ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಸಿಪಿಎಂ ನಾಯಕ ಮೊಹಮ್ಮದ್ ಸಲೀಂ ಮತ್ತು ಅವರ ಪುತ್ರನ ಹೆಸರಿನ ಮುಂದೆ 'ಅವಸ್ಥಿ' ಎಂಬ ಬ್ರಾಹ್ಮಣ ಉಪನಾಮವನ್ನು ತಪ್ಪಾಗಿ ಸೇರಿಸಲಾಗಿದೆ. ಚುನಾವಣಾ ಆಯೋಗದ ಈ ಗಂಭೀರ ಪ್ರಮಾದದ ವಿರುದ್ಧ ಸಲೀಂ ಮತ್ತು ಅವರ ಪುತ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾ (ಡಿ.18): ಪಶ್ಚಿಮ ಬಂಗಾಳದ ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ ಮೊಹಮ್ಮದ್ ಸಲೀಂ, ಪುತ್ರ ಆತಿಶ್ ಅಜೀಜ್ ಅವರು ರಾತ್ರೋರಾತ್ರಿ ಬ್ರಾಹ್ಮಣರಾಗಿದ್ದಾರೆ. ಮೊಹಮ್ಮದ್ ಸಲೀಂ ಅವರ ಹೆಸರು ಈಗ ಮೊಹಮ್ಮದ್ ಸಲೀಂ ‘ಅವಸ್ಥಿ’ ಆಗಿದ್ದರೆ, ಪುತ್ರ ಆತಿಶ್ ಅಜೀಜ್ ಅವರ ಹೆಸರು ಆತಿಶ್ ಅಜೀಜ್ ಅವಸ್ಥಿ ಆಗಿ ಬದಲಾಗಿದೆ!
ಹೌದು. ಈ ಬದಲಾವಣೆಗೆ ಮುಖ್ಯ ಕಾರಣ ಚುನಾವಣಾ ಆಯೋಗದ ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR).
ಚುನಾವಣಾ ಆಯೋಗವು ಕರಡು ಈಗ ಮತದಾರರ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಇಂಥದ್ದೊಂದು ಎಡವಟ್ಟು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಅಪ್ಡೇಟ್ ಮಾಡುವಾಗ ಆದ ಎಡವಟ್ಟಿನಿಂದಾಗಿ ಮೊಹಮ್ಮದ್ ಸಲೀಂ ಮತ್ತು ಆತಿಶ್ ಅಜೀಜ್ ಅವರ ಹೆಸರಿನ ಕೊನೆಯಲ್ಲಿ ಬ್ರಾಹ್ಮಣ ಉಪನಾಮ ‘ಆವಸ್ಥಿ’ ಬಂದು ಸೇರಿಕೊಂಡಿದೆ.
ಇದಕ್ಕೆ ಸಲೀಂ ಹಾಗೂ ಆತಿಶ್ ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ನನ್ನನ್ನು ಮತ್ತು ನನ್ನ ತಂದೆಯನ್ನು ಬ್ರಾಹ್ಮಣರನ್ನಾಗಿ ಮಾಡಿದೆ. ನನ್ನ ತಂದೆ ದಶಕಗಳ ಕಾಲ ರಾಜಕೀಯದಲ್ಲಿದ್ದಾರೆ. ಇಂಥವರ ಹೆಸರುಗಳೇ ತಪ್ಪಾದರೆ ಇನ್ನು ಜನಸಾಮಾನ್ಯರ ಗತಿಯೇನು? ಎಂದು ಆತಿಶ್ ಅಜೀಜ್ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಮೊಹಮ್ಮದ್ ಸಲೀಂ ಕೂಡ ಈ ಯಡವಟ್ಟು ಮುಂದಿಟ್ಟುಕೊಂಡು ಚುನಾವಣಾ ಆಯೋಗದ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ಆಯೋಗವು ಎಸ್ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಿಬ್ಬಂದಿಗೆ ಸರಿಯಾಗಿ ತರಬೇತಿ ನೀಡಿದಂತಿಲ್ಲ ಎಂದು ಆರೋಪಿಸಿದ್ದಾರೆ.


