ಅರವಿಂದ್ ಕೇಜ್ರಿವಾಲ್ ಅವರ ಆಪ್ತರಾಗಿದ್ದ ರಾಘವ್ ಚಡ್ಢಾ ಸೇರಿದಂತೆ ಏಳು ಸಂಸದರು ಪಕ್ಷ ತೊರೆದಿರುವುದು ಆಪ್‌ನಲ್ಲಿ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇದು ಬಿಜೆಪಿಯ 'ಆಪರೇಷನ್ ಕಮಲ' ಎಂದು ಆಪ್ ಆರೋಪಿಸಿದ್ದು, ಪಂಜಾಬ್ ಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದೆ.

ನವದೆಹಲಿ: 2012ರಲ್ಲಿ ಆಪ್‌ ಸ್ಥಾಪನೆಯಾದಾಗ ಪಕ್ಷ ಸೇರಿದ ಸಂಶದ ರಾಘವ ಚಡ್ಢಾ, ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಅವರ ಆಪ್ತರಾಗಿ ಗುರುತಿಸಿಕೊಂಡರು. ನಂತರ ಹಂತ ಹಂತವಾಗಿ ಬೆಳೆಯುತ್ತಾ, ಪಕ್ಷದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದರು. 2022ರ ಪಂಜಾಬ್ ವಿಧಾನಸಭಾ ಚುನಾವಣಾ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ನಂತರದ ವರ್ಷಗಳಲ್ಲಿ ಪಕ್ಷದ ಜೊತೆ ಸಂಬಂಧ ಹದಗೆಡುತ್ತಾ ಬಂದಿತು.

2024ರಲ್ಲಿ ಕೇಜ್ರಿವಾಲ್‌ ಬಂಧನವಾದಾಗ, ಚಡ್ಢಾ ವಿದೇಶದಲ್ಲಿದ್ದುದು ಹಾಗೂ ಕೇಜ್ರಿವಾಲ್‌ ಪರ ಹೋರಾಟದಲ್ಲಿ ಭಾಗಿಯಾಗದೇ ಇದ್ದುದು ಸಂಬಂಧ ಹದಗೆಡಲು ಮುಖ್ಯ ಕಾರಣವಾಯಿತು.

ಇತ್ತೀಚೆಗಷ್ಟೇ ಅವರು ಪಕ್ಷದ ಪರವಾಗಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸದನದಲ್ಲಿ ಮಾತಾಡುವುದಿಲ್ಲ ಎಂದು ಆರೋಪಿಸಿ, ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕ ಸ್ಥಾನದಿಂದ ವಜಾ ಮಾಡಲಾಗಿತ್ತು. ಅಂದಿನಿಂದಲೂ ಪಕ್ಷದ ನಾಯಕರು ಮತ್ತು ಚಡ್ಢಾ ನಡುವೆ ತೀವ್ರ ವಾಕ್ಸಮರ ನಡೆಯುತ್ತಿತ್ತು. ಅಂತಿಮವಾಗಿ 7 ಸಂಸದರು ಪಕ್ಷವನ್ನೇ ತೊರೆಯುವ ಮೂಲಕ ರಾಜಕೀಯ ಕಿತ್ತಾಟ ನಿರ್ಣಾಯಕ ತಿರುವು ಪಡೆದುಕೊಂಡಿದೆ. 12 ವರ್ಷ ಹಿಂದೆ ಪಕ್ಷ ಸ್ಥಾಪನೆ ಬಳಿಕ ಆಪ್‌ಗೆ ಆದ ದೊಡ್ಡ ಆಘಾತ ಇದಾಗಿದೆ.

ಇ.ಡಿ. ಕೇಸು ಇದ್ದವರೂ ಬಿಜೆಪಿ:

ಇತ್ತೀಚೆಗೆ, ರಾಘವ್‌ ರನ್ನು ರಾಜ್ಯಸಭೆಯಲ್ಲಿನ ಆಪ್‌ ನಾಯಕ ಹುದ್ದೆಯಿಂದ ಮುಕ್ತಗೊಳಿಸಿ ಸಂಸದ ಅಶೋಕ್‌ ಮಿತ್ತಲ್‌ ರನ್ನು ಆ ಹುದ್ದೆಗೆ ನೇಮಿಸಲಾಗಿತ್ತು. ಬಳಿಕ ಮಿತ್ತಲ್‌ ಆಸ್ತಿ ಮೇಲೆ ಇ.ಡಿ. ದಾಳಿ ಮಾಡಿತ್ತು. ಇದೀಗ ಅವರು ಕೂಡ ಬಿಜೆಪಿ ಸೇರಿದ್ದಾರೆ.

ಚಡ್ಢಾರಿಂದ ಪಂಜಾಬ್‌ ಜನತೆಗೆ ದ್ರೋಹ: ಆಪ್‌

ಪಕ್ಷ ತೊರೆದು, ತಮ್ಮ ಪರಮ ವೈರಿ ಪಕ್ಷವಾದ ಬಿಜೆಪಿ ಸೇರ್ಪಡೆಯಾದ ರಾಘವ್‌ ಚಡ್ಢಾ ಹಾಗೂ ಇತರರ ವಿರುದ್ಧ ಆಪ್‌ ಕೆಂಡಾಮಂಡಲವಾಗಿದೆ. ಬಿಜೆಪಿ ‘ಆಪರೇಷನ್‌ ಕಮಲ’ದ ಮೂಲಕ ಪಕ್ಷಾಂತರ ಕಾರ್ಯದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘2027ರ ಚುನಾವಣೆಗೂ ಮುನ್ನ ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಮಾಡಿದೆ’ ಎಂದು ಅರವಿಂದ್‌ ಕೇಜ್ರಿವಾಲ್ ಚುಟುಕು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

ಈ ಮಧ್ಯೆ ಮಾತನಾಡಿದ ಹಿರಿಯ ನಾಯಕ ಸಂಜಯ್‌ ಸಿಂಗ್‌, ‘ನಮ್ಮ ಪಕ್ಷ ಈ 7 ಸಂಸದರಿಗಾಗಿ ಬಹಳಷ್ಟು ಕೆಲಸಗಳನ್ನು ಮಾಡಿದೆ. ಪಂಜಾಬ್‌ನ ಜನ ಅವರನ್ನು ರಾಜ್ಯಸಭೆಗೆ ಕಳುಹಿಸಿದರು, ಆದರೂ ಅವರು ಬಿಜೆಪಿಯ ಮಡಿಲಿಗೆ ಬಿದ್ದರು. ಪಂಜಾಬಿಗಳು ಈ ದ್ರೋಹಿಗಳನ್ನು ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ಅಲ್ಲದೆ, ಆಪ್‌ ಅಧಿಕಾರದಲ್ಲಿ ಉಳಿದಿರುವ ಏಕೈಕ ರಾಜ್ಯವಾದ ಪಂಜಾಬ್‌ನಲ್ಲಿ ಭಗವಂತ್ ಮಾನ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯ ಆಡಳಿತ ಮತ್ತು ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ನಡುವೆ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪ್ರತಿಕ್ರಿಯಿಸಿ, ‘ಆಪ್‍ ನಾಯಕರು ನೆಟ್ಟಗಿದ್ದಿದ್ದರೆ ಇಂದು ಛಡ್ಡಾ ಪಕ್ಷವನ್ನು ಬಿಡುತ್ತಿರಲಿಲ್ಲ’ ಎಂದಿದ್ದಾರೆ.

ಮೂವರ ಅನರ್ಹತೆಗೆ ಕ್ರಮ:

7 ಸಂಸದರ ಪೈಕಿ ಬಹಿರಂಗವಾಗಿ ಮೂವರು (ರಾಘವ ಚಡ್ಢಾ, ಅಶೋಕ್‌ ಮಿತ್ತಲ್‌ ಹಾಗೂ ಸಂದೀಪ್‌ ಪಾಠಕ್‌) ಮಾತ್ರ ಬಿಜೆಪಿ ಸೇರಿದ್ದಾರೆ. ಇವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹ ಮಾಡಬೇಕು ಎಂದು ಆಪ್‌ ದೂರು ಸಲ್ಲಿಸಲು ನಿರ್ಧರಿಸಿದೆ. ಪಟ್ಟಿಯಲ್ಲಿರುವ ಇನ್ನುಳಿದ ಸಂಸದರಾದ ಹರ್ಭಜನ್‌ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್‌ ಗುಪ್ತಾ ಹಾಗೂ ವಿಕ್ರಂ ಸಾಹ್ನಿ) ಇನ್ನೂ ಬಿಜೆಪಿಯನ್ನು ಅಧಿಕೃತವಾಗಿ ಸೇರಿಲ್ಲ. ಹೀಗಾಗಿ ಇವರ ವಿರುದ್ಧ ದೂರು ಸಲ್ಲಿಕೆ ಬಗ್ಗೆ ತೀರ್ಮಾನ ಆಗಿಲ್ಲ.