ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಾಗಿಲು ಮುರಿದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರ ಗುರುತು ಪತ್ತೆ ನಡೆಯುತ್ತಿದೆ.

ದೆಹಲಿ ಮಹಿಳಾ ಶೌಚಾಲಯದಲ್ಲಿ ದುರ್ವಾಸನೆ

ಮೆಟ್ರೋ ರೈಲು ನಿಲ್ದಾಣದಲ್ಲಿರುವ ಮಹಿಳಾ ಶೌಚಾಲಯದಲ್ಲಿ ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಶನಿವಾರ ಸಂಜೆ 5:33 ರ ಸುಮಾರಿಗೆ ಒಳಗಿನಿಂದ ಲಾಕ್ ಮಾಡಲಾದ ಮಹಿಳೆಯರ ಶೌಚಾಲಯದಿಂದ ಕೊಳೆತ ದುರ್ವಾಸನೆ ಬರುತ್ತಿದೆ ಎಂದು ವರದಿ ಬಂದ ನಂತರ ಶೌಚಾಲಯದ ಬಾಗಿಲು ಮುರಿದು ನೋಡಿದಾಗ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಬಾಗಿಲು ಒಡೆದ ಪೊಲೀಸರಿಗೆ ಶಾಕ್

ದುರ್ವಾಸನೆ ಬಗ್ಗೆ ವರದಿ ಬಂದ ನಂತ ಘಟನಾ ಸ್ಥಳಕ್ಕೆ ನೇತಾಜಿ ಸುಭಾಷ್ ಪ್ಲೇಸ್ (ಎನ್‌ಎಸ್‌ಪಿ) ಮೆಟ್ರೋ ಪೊಲೀಸ್ ಠಾಣೆಯ ಸಿಬ್ಬಂದಿ ಹೋಗಿದ್ದು, ಬಾಗಿಲನ್ನು ಹೊರಗಿನಿಂದ ಬಲವಂತವಾಗಿ ತೆರೆದಾಗ ಒಳಗೆ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಕೆಲ ಮಾಹಿತಿಯ ಪ್ರಕಾರ ಮೃತ ವ್ಯಕ್ತಿ ಶೌಚಾಲಯದ ಮೇಲ್ವಿಚಾರಣೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಕಳೆದೆರಡು ದಿನಗಳಿಂದ ಆತ ಕಾಣಿಸುತ್ತಿರಲಿಲ್ಲ. ಘಟನಾ ಸ್ಥಳಕ್ಕೆ ಅಪರಾಧದಳದ ಸಿಬ್ಬಂದಿಯನ್ನು ಕರೆಸಿ ಮಾಹಿತಿ ಸಂಗ್ರಹಿಸಲಾಗಿದೆ. ನಂತರ ಮೃತದೇಹವನ್ನು ಸಮೀಪದ ಬಿಎಸ್‌ಎ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗುತ್ತಿದ್ದು, ಅಲ್ಲಿ 72 ಗಂಟೆಗಳ ಕಾಲ ಅವರ ಶವವನ್ನು ಸಂರಕ್ಷಿಸುವ ಸಾಧ್ಯತೆ ಇದೆ. ಮೆಟ್ರೋ ಅಧಿಕಾರಿಗಳ ಸಹಾಯದಿಂದ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಅಧಿಕಾರಿಗಳು ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 194ರ ಅಡಿ ಇತರ ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ದೈವದ ಭಂಡಾರ ಸಾಗುವ ವೇಳೆ ಕಾಲುಸಂಕ ಕುಸಿದು 8 ಜನರಿಗೆ ಗಂಭೀರ ಗಾಯ