ಒಂದು ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಸಾಲದಲ್ಲಿದ್ದ ವ್ಯಕ್ತಿಯೊಬ್ಬ, ಲಿಫ್ಟ್ ಕೇಳಿದ ಅಮಾಯಕನನ್ನು ತನ್ನ ಕಾರಿನಲ್ಲಿ ಸುಟ್ಟು ಕೊಂದು ತಾನೇ ಸತ್ತಂತೆ ನಾಟಕವಾಡಿದ್ದಾನೆ. ಆದರೆ ಆತ ಸಿಕ್ಕಿಬಿದ್ದಿದ್ದು ಹೇಗೆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಹಣ ಸಿಗುತ್ತೆ ಅಂದ್ರೆ ಕೆಲವರು ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಇನ್ಶ್ಯುರೆನ್ಸ್ ಹಣಕ್ಕಾಗಿ ವಾಹನದಲ್ಲಿ ಲಿಫ್ಟ್ ಕೇಳಿದವನನ್ನೇ ಕೊಲೆ ಮಾಡಿದ್ದು, ಬಳಿಕ ತಾನೇ ಮೃತಪಟ್ಟಿರುವಂತೆ ಬಿಂಬಿಸಿಕೊಂಡಿದ್ದಾನೆ. ಆದರೆ ಗೆಳತಿಗೆ ಕಳುಹಿಸಿದ ಮೆಸೇಜೊಂದರಿಂದ ಈತನ ಬಣ್ಣ ಬಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಲಾತೂರ್ ನಿವಾಸಿ ಗಣೇಶ್ ಚವ್ಹಾಣ್ ಕೊಲೆ ಮಾಡಿದ ಆರೋಪಿ.
ಘಟನೆ ಹಿನ್ನೆಲೆ
ಲಾತೂರ್ ಜಿಲ್ಲೆಯ ಔಸಾ ತೆಹ್ಸಿಲ್‌ನಲ್ಲಿ ಪೊಲೀಸರಿಗೆ ಸುಟ್ಟು ಹೋಗಿದ್ದ ಕಾರು ಹಾಗೂ ಅದರ ಒಳಗೆ ಸುಟ್ಟು ಕರಕಲಾದ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ಕಾರು ಗಣೇಶ್ ಚವ್ಹಾಣ್ ಅವರದ್ದಾಗಿದ್ದರಿಂದ ಶವವೂ ಅವರದ್ದೇ ಆಗಿದ್ದಿರಬಹುದು ಎಂದು ಆರಂಭದಲ್ಲಿ ಪೊಲೀಸರು ಭಾವಿಸಿದ್ದರು. ಆತನ ಕುಟುಂಬದವರು ಆತ ಲ್ಯಾಪ್‌ಟಾಪ್‌ನ್ನು ಹಿಂದಿರುಗಿಸುವುದಕ್ಕೆ ಹೋಗಿದ್ದ ಎಂದು ಹೇಳಿದ್ದರು. ಘಟನಾ ಸ್ಥಳದಲ್ಲಿ ಆತನದ್ದೇ ಬ್ರಾಸ್ಲೇಟ್ ಒಂದು ಸಿಕ್ಕಿತ್ತು. ಹೀಗಾಗಿ ಪೊಲೀಸರು ಇದು ಗಣೇಶ್ ಚವ್ಹಾಣ್‌ದೇ ಶವ ಎಂದು ಭಾವಿಸಿದ್ದರು.
ಚವ್ಹಾಣ್‌ಗೆ 57 ಲಕ್ಷದಿಂದ 97 ಲಕ್ಷದವರೆಗೆ ಸಾಲ ಇತ್ತು. ಇದರ ಜೊತೆಗೆ ಆತ ಒಂದು ಕೋಟಿಯ ವಿಮೆ ಪಾಲಿಸಿಯನ್ನು ಖರೀದಿ ಮಾಡಿದ್ದ. ಹೀಗಾಗಿ ಆತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹೀಗಿರುವಾಗ ಗೋವಿಂದ್ ಯಾದವ್ ಎಂದ ನತದೃಷ್ಟ ವ್ಯಕ್ತಿ ಗಣೇಶ್ ಚವ್ಹಾಣ್‌ಗೆ ಲಿಫ್ಟ್ ನೀಡುವಂತೆ ಕೇಳಿದ್ದಾರೆ. ಅದರಂತೆ ಚವ್ಹಾಣ್ ಯಾದವ್‌ಗೆ ತನ್ನ ಕಾರಿನಲ್ಲಿ ಲಿಫ್ಟ್ ನೀಡೋದಕ್ಕಾಗಿ ಹತ್ತಿಸಿಕೊಂಡಿದ್ದಾನೆ. ನಂತರ ಗೋವಿಂದ್ ಯಾದವ್ ನಿದ್ದೆ ಹೋಗುವುದನ್ನೇ ಗಣೇಶ್ ಚವ್ಹಾಣ್ ಕಾದಿದ್ದಾನೆ. ಆತ ನಿದ್ರೆಗೆ ಜಾರುತ್ತಿದ್ದಂತೆ ಕಾರಿಗೆ ಬೆಂಕಿ ಹಚ್ಚಿದ್ದಾನೆ.
ಇದನ್ನೂ ಓದಿ: ಅಳುತ್ತಲೇ ತನ್ನ 11 ವರ್ಷಗಳ ಅಂತರ್ಜಾತಿ ಪ್ರೀತಿಯ ಹೇಳಿಕೊಂಡ ಮಗಳಿಗೆ ತಂದೆ ಹೇಳಿದ್ದೇನು? : ವೀಡಿಯೋ
ಕೃತ್ಯಕ್ಕೂ ಮೊದಲು ಲಿಫ್ಟ್ ಕೇಳಿ ಕಾರು ಏರಿದ್ದ ಗೋವಿಂದ್ ಯಾದವ್‌ನನ್ನು ಆರೋಪಿ ಚವ್ಹಾಣ್ ಕಾರು ಚಾಲಕನ ಜಾಗದಲ್ಲಿ ಕೂರಿಸಿದ್ದಾನೆ. ನಂತರ ಅವನಿಗೆ ಸೀಟ್ ಬೆಲ್ಟ್ ಹಾಕಿದ್ದಾನೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಇಡೀ ಕಾರನ್ನು ಆವರಿಸುತ್ತಿದ್ದಂತೆ ಚವ್ಹಾಣ್ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳದಿಂದ ಬಸ್ ಹತ್ತಿ ಕೊಲ್ಹಾಪುರಕ್ಕೆ ಹೋದ ಆರೋಪಿ ಚವ್ಹಾಣ್ ಬಳಿಕ ಅಲ್ಲಿಂದ ಸಿಂಧುದುರ್ಗಾಕ್ಕೆ ಹೋಗಿದ್ದಾನೆ. ಆದರೆ ಆತ ತನ್ನ ಗೆಳತಿಗೆ ಘಟನೆಯ ನಂತರವೂ ಮೆಸೇಜ್ ಮಾಡುತ್ತಿರುವುದು ಕಂಡು ಬಂದ ನಂತರ ಪೊಲೀಸರು ಆತನಿಗಾಗಿ ಬಲೆ ಬೀಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು ಸೀದಾ ಸಿಂಧುದುರ್ಗಕ್ಕೆ ಹೋಗಿದ್ದು, ಅಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚವ್ಹಾಣ್ ವಿರುದ್ಧ ಪೊಲೀಸರು ಕೊಲೆ ಹಾಗೂ ಸಾಕ್ಷಿನಾಶ ಮಾಡಿದ ಪ್ರಕರಣ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಎಷ್ಟೇ ಬುದ್ದಿವಂತಿಕೆಯಿಂದ ಅಪರಾದ ಕೃತ್ಯವೆಸಗಿದ್ದರು ಕಾನೂನಿನ ಕೈಗೆ ಸಿಗದೇ ಹೋಗುವುದು ಸಾಧ್ಯವೇ ಇಲ್ಲ. ಹೀಗಿದ್ದರೂ ಕೂಡ ಕೆಲವರು ದುರಾಸೆಗೆ ಬಿದ್ದು ಅಪರಾಧ ಕೃತ್ಯಕ್ಕಿಳಿದು ಮುದ್ದೆ ಮುರಿಯುತ್ತಾರೆ. ಇಲ್ಲಿ ಓರ್ವನ ಕಿಡಿಗೇಡಿ ಬುದ್ಧಿಗೆ ಏನು ಮಾಡದ ಅಮಾಯಕನ ಜೀವ ಹೋಗಿದೆ.
ಇದನ್ನೂ ಓದಿ: 4 ಲಕ್ಷ ಸ್ಟೈಫಂಡ್ ಕೊಟ್ಟು ಇಂಟರ್ನ್‌ಶಿಪ್‌ಗೆ ಅವಕಾಶ ನೀಡುತ್ತದೆ ಈ ಕಾಲೇಜು


