ಸಾರ್ವಜನಿಕ ಉದ್ಯಾನವನದಲ್ಲಿರುವ ದಶಕಗಳ ಹಳೆಯ ದೇವಾಲಯವನ್ನು ಒತ್ತುವರಿ ಎಂದು ಪರಿಗಣಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ದುರುದ್ದೇಶಪೂರಿತ ಅರ್ಜಿ ಸಲ್ಲಿಸಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
ಚೆನ್ನೈ (ಏ.17): ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ದಶಕಗಳಿಂದ ಇರುವ ದೇವಾಲಯವನ್ನು 'ಒತ್ತುವರಿ' ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೆ, ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ನ್ಯಾಯಾಲಯವು 1 ಲಕ್ಷ ರೂಪಾಯಿ ಭಾರಿ ದಂಡ ವಿಧಿಸಿದೆ. ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಈ ತೀರ್ಪು ನೀಡಿದ್ದು, ದೇವಾಲಯವು ಸಾರ್ವಜನಿಕ ಸ್ಥಳದ ಭಾಗವಾಗಿದೆ ಮತ್ತು ಅದು ನಿವಾಸಿಗಳ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
"ಯಾವುದೇ ಕಾರಣಕ್ಕೂ, ಒತ್ತುವರಿಯ ನೆಪವೊಡ್ಡಿ ದೈವವನ್ನು ಆರಾಧಿಸುವ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ. ಈ ದೇವಾಲಯವು ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಹಂತದಲ್ಲಿ ಅದನ್ನು ತೆರವುಗೊಳಿಸುವುದು ಬೃಹತ್ ಸಂಖ್ಯೆಯ ಜನರ ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರನಿಗೆ ದಂಡ ಯಾಕೆ?
ಜೇಸುದಾಸ್ ಕಾರ್ನೆಲಿಯಸ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. 1960ರ ವಿನ್ಯಾಸದಂತೆ ಈ ಜಾಗವನ್ನು ಕೇವಲ ಉದ್ಯಾನವನ ಮತ್ತು ಆಟದ ಮೈದಾನವಾಗಿ ಬಳಸಬೇಕು, ಅಲ್ಲಿ ದೇವಾಲಯ ಕಟ್ಟಿ ಒತ್ತುವರಿ ಮಾಡಲಾಗಿದೆ ಎಂದು ಅವರು ವಾದಿಸಿದ್ದರು. ಆದರೆ, ನ್ಯಾಯಾಲಯವು ಈ ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದೆ. "ಈ ಅರ್ಜಿಯು ದುರುದ್ದೇಶಪೂರಿತವಾಗಿದೆ ಮತ್ತು ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಸಲ್ಲಿಕೆಯಾದಂತೆ ಕಾಣುತ್ತಿದೆ" ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅರ್ಜಿದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ನಾಲ್ಕು ವಾರಗಳ ಒಳಗೆ ತಮಿಳುನಾಡು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ಸೂಚಿಸಲಾಗಿದೆ.
ಸಾರ್ವಜನಿಕ ಉದ್ದೇಶದ ವಾದ
ಉದ್ಯಾನವನದ ಒಟ್ಟು ವಿಸ್ತೀರ್ಣದಲ್ಲಿ ದೇವಾಲಯವು ಕೇವಲ ಅತ್ಯಲ್ಪ ಭಾಗವನ್ನು ಮಾತ್ರ ಆಕ್ರಮಿಸಿಕೊಂಡಿದೆ ಮತ್ತು ಉಳಿದ ಜಾಗವು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ ಎಂದು ಪ್ರತಿವಾದಿಗಳು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಉದ್ಯಾನವನಗಳು ಮನರಂಜನೆಗೆ ಮುಖ್ಯವಾದರೆ, ಆರಾಧನಾ ಕೇಂದ್ರಗಳು ಮಾನಸಿಕ ನೆಮ್ಮದಿಗೆ ಸಹಕಾರಿ. ಈ ದೇವಾಲಯವು ಬಹುಸಂಖ್ಯಾತ ನಿವಾಸಿಗಳ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಕೆಯಾಗುತ್ತಿದೆ. ಐದು ದಶಕಗಳ ಕಾಲ ಸುಮ್ಮನಿದ್ದು, ಈಗ ವಿಳಂಬವಾಗಿ ಆಕ್ಷೇಪ ಎತ್ತಿರುವುದರಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೂ, ದೇವಾಲಯವಿರುವ ಜಾಗವನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಉದ್ಯಾನವನವಾಗಿ ಸುಸ್ಥಿತಿಯಲ್ಲಿ ನಿರ್ವಹಿಸುವುದು ಅಧಿಕಾರಿಗಳ ಕರ್ತವ್ಯ ಎಂದು ನ್ಯಾಯಾಲಯ ನೆನಪಿಸಿದೆ.


