Live-in partner murder in Delhi: 35 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ತನ್ನ 44 ವರ್ಷದ ಲಿವ್-ಇನ್ ಸಂಗಾತಿಯನ್ನು ಹಣಕಾಸಿನ ವಿಚಾರವಾಗಿ ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಆತನ ಪತ್ನಿ ಹಾಗೂ ಬಾಮೈದನನ್ನು ಬಂಧಿಸಲಾಗಿದೆ.
ವಿವಾಹಿತನಿಂದ ಲೀವಿಂಗ್ ಪಾರ್ಟನರ್ ಹತ್ಯೆ:
35 ವರ್ಷದ ವ್ಯಕ್ತಿಯೊಬ್ಬ ತನ್ನ 44 ವರ್ಷದ ಲೀವಿಂಗ್ ಪಾರ್ಟನರ್‌ನನ್ನು ಕೊಲೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈ ಕೊಲೆಯ ನಂತರ ಈತನ ಪತ್ನಿ ಹಾಗೂ ಬಾಮೈದ ಇಬ್ಬರು ಸೇರಿ ಶವವನ್ನು ವಿಲೇವಾರಿ ಮಾಡುವುದಕ್ಕೆ ನೆರವಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೇಯಸಿಯ ಮನೆ ಮಾರಿ ಸ್ವಂತ ಮನೆ ಖರೀದಿಸಿದ್ದ ಆರೋಪಿ:
35 ವರ್ಷದ ವೀರೇಂದ್ರ, ಆತನ ಬಾಮೈದ ಹರ್ಯಾಣದ ಛಕ್ರಿ ದಾದ್ರಿ ನಿವಾಸಿ 21 ವರ್ಷದ ಚೇತನ್ ಹಾಗೂ ಆತನ ಪತ್ನಿ 31 ವರ್ಷದ ಪೂನಂ ಬಂಧಿತರು. ಪ್ರಮುಖ ಆರೋಪಿ ವೀರೇಂದ್ರ 44 ವರ್ಷದ ಮಹಿಳೆಯ ಜೊತೆ ಕಳೆದೆರಡು ವರ್ಷಗಳಿಂದ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದ. ವೀರೇಂದ್ರ ಬಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯಾದ ಮಹಿಳೆಯ ಹೆಸರಿನಲ್ಲಿ ದೆಹಲಿಯ ಪಲಂನಲ್ಲಿ ಸ್ವಂತ ಮನೆ ಇತ್ತು. ಈ ಮನೆಯನ್ನು ಆಕೆ ಹಾಗೂ ವೀರೇಂದ್ರ ಇಬ್ಬರೂ ಸೇರಿ ಮಾರಾಟ ಮಾಡಿದ್ದರು. ಮನೆ ಮಾರಾಟ ಮಾಡಿ ಬಂದ ಹಣದಲ್ಲಿ ವೀರೇಂದ್ರ ದೆಹಲಿಯ ನೈಋತ್ಯ ಜಿಲ್ಲೆಯಲ್ಲಿ ಮೂರು ಮಹಡಿಗಳ ಮನೆಯೊಂದನ್ನು ತನ್ನ ಹೆಸರಿನಲ್ಲಿ ಖರೀದಿ ಮಾಡಿದ್ದ.
ಹಣದ ವಿಚಾರಕ್ಕೆ ಗಲಾಟೆ : ಕೊಲೆಯಲ್ಲಿ ಅಂತ್ಯ:
ಇಷ್ಟೇ ಅಲ್ಲದೇ ಉಳಿದ 21 ಲಕ್ಷ ಹಣವನ್ನು ತಾನೇ ಇಟ್ಟುಕೊಂಡಿದ್ದ. ಇದೇ ವಿಚಾರವಾಗಿ ಈ ಜೋಡಿಯ ಮಧ್ಯೆ ಆಗಾಗ ಜಗಳಗಳಾಗುತ್ತಿದ್ದವು. ಅದೇ ರೀತಿ ಘಟನೆ ನಡೆದಂದು ಕೂಡ ಇಬ್ಬರು ಮದ್ಯಪಾನ ಮಾಡಿದ್ದಾರೆ. ಬಳಿಕ ಇಬ್ಬರ ಮಧ್ಯೆ ಜಗಳಗಳಾಗಿವೆ. ಜಗಳದ ಮಧ್ಯೆ ವೀರೇಂದ್ರ ಮಹಿಳೆಯನ್ನು ಹಾಸಿಗೆಗೆ ಕೆಡವಿ ಬಳಿಕ ತನ್ನ ಮೊಣಕೈನಿಂದ ಆಕೆಯ ಕತ್ತನ್ನು ಒತ್ತಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ: ತನಿಖೆಗೆ ಡಿಜಿಸಿಎ ಆದೇಶ
ಕೊಲೆ ಮಾಡಿದ ನಂತರ ಆರೋಪಿ ವೀರೇಂದ್ರ ತನ್ನ ಪತ್ನಿ ಪೂನಂ ಹಾಗೂ ಚೇತನ್‌ಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿ ಸಹಾಯ ಮಾಡುವಂತೆ ಕೇಳಿದ್ದಾನೆ ಅದರಂತೆ ಅವರು ಸ್ಥಳಕ್ಕೆ ಬಂದು ಮೂವರು ಸೇರಿ ಶವವನ್ನು ಕಾರಿಗೆ ಹಾಕಿದ್ದಾರೆ. ನಂತರ ಅಲ್ಲಿಂದ ಹೊರಟು ಹೋಗಿದ್ದಾರೆ ಬಳಿಕ ವೀರೇಂದ್ರ ಶವವನ್ನು ವಿಲೇವಾರಿ ಮಾಡಲು ಕಾರಿನಲ್ಲಿ ಹೋಗಿದ್ದಾನೆ. ಆದರೆ ಅತಿಯಾದ ಕುಡಿತದ ಅಮಲಿನಿಂದಾಗಿ ಅವನಿಗೆ ವಾಹನವನ್ನು ಡ್ರೈವ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೇವಲ 100 ಮೀಟರ್ ದೂರದಲ್ಲಿ ಕಾರನ್ನು ಬಿಟ್ಟು ಮನೆಗೆ ಹಿಂತಿರುಗಿದ್ದಾನೆ. ನಂತರ ಮತ್ತೆ ಕುಡಿಯುವುದಕ್ಕೆ ಶುರು ಮಾಡಿದ್ದಾನೆ. ಕಂಠಪೂರ್ತಿ ಕುಡಿದು ಅಲ್ಲೇ ನಿದ್ರಿಸಿದ್ದಾರೆ.
ಇದನ್ನೂ ಓದಿ: ದುಬೈನಿಂದ ಬರ್ತಿದ್ದ ವಿಮಾನದಲ್ಲಿ ಗಗನಸಖಿಗೆ ಕಿರುಕುಳ: ಕೇರಳದ ಸಾಫ್ಟ್‌ವೇರ್ ಇಂಜಿನಿಯರ್ ಅರೆಸ್ಟ್
ಈ ಮಧ್ಯೆ ಮರುದಿನ ಬೆಳಗ್ಗೆ 9 ಗಂಟೆ ಸುಮಾರಿಗೆ, ನೆರೆಹೊರೆಯವರು ವಾಹನದೊಳಗೆ ಮಹಿಳೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆಗಿಳಿದ ಪೊಲೀಸರು ಕಾರು ನೋಡಿ ವೀರೇಂದ್ರನ ಮನೆಗೆ ಬಂದಿದ್ದಾರೆ. ಈ ವೇಳೆ ವೀರೇಂದ್ರ ಮನೆಯಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಸ್ಥಳದಲ್ಲೇ ಅವನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಬಳಸಿದ ಕಾರು ಘಟನೆ ನಡೆದ ವೇಳೆ ಆರೋಪಿಗಳು ಧರಿಸಿದ ಬಟ್ಟೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಚೇತನ್ ಹಾಗೂ ಪೂನಂ ಘಟನಾ ಸ್ಥಳಕ್ಕೆ ತಲುಪಲು ಬಳಸಿದ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೀರೇಂದ್ರ ಜೊತೆ ಲೀವಿಂಗ್ ಟುಗೆದರ್ ಇದ್ದ ಒಂಟಿ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ವಿವಾಹಿತ ಪ್ರೇಮಿಯ ನಂಬಿ ತನ್ನ ಸ್ವಂತ ಮನೆಯನ್ನು ಮಾರಿದ ಮನೆ ಹಣ ಎಲ್ಲವನ್ನೂ ಕಳೆದುಕೊಂಡ ಆ ಮಹಿಳೆ ಬೀದಿಯಲ್ಲಿ ಹೆಣವಾಗಿದ್ದು ಮಾತ್ರ ವಿಧಿ ವಿಪರ್ಯಾಸವೇ ಸರಿ.


