ಮುಂಬೈನ ವರ್ಲಿಯಲ್ಲಿ ರಾಜಕೀಯ ರ್‍ಯಾಲಿಯಿಂದಾದ ಭಾರಿ ಟ್ರಾಫಿಕ್ ಜಾಮ್‌ನಿಂದ ಕೋಪಗೊಂಡ ಮಹಿಳೆಯೊಬ್ಬರು, ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ಪ್ರಶ್ನಿಸಿದ್ದಾರೆ.

ಮುಂಬೈ (ಏ.22): ರಾಜಕೀಯ ರ್‍ಯಾಲಿಯಿಂದಾಗಿ ಉಂಟಾದ ಭಾರಿ ಟ್ರಾಫಿಕ್ ಜಾಮ್‌ನಿಂದ ಆಕ್ರೋಶಗೊಂಡ ಮಹಿಳೆಯೊಬ್ಬರು, ಕಾರಿನಿಂದ ಕೆಳಗಿಳಿದು ಬಂದು ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಮುಂಬೈನ ವರ್ಲಿಯಲ್ಲಿ ನಡೆದಿದೆ. ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾದ ಬಿಜೆಪಿ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಿಂದಾಗಿ ರಸ್ತೆಯಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಇದೇ ವೇಳೆ ತನ್ನ ಮಗುವನ್ನು ಶಾಲೆಯಿಂದ ಕರೆತರಲು ಹೋಗುತ್ತಿದ್ದ ಮಹಿಳೆಯೊಬ್ಬರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಅವರು, ನೇರವಾಗಿ ಮೆರವಣಿಗೆಯ ಮಧ್ಯಕ್ಕೆ ನುಗ್ಗಿ ಸಚಿವ ಗಿರೀಶ್ ಮಹಾಜನ್ ಅವರನ್ನೆ ಪ್ರಶ್ನಿಸಿದರು.

ಮಹಿಳೆಯ ಆಕ್ರೋಶದ ನುಡಿಗಳು

"ಇಲ್ಲಿಂದ ಹೊರಡಿ, ನೀವು ಟ್ರಾಫಿಕ್ ಜಾಮ್ ಮಾಡುತ್ತಿದ್ದೀರಿ. ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇ ಯಾಕೆ ರ್‍ಯಾಲಿ ಮಾಡುತ್ತಿದ್ದೀರಿ? ನಿಮಗೆ ಅರ್ಥವಾಗುತ್ತಿಲ್ಲವೇ? ನೂರಾರು ಜನ ಇಲ್ಲಿ ಕಾಯುತ್ತಿದ್ದಾರೆ," ಎಂದು ಮಹಿಳೆ ಪೊಲೀಸರು ಮತ್ತು ಸಚಿವರ ಮೇಲೆ ಕಿರುಚಾಡಿದರು. ಪೊಲೀಸರು ಸಮಾಧಾನಪಡಿಸಲು ಯತ್ನಿಸಿದಾಗ, ಹಿರಿಯ ಅಧಿಕಾರಿಗಳನ್ನೇ ಕರೆಯುವಂತೆ ಪಟ್ಟು ಹಿಡಿದರು. ಈ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸಚಿವ ಗಿರೀಶ್ ಮಹಾಜನ್ ಪ್ರತಿಕ್ರಿಯೆ

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮಹಾಜನ್, "ಆ ಮಹಿಳೆ ಪ್ರತಿಭಟನಾಕಾರರ ಮೇಲೆ ನೀರಿನ ಬಾಟಲಿ ಎಸೆದರು ಮತ್ತು ಕೆಟ್ಟ ಭಾಷೆ ಬಳಸಿದರು. ನಾಗರಿಕ ಭಾಷೆಯಲ್ಲಿ ಮಾತನಾಡಬಹುದಿತ್ತು. ಪ್ರತಿಭಟನೆಯಿಂದ ಟ್ರಾಫಿಕ್ ಆಗುವುದು ನಿಜ, ಆದರೆ ನಾವು ಮಹಿಳೆಯರ ಹಕ್ಕುಗಳಿಗಾಗಿ ಈ ಪ್ರತಿಭಟನೆ ನಡೆಸುತ್ತಿದ್ದೆವು. ಅವರ ಸಿಟ್ಟು ಅತಿಯಾಗಿತ್ತು. ಆದರೂ ಜನರಿಗೆ ಆದ ತೊಂದರೆಗೆ ನಾನು ಕ್ಷಮೆ ಯಾಚಿಸುತ್ತೇನೆ," ಎಂದಿದ್ದಾರೆ. ಅಲ್ಲದೆ ಆಕೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳ ವಾಗ್ದಾಳಿ

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಈ ವಿಡಿಯೋ ಹಂಚಿಕೊಂಡು, "ಬಿಜೆಪಿ ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಹಿಳೆಯರನ್ನೇ ವಂಚಿಸುತ್ತಿದೆ," ಎಂದು ಟೀಕಿಸಿದ್ದಾರೆ. ಮಾಜಿ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು, "ಇದು ಬಿಜೆಪಿ ನಡೆಸುತ್ತಿರುವ ನಾಟಕ, ಮಹಿಳೆಯ ಈ ಪ್ರತಿಕ್ರಿಯೆ ಸಾರ್ವಜನಿಕರ ಆಕ್ರೋಶದ ಪ್ರತಿಬಿಂಬ," ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ

"ಪೊಲೀಸರು ಏನು ಮಾಡುತ್ತಿದ್ದರು? ಇಂತಹ ಪ್ರತಿಭಟನೆಗಳಿಗೆ ಅನುಮತಿ ನೀಡಿದ್ದು ಹೇಗೆ? ಈ ಮಹಿಳೆಯ ಧೈರ್ಯ ಮೆಚ್ಚುವಂತದ್ದು," ಎಂದು ಹಲವರು ಬೆಂಬಲಿಸಿದ್ದಾರೆ. "ಆಕೆ ರಸ್ತೆಯಲ್ಲಿ ಕಸ ಎಸೆದು, ಕೆಟ್ಟ ಭಾಷೆ ಬಳಸಿದ್ದು ತಪ್ಪು. ಇಂತಹ ವರ್ತನೆಯನ್ನು ಹೀರೋಯಿಸಂ ಎನ್ನಲಾಗದು," ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡದ ವಿರೋಧ ಪಕ್ಷಗಳ (ಮಹಾವಿಕಾಸ ಅಘಾಡಿ) ವಿರುದ್ಧ ಬಿಜೆಪಿ ಈ 'ಜನ ಆಕ್ರೋಶ' ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

Scroll to load tweet…