ್ಥಾಪಿಸಿತು. 1863 ರಲ್ಲಿ ವಸಾಹತುಶಾಹಿಗಳು ಭಾರತದ ಹೆಚ್ಚಿನ ಭಾಗಗಳಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದಾಗ ಬ್ರಿಟಿಷರು ಭಾರತಕ್ಕೆ ಧಾರ್ಮಿಕ ದತ್ತಿ ಕಾಯ್ದೆಯನ್ನು ತಂದರು, 1840 ರಿಂದ ಗ್ರೇಟ್ ಬ್ರಿಟನ್‌ನಲ್ಲಿ ಸ್ಥಾಪಿಸಲಾದ ಮಾದರಿಯನ್ನು ಅನುಸರಿಸಿದರು, ಅಲ್ಲಿ ರಾಜ್ಯವು ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುತ್ತಿತ್ತು.

ಇದರ ನಂತರ 1923 ರ ಮದ್ರಾಸ್ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಜಾರಿಗೆ ಬಂತು. ಇದು ಕೆಲವು ಹಿಂದೂ ಧಾರ್ಮಿಕ ಸಂಸ್ಥೆಗಳ ಉತ್ತಮ ಆಡಳಿತ ಮತ್ತು ಆಡಳಿತವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಇದರ ನಿಜವಾದ ಉದ್ದೇಶವು ಸ್ಪಷ್ಟವಾಗಿ ವಿಭಿನ್ನವಾಗಿತ್ತು. ಹೆಚ್ಚಿನ ಭಕ್ತರು ತಮ್ಮ ಧಾರ್ಮಿಕ ಕೊಡುಗೆಗಳಲ್ಲಿ ಉದಾರರಾಗಿದ್ದಾರೆ ಮತ್ತು ಹಿಂದೂಗಳು ನಗದು, ವಸ್ತು ಮತ್ತು ಚಿನ್ನವನ್ನು ಸಹ ದಾನ ಮಾಡುತ್ತಾರೆ. ಅದು ಕೇವಲ ದೇವರು ಮತ್ತು ದೇವಾಲಯಕ್ಕೆ ಸೇರಿದ್ದು ಎನ್ನಲಾಯಿತು. 

ಇದನ್ನೂ ಓದಿ: ಚಿನ್ನದ ಪ್ರಚಾರಕ್ಕೆ ಭಾರತದ ವಿರೋಧಿ ಪಾಕ್​ ಮಾಡೆಲ್ ರಾಯಭಾರಿ? ಏನಿದು ವಿವಾದ? ಕೋರ್ಟ್ ಎಚ್ಚರಿಕೆ ಏನು?