ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) 'ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ' ಎಂದು ಮರುನಾಮಕರಣ ಮಾಡಿದೆ. ಈ ಬದಲಾವಣೆಯೊಂದಿಗೆ, ಕೆಲಸದ ದಿನಗಳನ್ನು 100 ರಿಂದ 125 ಕ್ಕೆ ಹೆಚ್ಚಿಸಲಾಗಿದ್ದು, ಕನಿಷ್ಠ ವೇತನವನ್ನು ದಿನಕ್ಕೆ ₹240 ಕ್ಕೆ ಪರಿಷ್ಕರಣೆ.
ನವದೆಹಲಿ (ಡಿ.12): ಗ್ರಾಮೀಣ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಡಿಸೆಂಬರ್ 12, 2025 ರಂದು ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) ಯ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ. ಈಗ ಈ ಯೋಜನೆಯನ್ನು 'ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ' ಎಂದು ಮರುನಾಮಕರಣ ಮಾಡಲಾಗಿದ್ದು, ಉದ್ಯೋಗ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಪ್ರಮುಖ ಬದಲಾವಣೆಗಳು:
ಹೆಸರು ಬದಲಾವಣೆ: MNREGA ಯನ್ನು ಇನ್ನು ಮುಂದೆ 'ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ' ಎಂದು ಕರೆಯಲಾಗುತ್ತದೆ. ಈ ಯೋಜನೆಯು ಆರಂಭದಲ್ಲಿ 2005 ರಲ್ಲಿ NREGA ಎಂದು ಪ್ರಾರಂಭವಾಗಿ, ನಂತರ MGNREGA ಎಂದು ಮರುನಾಮಕರಣಗೊಂಡಿತ್ತು.
ಕೆಲಸದ ದಿನಗಳ ಹೆಚ್ಚಳ: ಈ ಯೋಜನೆಯಡಿ ಒದಗಿಸುವ ಕೆಲಸದ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.
ಕನಿಷ್ಠ ವೇತನ ಪರಿಷ್ಕರಣೆ: ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಿ, ದಿನಕ್ಕೆ ₹240 ಕ್ಕೆ ಹೆಚ್ಚಿಸಿದೆ.
MNREGA ಅಡಿಯಲ್ಲಿ ಮಾಡಲಾದ ಕೆಲಸಗಳು ಯಾವುವು?
MNREGA ಅಡಿಯಲ್ಲಿ ರಸ್ತೆ ನಿರ್ಮಾಣ, ಜಲ ಸಂರಕ್ಷಣಾ ಚಟುವಟಿಕೆಗಳು, ಕೆರೆ ಅಗೆಯುವುದು, ತೋಟಗಾರಿಕೆ ಮತ್ತು ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ಶ್ರಮದಾಯಕ ಕೆಲಸಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಿದ್ದು, ಮಹಿಳೆಯರ ಭಾಗವಹಿಸುವಿಕೆಗೂ ಉತ್ತೇಜನ ನೀಡಿದೆ. ಕೇಂದ್ರದ ಈ ಹೊಸ ನಿರ್ಧಾರವು ಗ್ರಾಮೀಣ ಕಾರ್ಮಿಕರ ಆದಾಯ ಮತ್ತು ಜೀವನ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ.


