ಮಗಳು ತಾನು ಪ್ರೀತಿಸಿದ ಹುಡುಗನ ಜೊತೆಗೆ ಓಡಿ ಹೋದ ನಂತರ ಕುಟುಂಬದವರು ಆಕೆ ನಮ್ಮ ಪಾಲಿಗೆ ಸತ್ತು ಹೋದಳು ಎಂದು ಘೋಷಣೆ ಮಾಡಿ ಆಕೆಯ ಪ್ರತಿಕೃತಿಯನ್ನು ತಯಾರಿಸಿ ಊರಿನ ರಸ್ತೆಗಳಲೆಲ್ಲಾ ನಕಲಿ ಶವಯಾತ್ರೆ ನಡೆಸಿ ಅಂತಿಮವಾಗಿ ಅಂತ್ಯಸಂಸ್ಕಾರ ನಡೆಸಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.

ಮಗಳು ತಾನು ಪ್ರೀತಿಸಿದ ಹುಡುಗನ ಜೊತೆಗೆ ಓಡಿ ಹೋದ ನಂತರ ಕುಟುಂಬದವರು ಆಕೆ ನಮ್ಮ ಪಾಲಿಗೆ ಸತ್ತು ಹೋದಳು ಎಂದು ಘೋಷಣೆ ಮಾಡಿ ಆಕೆಯ ಪ್ರತಿಕೃತಿಯನ್ನು ತಯಾರಿಸಿ ಊರಿನ ರಸ್ತೆಗಳಲೆಲ್ಲಾ ನಕಲಿ ಶವಯಾತ್ರೆ ನಡೆಸಿ ಅಂತಿಮವಾಗಿ ಅಂತ್ಯಸಂಸ್ಕಾರ ನಡೆಸಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ. ಮಗಳ ನಿರ್ಧಾರವನ್ನು ಅರಗಿಸಿಕೊಳ್ಳಲಾಗದ ಪೋಷಕರು ಆಕೆ ತಮ್ಮ ಪಾಲಿಗೆ ಸತ್ತಿದ್ದಾಳೆ ಎಂದು ಭಾವಿಸಿ ಆಕೆಗೆ ಅಂತ್ಯಸಂಸ್ಕಾರ ನಡೆಸಿದ್ದಾರೆ.

ವಿದಿಶಾದ ಛುನಾ ವಾಲಿಗಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆ ಮಗಳು ಕವಿತಾ ಕುಶ್ವಾಹ್ ಎಂಬ 23ರ ಹರೆಯದ ಯುವತಿ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಮಗಳ ನಾಪತ್ತೆ ಹಿನ್ನೆಲೆ ಕುಟುಂಬದವರು ಎಲ್ಲಾ ಕಡೆ ಆಕೆಗಾಗಿ ಹುಡುಕಾಟ ನಡೆಸಿದರು. ಆದರೆ ಆಕೆ ಸಿಗದೇ ಹೋದಾಗ ಪೊಲೀಸರಿಗೂ ದೂರು ನೀಡಿದರು. ಆದರೆ ಆಕೆ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಕೆಲ ದಿನಗಳ ನಂತರ ಆ ಕುಟುಂಬಕ್ಕೆ, ತಮ್ಮ ಮಗಳು ಹುಡುಗನೋರ್ವನೊಂದಿಗೆ ಓಡಿ ಹೋಗಿರುವುದು ತಿಳಿದು ಬಂತು. ಅಲ್ಲದೇ ಆಕೆ ಆತನೊಂದಿಗೆ ರಹಸ್ಯವಾಗಿ ಮದುವೆಯಾದ ವಿಚಾರವೂ ಅವರಿಗೆ ತಿಳಿಯಿತು. ಮಗಳು ಓಡಿ ಹೋಗಿದ್ದರಿಂದ ಅವಮಾನಿತರಾದ ಕುಟುಂಬದವರು ಕೆಲ ದಿನ ಮನೆಯೊಳಗಿನಿಂದ ಹೊರಗೆ ಬಂದಿಲ್ಲ, ಜೊತೆಗೆ ಈ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಅವರು ಕಷ್ಟಪಡುತ್ತಿದ್ದರು.

ಇದನ್ನೂ ಓದಿ: ತಪ್ಪಾಗಿ ಹೊಟೇಲ್ ಕೋಣೆಯ ಬಾಗಿಲು ಬಡಿದವಳ ಹರಿದು ಮುಕ್ಕಿದ ಕಾಮುಕರು

ವಿಚಾರ ತಿಳಿದ ಸಂಬಂಧಿಕರು ಕುಶ್ವಾಹ್ ಕುಟುಂಬವನ್ನು ಸಂಪರ್ಕಿಸಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರು ಜೊತೆಗೆ ಅವರಿಗೆ ಭಾವನಾತ್ಮಕ ಬೆಂಬಲ ನೀಡಲು ಪ್ರಯತ್ನಿಸಿದರು. ಆದರೆ ಇದರಿಂದ ಸಮಾಧಾನಗೊಳ್ಳದ ಕುಟುಂಬ ಸದಸ್ಯರು ಕವಿತಾ ತಮ್ಮ ಪಾಲಿಗೆ ಸತ್ತಿದ್ದಾಳೆ ಎಂದು ಅಂದುಕೊಂಡು ಅವರಿಗೆ ಆಕೆಗೆ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು. ನಂತರ ಕುಶ್ವಾಹ್ ಕುಟುಂಬದವರು ನೆಂಟರು ಸಂಬಂಧಿಕರನ್ನು ಮನೆಗೆ ಕರೆಸಿದ್ದಾರೆ. ಬಳಿಕ ಗೋಧಿ ಹಿಟ್ಟು ಬಳಸಿ ಕವಿತಾಳ ಒಂದು ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಅದನ್ನು ಅಲಂಕರಿಸಿದ್ದ ಬಿದಿರಿನ ಚಟ್ಟದ(ಹೆಣ ಹೊರುವುದಕ್ಕೆ ಬಳಸುವ ಬಿದಿರಿನ ವಸ್ತು) ಮೇಲಿಟ್ಟಿದ್ದಾರೆ.

ನಂತರ ಸಂಗೀತ ಹಾಗೂ ವಾದ್ಯದವರನ್ನು ಕರೆಸಿ ಊರಿನಲ್ಲಿ ಈ ನಕಲಿ ಶವಯಾತ್ರೆ ನಡೆಸಿದ್ದಾರೆ. ನಗರದ ವಿವಿಧ ಸರ್ಕಲ್‌ಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಸ್ಮಶಾನಕ್ಕೆ ಕರೆತಂದಿದ್ದಾರೆ. ಅಲ್ಲಿ ಕುಟುಂಬದವರು ಮಗಳನ್ನು ಸುಡುವುದಕ್ಕೆ ಕಾಟವನ್ನು ನಿರ್ಮಿಸಿದ್ದರು. ಅಲ್ಲಿ ಓರ್ವ ವ್ಯಕ್ತಿಗೆ ಸಾವಿನ ನಂತರ ಮಾಡಬಹುದಾದ ಎಲ್ಲಾ ಸಂಪ್ರದಾಯಗಳನ್ನು ಮಾಡಲಾಗಿದೆ. ನಂತರ ಕವಿತಾಳ ಪ್ರತಿಕೃತಿಗೆ ಬೆಂಕಿ ಹಚ್ಚಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ: ಪ್ರೀತಿಯ ಶ್ವಾನದ ಸಾವಿನ ದುಃಖದಿಂದ ಹೊರಬರಲಾಗದೇ ಸಾವಿಗೆ ಶರಣಾದ ಗಾಯಕಿ

ಘಟನೆಗೆ ಸಂಬಂಧಿಸಿದಂತೆ ಕವಿತಾಳ ಸೋದರ ರಾಜೇಶ್ ಕುಶ್ವಾಹ್ ಪ್ರತಿಕ್ರಿಯಿಸಿದ್ದು, ಆಕೆಯನ್ನು ಕುಟುಂಬದವರು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಆಕೆ ಬಹಳ ಆಶಾಭಾವವನ್ನು ಹೊಂದಿದ್ದ ಭರವಸೆಯ ಸುಶಿಕ್ಷಿತಳಾಗಿದ್ದಳು. ಆಕೆಯ ಎಲ್ಲಾ ಆಸೆಗಳನ್ನು ಕುಟುಂಬದವರು ಬಹಳ ಪ್ರೀತಿಯಿಂದ ಈಡೇರಿಸುತ್ತಿದ್ದರು. ಆದರೆ ಆಕೆ ಕುಟುಂಬವನ್ನು ತೊರೆಯುವ ಮೂಲಕ ನಮ್ಮೆಲ್ಲಾ ಕನಸುಗಳನ್ನು ಧ್ವಂಸ ಮಾಡಿದ್ದಾಳೆ. ಆಕೆಯ ಮೇಲೆ ಕುಟುಂಬದವರಿಗೆ ಇದ್ದ ಆಸೆಯನ್ನು ಕೊನೆಗೊಳಿಸುವುದಕ್ಕಾಗಿ ಈ ಅಂತ್ಯಸಂಸ್ಕಾರವನ್ನು ಮಾಡಲಾಗಿದೆ ಎಂದು ರಾಜೇಶ್ ಕುಶ್ವಾಹ್ ಹೇಳಿದ್ದಾರೆ.

ಯುವತಿ ಕವಿತಾ ಕುಶ್ವಾಹ್ ಅವರ ತಂದೆ ಈ ಘಟನೆಯನ್ನು ಜೀವನದ ಅತ್ಯಂತ ದುಃಖದ ಕ್ಷಣ ಎಂದು ಕರೆದಿದ್ದಾರೆ. ಕವಿತಾ ತಮದೆ ರಂಬಾಬು ಕುಶ್ವಾಹ ಕಣ್ಣೀರು ಹಾಕುತ್ತಾ ಮಾತನಾಡಿದ್ದು, ತಮ್ಮ ಮಗಳ ನಿರ್ಧಾರದಿಂದ ಇಡೀ ಕುಟುಂಬವು ಸಂಪೂರ್ಣವಾಗಿ ಮುರಿದುಹೋಗಿದೆ. ಇದು ತಮ್ಮ ಜೀವನದ ಅತ್ಯಂತ ನೋವಿನ ಕ್ಷಣ ಎಂದು ಹೇಳಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ಆಕೆ ಒಳ್ಳೆಯ ನಿರ್ಧಾರ ಮಾಡಿದಳು ಎಂದರೆ ಇನ್ನೂ ಕೆಲವರು ಸದ್ಯ ಸಾಯಿಸಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.