ಛತ್ತೀಸ್‌ಗಢದ ಮದ್ಯ ಹಗರಣದಲ್ಲಿ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರನಿಗೆ ₹250 ಕೋಟಿ ಲಂಚ ಸಂದಾಯವಾಗಿದೆ ಎಂದು ಎಸಿಬಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.  ಅಖಲಾಕ್‌ ಹತ್ಯೆ ಪ್ರಕರಣದ ಆರೋಪಿಗಳ ಮೇಲಿನ ಮೊಕದ್ದಮೆ ರದ್ದುಗೊಳಿಸುವ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ರಾಯ್ಪುರ: ಛತ್ತೀಸ್‌ಗಢದ ಬಹುಕೋಟಿ ಮದ್ಯ ಹಗರಣಲ್ಲಿ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಅವರ ಪುತ್ರ ಚೈತನ್ಯರಿಗೂ 200ರಿಂದ 250 ಕೋಟಿ ರು. ಲಂಚ ಸಂದಾಯವಾಗಿತ್ತು ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರ್ಥಿಕ ಅಪರಾಧ ವಿಭಾಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ನೀಡಿದೆ. ಕಳೆದ ಕಾಂಗ್ರೆಸ್‌ ಸರ್ಕಾರದ (2018-23) ಅವಧಿಯಲ್ಲಿ ಮಾರಾಟವಾದ ಪ್ರತಿ ಬಾಟಲ್‌ ಮದ್ಯಕ್ಕೆ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಲಂಚ ಪಡೆದಿದ್ದರು ಹಾಗೂ ಇದರಿಂದ ರಾಜ್ಯದ ಬೊಕ್ಕಸಕ್ಕೆ 3000 ಕೋಟಿ ರು.ಗೂ ಅಧಿಕ ನಷ್ಟವಾಗಿತ್ತು ಎಂಬುದು ಆರೋಪ.

ಈ ಹಗರಣದಲ್ಲಿ, ಅಂದು ಸಿಎಂ ಆಗಿದ್ದ ಬಘೇಲ್‌ ಅವರ ಪುತ್ರ ಚೈತನ್ಯ ಕೂಡ ಕೈಜೋಡಿಸಿದ್ದರು. ಅಕ್ರಮದಲ್ಲಿ ಪಾಲುದಾರರಾಗಿರುವವರ ಸಂಘಟನೆ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, ವರ್ಷಗಳ ಕಾಲ ಈ ಧಂದೆ ನಡೆಯುವಂತೆ ನೋಡಿಕೊಂಡಿದ್ದರು. ಅಧಿಕಾರಿಗಳು ಮತ್ತು ಉದ್ಯಮಿಗಳ ನಡುವೆ ಸೇತುವೆಯಂತಿದ್ದು, ಅಕ್ರಮವಾಗಿ ಸಂಗ್ರಹವಾದ ಹಣವನ್ನು ತಮ್ಮ ಸಹಚರರ ಮೂಲಕ ಹಂಚಿಕೆ ಮಾಡಿಸುತ್ತಿದ್ದರು.

ಇದಕ್ಕೆ ಪ್ರತಿಯಾಗಿ ಮದ್ಯ ಮಾರಾಟಗಾರರಿಂದ ಲಂಚವನ್ನು ತಮ್ಮ ಕಂಪನಿಯ ಖಾತೆ ಮೂಲಕ ಪಡೆದು, ಅದನ್ನು ರಿಯಲ್‌ ಎಸ್ಟೇಟ್‌ ಯೋಜನೆಗಳಿಗೆ ಹಾಗೂ ಹೂಡಿಕೆಗೆ ಬಳಸಿದ್ದರು. ಹೀಗೆ ಸುಮಾರು 200ರಿಂದ 250 ಕೋಟಿ ರು. ಪಡೆದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಖಲಾಕ್‌ ಕೊಲೆ ಆರೋಪಿ ವಿರುದ್ಧದ ಪ್ರಕರಣ ರದ್ದಿಗೆ ನ್ಯಾಯಾಲಯ ನಕಾರ

ಗೋಹತ್ಯೆ ಮಾಡಿ ಅದರ ಮಾಂಸ ಸೇವಿಸಿದ್ದಾರೆಂದು 2015ರಲ್ಲಿ ಮೊಹಮ್ಮದ್‌ ಅಖಲಾಕ್‌ ಎಂಬುವವರನ್ನು ಹತ್ಯೆ ಮಾಡಿದ್ದ ಆರೋಪಿಗಳ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು ಹಾಗೂ ಆ ಮೂಲಕ ಸಾಮಾಜಿಕ ಸಾಮರಸ್ಯ ಕಾಪಾಡಬೇಕು ಎಂದು ಕೋರಿದ್ದ ಉತ್ತರಪ್ರದೇಶ ಸರ್ಕಾರದ ಮನವಿಯನ್ನು ಸೂರಜ್‌ಪುರದ ಹೆಚ್ಚುವರಿ ಕೋರ್ಟ್‌ ತಳ್ಳಿಹಾಕಿದೆ. ಸರ್ಕಾರದ ಮನವಿಯನ್ನು ‘ಆಧಾರರಹಿತ ಮತ್ತು ಕ್ಷುಲ್ಲಕ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಸ್ವಾಗತಿಸಿರುವ ಅಖಲಾಕ್‌ ಪರ ವಕೀಲರು, ‘ನ್ಯಾಯಾಧೀಶರು ತಮ್ಮ ಅಭಿಪ್ರಾಯದ ಮೂಲಕ ಉದಾಹರಣೆಯಾಗಿದ್ದಾರೆ. ಮೃತರ ಪರಿವಾರಕ್ಕೆ ನ್ಯಾಯ ಸಿಕ್ಕಿದಂತಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ ಪ್ರಕರಣದ ತನಿಖೆಯನ್ನು 2026ರ ಜ.6ರಂದು ನಡೆಸಲು ನಿರ್ಧರಿಸಿದೆ.

ಇದನ್ನೂ ಓದಿ: ಈ ರಾಜ್ಯದ ಶೇ.70ರಷ್ಟು ಬಾಂಗ್ಲಾ ಅಕ್ರಮ ವಲಸಿಗರ ಬಳಿ ಇದೆ ವೋಟರ್‌ ಐಡಿ

ಎಸ್‌ಐಆರ್‌ ಬಳಿಕ 4 ರಾಜ್ಯಗಳಲ್ಲಿ 95 ಲಕ್ಷ ಅರ್ನಹರ ಹೆಸರು ರದ್ದು

ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ವೇಳೆ ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಅಂಡಮಾನ್‌, ನಿಕೋಬಾರ್‌ ದ್ವೀಪಗಳ 95 ಲಕ್ಷ ಮತದಾರರನ್ನು ಕರಡು ಮತಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ಅಂಡಮಾನ್‌ ನಿಕೋಬಾರ್‌ ದ್ವೀಪದ 3.10 ಲಕ್ಷ ಮತದಾರರ ಪೈಕಿ 64,000 ಜನರನ್ನು, ಕೇರಳದ 2.78 ಕೋಟಿ ಜನರಲ್ಲಿ 24.08 ಲಕ್ಷ ಮತದಾರರನ್ನು, ಮಧ್ಯ ಪ್ರದೇಶದ 42.74 ಮತ್ತು ಛತ್ತೀಸ್‌ಗಢದ 27.34 ಲಕ್ಷ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರಡುಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ಹೆಸರನ್ನು ಸೇರಿಸಬಹುದಾಗಿದೆ.

ಇದನ್ನೂ ಓದಿ: ಜರ್ಮನಿಯಲ್ಲೂ ‘ಮತಚೋರಿ’ ಆರೋಪ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ