baby delivery on train: ಮುಂಬೈ ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಯುವಕನೋರ್ವ ಹೆರಿಗೆ ಮಾಡಿಸಿದ್ದಾರೆ. ಅವರ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಂತಹ ಘಟನೆ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ನಂತರ ಅಲ್ಲಿ ಸೇರಿದವರೆಲ್ಲರೂ ಸೇರಿ ಯುವಕನನ್ನು ಶ್ಲಾಘಿಸುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಅನೇಕರು ಯುವಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಹೇಳಿದ್ದಾರೆ.

ಹೌದು ಯುವಕನೋರ್ವನ ಸಮಯಪ್ರಜ್ಞೆ ಎರಡು ಅಮೂಲ್ಯ ಜೀವಗಳನ್ನು ಉಳಿಸಿದೆ. ಮುಂಬೈನ ರಾಮ ಮಂದಿರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡೆಯುವ ವೇಳೆ ಅಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದವರು ಈ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ವೀಡಿಯೋ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಮಂಜಿತ್ ಧಿಲ್ಲನ್ ಎಂಬುವವರೇ ಮಹಿಳೆಯೊಬ್ಬರಿಗೆ ಸಹಜ ಹೆರಿಗೆಯಾಗುವುದಕ್ಕೆ ಸಹಾಯ ಮಾಡಿದ ಯುವಕ.

ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ

ಮಂಜಿತ್ ಧಿಲ್ಲನ್ ಅವರು ಆ ಮಹಿಳೆ ಹೆರಿಗೆ ನೋವಿನಿಂದ ಕಷ್ಟಪಡುತ್ತಿರುವುದನ್ನು ಗಮನಿಸಿ ಕೂಡಲೇ ರೈಲಿನ ಎಮರ್ಜೆನ್ಸಿ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಇವರ ಕಾರ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ವ್ಯಕ್ತಿನಿಜವಾಗಿಯೂ ಧೈರ್ಯವಂತ, ಆತನನ್ನು ವಿವರಿಸುವುದಕ್ಕೆ ಪದಗಳು ಇಲ್ಲ, ಇದೆಲ್ಲವೂ ರಾಮ ಮಂದಿರ ರೈಲು ನಿಲ್ದಾಣದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ನಡೆಯಿತು. ಆತ ರೈಲು ನಿಲ್ಲುವುದಕ್ಕಾಗಿ ರೈಲಿನ ಚೈನ್ ಎಳೆದ, ನನಗೆ ಇದನ್ನೂ ಹೇಳುವಾಗ ಈಗಲೂ ನಡುಕ ಆಗುತ್ತಿದೆ. ಮಹಿಳೆಯ ಮಗು ಅರ್ಧ ಹೊರಗೆ ಬಂದಿತ್ತು, ಅರ್ಧ ಒಳಗಿತ್ತು. ಈ ಅತ್ಯಂತ ಕಷ್ಟಕರವಾದ ಈ ಸಮಯದಲ್ಲಿ ದೇವರೇ ಈ ಸಹೋದರನನ್ನು ಅಲ್ಲಿಗೆ ಕಳುಹಿಸಿದನೆನಿಸುತ್ತದೆ ಎಂದು ಅವರು ಬರೆದಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಮಂಜಿತ್ ಧಿಲ್ಲೊನ್, ಇದನ್ನೂ ನಾನು ಜೀವನದಲ್ಲಿ ಮೊದಲ ಬಾರಿಗೆ ಮಾಡಿದೆ. ನಾನು ತುಂಬಾ ಭಯಗೊಂಡಿದ್ದೆ. ಆದರೆ ಮ್ಯಾಡಂ ನನಗೆ ವೀಡಿಯೋ ಕಾಲ್‌ನಲ್ಲಿ ಮಾರ್ಗದರ್ಶನ ನೀಡಿ ಸಹಾಯ ಮಾಡಿದರು ಎಂದು ಅವರು ಹೇಳುವುದನ್ನು ಕೇಳಬಹುದು.

ವೀಡಿಯೋ ಕಾಲ್ ಮೂಲಕ ಮಾರ್ಗದರ್ಶನ ಪಡೆದು ಹೆರಿಗೆ ಮಾಡಿಸಿದ ಯುವಕ

ವೈರಲ್ ಆದ ಪೋಸ್ಟ್ ಪ್ರಕಾರ ವೈದ್ಯರೊಬ್ಬರ ಮಾರ್ಗದರ್ಶನವನ್ನೂ ವೀಡಿಯೋ ಕಾಲ್ ಮೂಲಕ ಪಡೆದು ಈ ಯುವಕ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ. ನಾವು ನಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡಿದೆವು, ನಾವು ಹಲವು ವೈದ್ಯರಿಗೆ ಕರೆ ಮಾಡಿದೆವು, ಆದರೆ ಆಂಬುಲೆನ್ಸ್ ಬರುವುದಕ್ಕೆ ತುಂಬಾ ಸಮಯ ಹಿಡಿಯಿತು. ಕೊನೆಗೆ ಮಹಿಳಾ ವೈದ್ಯರು ಆತನಿಗೆ ವೀಡಿಯೋ ಕಾಲ್ ಮೂಲಕ ಮಾರ್ಗದರ್ಶನ ನೀಡಿದರು. ಹಾಗೂ ಆಕೆ ಏನು ಹೇಳಿದರೋ ಅದನ್ನೇ ಕರೆಕ್ಟಾಗಿ ಈ ಯುವಕ ಫಾಲೋ ಮಾಡಿದರು. ಆ ಕ್ಷಣದಲ್ಲಿ ಆತನ ಧೈರ್ಯ ಪದಗಳಿಗೆ ನಿಲುಕದ್ದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವ ಮೊದಲು ಮಹಿಳೆಯ ಕುಟುಂಬದವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅವರನ್ನು ಈಗ ಹೆರಿಗೆ ಆಗದು ಎಂದು ಹಿಂದಕ್ಕೆ ಕಳುಹಿಸಲಾಯಿತು, ಇದರಿಂದಾಗಿ ಅವರು ರೈಲಿನಲ್ಲಿ ಹಿಂತಿರುಗಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ತಾಯಿಗೆ ಸಹಾಯ ಮಾಡಲು ಆಸ್ಪತ್ರೆ ನಿರಾಕರಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಆ ರಾತ್ರಿ, ಈ ಯುವಕ ಈ ಎರಡು ಜೀವಗಳನ್ನು ಉಳಿಸಲು ಕಾರಣನಾದ. ಅವನು ತಾಯಿ ಮತ್ತು ಮಗುವಿನ ಜೀವಗಳನ್ನು ಉಳಿಸಿದ. ಮತ್ತು ನಾವು ಒಟ್ಟಾಗಿ ಅವಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದೆವು. ನಾನು ಈಗ ಏನನ್ನು ಅನುಭವಿಸುತ್ತಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಹ ಸಾಧ್ಯವಿಲ್ಲ ಎಂದು ಪ್ರತ್ಯಕ್ಷದರ್ಶಿ ಬರೆದಿದ್ದಾರೆ. ಈ ಪೋಸ್ಟ್ ನೋಡಿದ ಅನೇಕರು ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಇವರೊಬ್ಬ ಸಮವಸ್ತ್ರದಲ್ಲಿರದ ನಿಜವಾದ ಹೀರೋ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಕ್ಯಾನ್ಸರೇ ಗೆದ್ದುಬಿಡ್ತು... ಕ್ಯಾನ್ಸರ್ ಪೀಡಿತ 21ರ ಹರೆಯದ ಯುವಕನ ವಿದಾಯದ ಪೋಸ್ಟ್ ಭಾರಿ ವೈರಲ್
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸ್ಪೂನ್ ಬಳಸಿ ಸಮೋಸಾ ತಿನ್ನೋದು ಹೇಗೆ ಎಂದು ಹೇಳಿಕೊಟ್ಟ ಕೋಚ್‌ ಸಖತ್ ಟ್ರೋಲ್

View post on Instagram