ಸನಾತನ ಧರ್ಮ ಸ್ವೀಕರಿಸಿದ ಮೊಹಮ್ಮದ್ ಶೆಹಝಾದ್ ಕುಟುಂಬ, ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯ, ಶೆಹಝಾದ್ ಈಗ ಶಂಕರ್ ಹಾಗೂ ಆತನ ಪತ್ನಿ ಸಾವಿತ್ರಿಯಾಗಿ ಹೆಸರು ಬದಲಾಯಿಸಿದ್ದಾರೆ. ಇವರ ಮೂವರು ಮಕ್ಕಳೂ ಹಿಂದೂ ಧರ್ಮ ಸ್ವೀಕರಿಸಿದ್ದಾರೆ.
ಹರಿದ್ವಾರ (ಏ.26) ಹರಿದ್ವಾರದ ಗಂಗೆ ತಟ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಮೊಹಮ್ಮದ್ ಶೆಹಝಾದ್, ಆತನ ಪತ್ನಿ ಹಾಗೂ ಮೂವರು ಮಕ್ಕಳು ಸನಾತನ ಧರ್ಮ ಸ್ವೀಕರಿಸಿದ್ದರು. ಶ್ರೀಗಳು, ಸ್ವಾಮೀಜಿಗಳು, ಸಂತರ ಸಮ್ಮುಖದಲ್ಲಿ ಮುಸ್ಲಿಂ ಕುಟುಂಬದ ಐವರು ಸದಸ್ಯರು ಹಿಂದೂ ಧರ್ಮ ಸ್ವೀಕರಿಸಿದರು. ಚಂಡಿ ಘಾಟ್ ಬಳಿ ಇರುವ ಬ್ರಹ್ಮಕುಂಡ ಘಾಟ್ನಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶೆಹಝಾದ್ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಹವನ, ಹೋಮ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಗಂಗಾ ನೀರು ಪ್ರೋಕ್ಷಣೆ ಮಾಡಲಾಗಿದೆ. ಹರಿದ್ವಾರದ ನಿವಾಸಿಯಾಗಿರುವ ಮೊಹಮ್ಮದ್ ಶೆಹಝಾದ್, ಹಿಂದೂ ಧರ್ಮದ ಮೇಲಿನ ಪ್ರೀತಿ, ಶಿವನ ಮೇಲಿನ ಭಕ್ತಿಯಿಂದ ಸನಾತನ ಧರ್ಮ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮ ಸ್ವೀಕರಿಸುವ ನಿರ್ಧಾರ ಬಹಿರಂಗವಾಗುತ್ತಿದ್ದಂತೆ ಸಮುದಾಯದ ಕೆಲವರು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಮೊಹಮ್ಮದ್ ಶೆಹಝಾದ್ ಈಗ ಶಂಕರ್
ವೈದಿಕ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಬಳಿಕ ಮೊಹಮ್ಮದ್ ಶೆಹಝಾದ್ ಶಂಕರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಈತನ ಪತ್ನಿ ಸಾವಿತ್ರಿ ಎಂದು ಹೆಸರು ಬದಲಾಯಿಸಿದ್ದಾರೆ. ಇತ್ತ ಇವರ ಮೂವರು ಮಕ್ಕಳು ಹಿಂದೂ ಧರ್ಮ ಸ್ವೀಕರಿಸಿ ಹೆಸರು ಬದಲಾಯಿಸಿದ್ದಾರೆ.
ಹಿಂದೂ ಧರ್ಮದ ಮೇಲೆ ಅತೀವ ನಂಬಿಕೆ, ಭಕ್ತಿ ಹಾಗೂ ಗೌರವವಿದೆ. ಶಿವನ ಭಕ್ತನಾಗಿದ್ದೇನೆ. ಇಡೀ ಕುಟುಂಬ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದೆ. ಇದೀಗ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಅತೀವ ಸಂಸತವಾಗುತ್ತಿದೆ ಎಂದು ಶಂಕರ್ ಹೇಳಿದ್ದಾರೆ.
ಶ್ರೀ ಕೃಷ್ಣ ಸನಾತನ ಸೇವಾ ಟ್ರಸ್ಟ್ ಸ್ವಾಮೀಜಿಗಳು, ಹರಿದ್ವಾರದ ಸಂತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಸಂತ ಅರುಣ ಕೃಷ್ಣ, ಇದು ಮತಾಂತರವಲ್ಲ. ಇವರ ಪೂರ್ವಜರು ಹಿಂದೂಗಳೇ ಆಗಿದ್ದರು. ಕಾರಣಾಂತರಗಳಿಂದ ಬೇರೆ ಧರ್ಮ ಅನುಸರಿಸುತ್ತಿದ್ದರು. ಇದೀಗ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಶಂಕರ್ ಕುಟುಂಬ ಕೆಲ ತಿಂಗಳ ಹಿಂದೆ ನಮ್ಮನ್ನು ಸಂಪರ್ಕಿಸಿತ್ತು. ಹಿಂದೂ ಧರ್ಮ ಸ್ವೀಕರಿಸುವುದಾಗಿ ಹೇಳಿತ್ತು. ಹೀಗೆ ಕೆಲವರು ತಕ್ಷಣದ ನಿರ್ಧಾರಕ್ಕೆ ಹೇಳುತ್ತಾರೆ. ಕೆಲ ದಿನಗಳ ಬಳಿಕ ಬದಲಾಗುತ್ತಾರೆ. ಹೀಗಾಗಿ ಮೊದಲು ಈ ರೀತಿಯ ಮನವಿ ಬಂದಾಗ ನಾವು ಹೆಚ್ಚಿನ ಆಸಕ್ತಿ ತೋರಲಿಲ್ಲ. ಕಾರಣ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರವಾಗಿರಬಹುದು. ಕೆಲ ದಿನಗಳ ಬಳಿಕ ಈ ನಿರ್ಧಾರ ಬದಲಾಗುವ ಸಾಧ್ಯತೆ ಇದೆ. ಆದರೆ ಶಂಕರ್ ಕುಟುಂಬಕ್ಕೆ ನಮ್ಮಿಂದ ಸ್ಪಂದನೆ ಸಿಗದಾಗ, ಕಚೇರಿಗೆ ಭೇಟಿ ನೀಡಿ ಮಾತನಾಡಿದ್ದರು. ಶಿವ ಹಾಗೂ ಹಿಂದೂ ಧರ್ಮದ ಮೇಲಿನ ನಂಬಿಕೆ ಕುರಿತು ಮನದಟ್ಟು ಮಾಡಿದ್ದರು. ಸ್ವಯಂಪ್ರೇರಿತರಾಗಿ ಶಂಕರ್ ಕುಟುಂಬ ನಮ್ಮನ್ನು ಸಂಪರ್ಕಿಸಿತ್ತು ಎಂದು ಅರುಣ ಕೃಷ್ಣ ಹೇಳಿದ್ದಾರೆ.


