ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ, ಟಿಎಂಸಿಯಿಂದ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್ ಅವರು ಬಾಬರಿ ಮಸೀದಿಯನ್ನು ಹೋಲುವ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಯಂತೆಯೇ ಇರುವ ಮಸೀದಿಗೆ ಟಿಎಂಸಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಶನಿವಾರ ಅಡಿಪಾಯ ಹಾಕಿದ್ದಾರೆ. ಭಾರಿ ಬಿಗಿ ಭದ್ರತೆಯಲ್ಲಿ ನಡೆದ ಈ ಸಮಾರಂಭಕ್ಕೆ ಸಾವಿರಾರು ಜನ ಆಗಮಿಸಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಾದ್ಯಂತ ತೀವ್ರ ಬಿಗಿ ಭದ್ರತೆಗಳನ್ನು ಏರ್ಪಡಿಸಲಾಗಿತ್ತು.

ಬೆಳಗ್ಗೆಯಿಂದಲೇ ಸಾವಿರಾರು ಜನರು ಸೇರಿದ್ದ ಈ ಕಾರ್ಯಕ್ರಮದ ಸ್ಥಳದಲ್ಲಿ ನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್ ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ ಹುಮಾಯೂನ್ ಕಬೀರ್ ವೇದಿಕೆಯ ಮೇಲೆ ಧರ್ಮಗುರುಗಳ ಜೊತೆಗೆ ಸೇರಿ ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಶಿಲಾನ್ಯಾಸ ಸಮಾರಂಭವು ಭಾರೀ ಭದ್ರತೆಯಲ್ಲಿ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೆಜಿನಗರ ಮತ್ತು ಪಕ್ಕದ ಬೆಲ್ದಂಗಾ ಪ್ರದೇಶದಾದ್ಯಂತ ಸಾವಿರಾರು ಪೊಲೀಸ್, ಆರ್‌ಎಎಫ್ ಮತ್ತು ಕೇಂದ್ರ ಪಡೆಗಳ ದೊಡ್ಡ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಬೀರ್, ಶಿಲಾನ್ಯಾಸ ಸಮಾರಂಭವನ್ನು ಅಡ್ಡಿಪಡಿಸಲು ಪಿತೂರಿಗಳು ನಡೆದಿದೆ. ಆದರೆ ಲಕ್ಷಾಂತರ ಜನರು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸುತ್ತಾರೆ ಎಂದು ಹೇಳಿದರು. ಬೆಲ್ದಂಗಾದಲ್ಲಿ ಮಸೀದಿಗೆ ನಾನು ಅಡಿಪಾಯ ಹಾಕುತ್ತೇನೆ. ಯಾವುದೇ ಶಕ್ತಿಯಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ನಾವು ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಪಾಲಿಸುತ್ತೇವೆ ಎಂದು ಕಬೀರ್ ಸ್ಥಳಕ್ಕೆ ಭೇಟಿ ನೀಡುವ ಮೊದಲು ಸುದ್ದಿಗಾರರ ಜೊತೆ ಹೇಳಿದ್ದರು.

ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಕಾರ್ಯಕ್ರಮವನ್ನು ಅಡ್ಡಿಪಡಿಸಲು ಪಿತೂರಿಗಳು ನಡೆಯುತ್ತಿವೆ. ದಕ್ಷಿಣ ಬಂಗಾಳ ಜಿಲ್ಲೆಗಳಾದ್ಯಂತ ಲಕ್ಷಾಂತರ ಜನರು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸುತ್ತಾರೆ. ಇದು ಶಾಂತಿಯುತ ಸಮಾರಂಭವಾಗಿರುತ್ತದೆ. ಸಂವಿಧಾನದ ಪ್ರಕಾರ ಪೂಜಾ ಸ್ಥಳವನ್ನು ಹೊಂದಲು ನಮಗೆ ಎಲ್ಲಾ ಹಕ್ಕಿದೆ. 2000 ಕ್ಕೂ ಹೆಚ್ಚು ಸ್ವಯಂಸೇವಕರು ಕರ್ತವ್ಯದಲ್ಲಿದ್ದಾರೆ ಎಂದು ಅವರು ಹೇಳಿದರು.

ಬೆಲ್ದಂಗಾದಲ್ಲಿ ಮಸೀದಿ ಮಾತ್ರವಲ್ಲ, ಅಲ್ಲಿಗೆ ಭೇಟಿ ನೀಡುವ ಎಲ್ಲಾ ಸಮುದಾಯಗಳ ಜನರಿಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಮತ್ತು ಅತಿಥಿ ಗೃಹವೂ ಇರಲಿವೆ ಎಂದು ಅವರು ಹೇಳಿದರು. ಬಿಜೆಪಿ ಅನುಸರಿಸುವ ಧಾರ್ಮಿಕ ಮಾರ್ಗಗಳಲ್ಲೇ ಈಗ ಟಿಎಂಸಿ ವಿಷಯವನ್ನು ಧ್ರುವೀಕರಿಸುತ್ತಿದೆ, ಅವರು ಪಿತೂರಿಗಳನ್ನು ರೂಪಿಸುತ್ತಿದ್ದಾರೆ ಎಂದು ಕಬೀರ್ ಆರೋಪಿಸಿದರು.

ಈ ಕಾರ್ಯಕ್ರಮಕ್ಕೂ ಮೊದಲು ಸ್ಥಳೀಯ ನಿವಾಸಿಗಳು ಮತ್ತು ಸ್ವಯಂಸೇವಕರು ಸ್ಥಳದಲ್ಲಿ ಮೊದಲೇ ಸೇರಲು ಪ್ರಾರಂಭಿಸಿದರು. ಉತ್ತರ ಬರಾಸತ್‌ನ ಸಫಿಕುಲ್ ಇಸ್ಲಾಂನಂತಹ ಜನರು ಮಸೀದಿಗಾಗಿ ಇಟ್ಟಿಗೆಗಳನ್ನು ಸಾಗಿಸಲು ಶುರು ಮಾಡಿದ್ದರು. ಮುಸ್ಲಿಂ ಸಮುದಾಯದ ಸುಮಾರು 2,000 ಸ್ವಯಂಸೇವಕರು ವ್ಯವಸ್ಥೆಗಳನ್ನು ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ.

ಮಸೀದಿಯ ನಿರ್ಮಾಣ ಸ್ಥಳವಾದ ಬೆಲ್ಡಂಗಾ ಶುಕ್ರವಾರದಿಂದಲೇ ಒಂದು ದೊಡ್ಡ ನಿರ್ಮಾಣ ವಲಯವಾಗಿ ಮಾರ್ಪಟ್ಟಿತ್ತು., ಆಯೋಜಕರು ಸ್ಥಳವನ್ನು ಸಿದ್ಧಪಡಿಸಲು ಓಡುತ್ತಿದ್ದರು. ಪಕ್ಷವನ್ನು ಪದೇ ಪದೇ ಮುಜುಗರಕ್ಕೀಡು ಮಾಡಿದ್ದಕ್ಕಾಗಿ ಗುರುವಾರ ಟಿಎಂಸಿಯಿಂದ ಶಾಸಕ ಹುಮಾಯೂನ್ ಕಬೀರ್ ಅವರನ್ನು ಅಮಾನತು ಮಾಡಲಾಗಿತ್ತು. 

ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶನಿವಾರ 25 ಬಿಘಾ ಪ್ರದೇಶದಲ್ಲಿ ಸುಮಾರು 3 ಲಕ್ಷ ಜನರು ಸೇರಬಹುದು ಹಲವು ರಾಜ್ಯಗಳ ಧಾರ್ಮಿಕ ಮುಖಂಡರು ಆಗಮಿಸಲಿದ್ದಾರೆ. ಸೌದಿ ಅರೇಬಿಯಾದಿಂದ ಇಬ್ಬರು ಖಾಜಿಗಳು ಬೆಳಗ್ಗೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿಶೇಷ ಬೆಂಗಾವಲು ಪಡೆಯಲ್ಲಿ ಆಗಮಿಸಲಿದ್ದಾರೆ ಎಂದು ಹೇಳಿದ್ದರು.

ಕಾರ್ಯಕ್ರಮದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 12 ರ ಆಚೆ ಇರುವ ವಿಶಾಲವಾದ ಸ್ಥಳದಲ್ಲಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದವರಿಗೆ ಶಾಹಿ ಬಿರಿಯಾನಿ ತಯಾರಿಸಲು ಏಳು ಅಡುಗೆ ಗುಂಪುಗಳನ್ನು ಸಿದ್ಧವಾಗಿದ್ದವು. ಸಂದರ್ಶಕರಿಗೆ ಸುಮಾರು 40,000 ಆಹಾರ ಪ್ಯಾಕೆಟ್‌ಗಳು ಮತ್ತು ಸ್ಥಳೀಯರಿಗೆ ಇನ್ನೂ 20,000 ಆಹಾರ ಪ್ಯಾಕೆಟ್‌ಗಳನ್ನು ತಯಾರಿಸಲಾಗಿತ್ತು, ಆಹಾರದ ಬಿಲ್ ಗಳೇ 30 ಲಕ್ಷ ರೂ.ಗಳನ್ನು ಮೀರಿದೆ. ಈ ಕಾರ್ಯಕ್ರಮದ ಒಟ್ಟು ಖರ್ಚು ₹60ರಿಂದ 70 ಲಕ್ಷ ತಲುಪುವ ನಿರೀಕ್ಷೆಯಿದೆ. ಮೈದಾನದ ಮೇಲೆ ಸ್ಥಾಪಿಸಲಾದ 150 ಅಡಿ ಅಗಲದ 80 ಅಡಿ ಎತ್ತರದ ವೇದಿಕೆಯು ಸುಮಾರು 400 ಅತಿಥಿಗಳಿಗೆ ಆತಿಥ್ಯ ವಹಿಸಲಿದ್ದು, ₹10 ಲಕ್ಷ ವೆಚ್ಚವಾಗಿದೆ ಎಂದು ನಿರೀಕ್ಷಿಸಲಾಗಿದೆ.