ಪುಣೆಯಲ್ಲಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ವೇಳೆ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದಾರೆ. ಲಿವರ್ ನೀಡಿದ ಹೆಂಡತಿ ಹಾಗೂ ಲಿವರ್ ಪಡೆದ ಗಂಡ ಇಬ್ಬರೂ ಮೃತಪಟ್ಟಿದ್ದರಿಂದ ಆಸ್ಪತ್ರೆಗೆ ನೋಟಿಸ್ ಜಾರಿಯಾಗಿದೆ. ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.
ಗಂಡನಿಗೆ ಲಿವರ್ ನೀಡಿದ ಹೆಂಡತಿ ಹಾಗೂ ಲಿವರ್ ಪಡೆದು ಲಿವರ್ ಕಸಿಗೆ ಒಳಗಾದ ಗಂಡ ಇಬ್ಬರು ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ದಂಪತಿಗೆ ಶಸ್ತ್ರಚಿಕಿತ್ಸೆ ನಡೆಸಿದ ಪುಣೆಯ ಖಾಸಗಿ ಆಸ್ಪತ್ರೆಗೆ ಮಹಾರಾಷ್ಟ್ರದ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 15ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಈ ದಂಪತಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಮೃತ ದಂಪತಿಯನ್ನು ಪತಿ ಬಾಪು ಕೋಪರ್ ಹಾಗೂ ಅವರ ಪತ್ನಿ ಕಾಮಿನಿ ಎಂದು ಗುರುತಿಸಲಾಗಿದೆ. ಕಾಮಿನಿಯವರು ತಮ್ಮ ಪತಿಗೆ ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿದ್ದರು. ಆಗಸ್ಟ್ 15ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆರೋಗ್ಯ ಇಲಾಖೆ ಆಸ್ಪತ್ರೆಗೆ ಈ ಬಗ್ಗೆ ವರದಿ ನೀಡುವಂತೆ ನೋಟೀಸ್ ಜಾರಿ ಮಾಡಿದೆ.
ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ದುರಂತ
ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈಗ ಆಸ್ಪತ್ರೆಯೂ ಈ ಶಸ್ತ್ರಚಿಕಿತ್ಸೆಯ ಎಲ್ಲಾ ವಿವರಗಳನ್ನು ಆರೋಗ್ಯ ಇಲಾಖೆಗೆ ನೀಡಿದೆ ಎಂದು ಆರೋಗ್ಯ ಸೇವೆಯ ಉಪ ನಿರ್ದೇಶಕ ಡಾಕಟ್ಟರ್ ನಾಗನಾಥ್ ಯೆಂಪಲ್ಲೆ ಅವರು ಹೇಳಿದ್ದಾರೆ. ನಾವು ಆಸ್ಪತ್ರೆಗೆ ನೋಟೀಸ್ ಜಾರಿ ಮಾಡಿದ್ದು, ಲಿವರ್ ದಾನ ಮಾಡಿದವರು ಹಾಗೂ ಲಿವರ್ ಪಡೆದವರ ವಿವರ ಅವರ ವೀಡಿಯೋ ರೆಕಾರ್ಡಿಂಗ್ ಹಾಗೂ ಅವರಿಗೆ ನೀಡಿದ ಚಿಕಿತ್ಸೆಯ ವಿವರವನ್ನು ಸೋಮವಾರ ಬೆಳಗ್ಗೆ 10 ಗಂಟೆಯೊಳಗೆ ನೀಡುವಂತೆ ಕೇಳಿದ್ದೆವು ಎಂದು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಗಂಡ ಹೆಂಡತಿ ಇಬ್ಬರು ಸಾವು
ಲಿವರ್ ಕಸಿ ಶಸ್ತ್ರಚಿಕಿತ್ಸೆಯ ನಂತರ ಪತ್ನಿಯಿಂದ ಕಿಡ್ನಿ ಪಡೆದ ಬಾಪು ಕೋಮ್ಕರ್ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು, ಆಗಸ್ಟ್ 17ರಂದು ಅವರು ಸಾವನ್ನಪ್ಪಿದ್ದರು. ಇತ್ತ ಕಾಮಿನಿ ಅವರ ಆರೋಗ್ಯವೂ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ಸೋಂಕಾಗಿದ್ದು, ಚಿಕಿತ್ಸೆಯ ವೇಳೆಯೇ ಆಗಸ್ಟ್ 21ರಂದು ಅವರು ಸಾವನ್ನಪ್ಪಿದ್ದರು. ಗಂಡ ಹೆಂಡತಿ ಇಬ್ಬರು ಸಾವನ್ನಪ್ಪಿದ ಹಿನ್ನೆಲೆ ಆಘಾತಗೊಂಡ ಕುಟುಂಬದವರು ವೈದ್ಯಕೀಯ ನಿರ್ಲಕ್ಷ್ದ ಆರೋಪ ಮಾಡಿದ್ದು ತನಿಖೆಗೆ ಆಗ್ರಹಿಸಿದ್ದರು.
ವೈದ್ಯಕೀಯ ನಿರ್ಲಕ್ಷ್ಯದ ಆರೋಪ: ಆಸ್ಪತ್ರೆಗೆ ನೋಟಿಸ್
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆಸ್ಪತ್ರೆ ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳ(standard medical protocols)ಪ್ರಕಾರವೇ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಹೇಳಿದೆ. ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ವಿಷಯದ ಸಂಪೂರ್ಣ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಬೆಂಬಲವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಪು ಕೋಮ್ಕರ್ ಅವರಿಗೆ ಹೆಚ್ಚಿನ ಅಪಾಯದ ಹಲವು ಆರೋಗ್ಯ ಸಮಸ್ಯೆಗಳಿದ್ದವು.
ಈ ಅಪಾರ ನಷ್ಟದ ಸಮಯದಲ್ಲಿ ನಾವು ಕೊಮ್ಕರ್ ಕುಟುಂಬದ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ. ಜೀವಂತ ದಾನಿಗಳಿಂದ ಪಡೆದ ಯಕೃತ್ತಿನ ಕಸಿ ಅತ್ಯಂತ ಸಂಕೀರ್ಣವಾದ ಕಾರ್ಯವಿಧಾನಗಳಲ್ಲಿ ಒಂದಾಗಿದೆ. ಮತ್ತು ಈ ಸಂದರ್ಭದಲ್ಲಿ, ರೋಗಿಯು ಅನೇಕ ಆರೋಗ್ಯ ತೊಡಕುಗಳನ್ನು ಹೊಂದಿರುವ ಹೆಚ್ಚಿನ ಅಪಾಯ ಇದ್ದ ವ್ಯಕ್ತಿಯಾಗಿದ್ದರು. ಶಸ್ತ್ರಚಿಕಿತ್ಸೆಯ ಅಪಾಯಗಳ ಬಗ್ಗೆ ಕುಟುಂಬ ಮತ್ತು ದಾನಿಗೆ ಮುಂಚಿತವಾಗಿಯೇ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗಳನ್ನು ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳನ್ನು ಅನುಸರಿಸಿಯೇ ನಡೆಸಲಾಯಿತು. ಆದರೆ ದುರದೃಷ್ಟವಶಾತ್, ಕಸಿ ನಂತರ ಲಿವರ್ ಸ್ವೀಕರಿಸಿದವರಿಗೆ ಕಾರ್ಡಿಯೋಜೆನಿಕ್(ಹೃದಯ ಸಂಬಂಧಿ) ಆಘಾತ ಉಂಟಾಯಿತು ಮತ್ತು ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ಅದು ಹೇಳಿದೆ.
ಕಾಮಿನಿ ಕೋಮ್ಕರ್ ಅವರ ಆರೋಗ್ಯದ ಬಗ್ಗೆಯೂ ಆಸ್ಪತ್ರೆಯವರು ಹೇಳಿಕೆ ನೀಡಿದ್ದು, ಅವರು ಆರಂಭದಲ್ಲಿ ಚೆನ್ನಾಗಿ ಚೇತರಿಸಿಕೊಂಡರು, ಆದರೆ ನಂತರ ಸೆಪ್ಟಿಕ್ ಆಘಾತ ಮತ್ತು ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದರು. ಇದನ್ನು ಮುಂದುವರಿದ ಚಿಕಿತ್ಸೆಯಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ದುರಂತದ ಸಮಯದಲ್ಲಿ ನಾವು ಅತ್ಯುನ್ನತ ಗುಣಮಟ್ಟದ ಆರೈಕೆಯನ್ನು ಒದಗಿಸಲು ಬದ್ಧರಾಗಿದ್ದೇವೆ ಮತ್ತು ದುಃಖಿತ ಕುಟುಂಬಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಗ್ರೇಟರ್ ನೋಯ್ಡಾದ ಅಮ್ಮ ಮಗ ಸೇರಿ ಸೊಸೆಗೆ ಬೆಂಕಿ ಹಚ್ಚಿ ಕೊಂದ ಕೇಸ್: ಮಗನಿಗೆ ಗುಂಡೇಟಿನ ಬಳಿಕ ಅತ್ತೆಯೂ ಅಂದರ್
ಇದನ್ನೂ ಓದಿ: ಶಾಪಿಂಗ್ ಮಾಲ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಚೇಳು ಕಡಿತ: ಯುವತಿ ಆಸ್ಪತ್ರೆಗೆ ದಾಖಲು


