1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್‌ಪತಿ ದೀದಿ, ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಭರವಸೆ ನೀಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಣಾಳಿಕೆಯಲ್ಲಿ ಏನಿದೆ?
ನವದೆಹಲಿ (ಅ.31) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಬ್ಬರ ಪ್ರಚಾರಗಳು ನಡೆಯುತ್ತಿದೆ. ಎನ್‌ಡಿಎ ತನ್ನ ಅಧಿಕಾರ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಇಂಡಿಯಾ ಒಕ್ಕೂಟದ ಮಹಾಘಟಬಂಧನ ಅಧಿಕಾರಕ್ಕೇರುವ ಪ್ರಯತ್ನದಲ್ಲಿದೆ. ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಇತ್ತೀಚೆಗೆ ಪ್ರಣಾಳಿಕೆ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ ಮಾಡಿದೆ. 1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್‌ಪತಿ ದೀದಿ ಯೋಜನೆಗಳ ಭರವಸೆಯನ್ನು ನೀಡಲಾಗಿದೆ.
ಎನ್‌ಡಿಎ ಪ್ರಣಾಳಿಕೆಯಲ್ಲಿ ಏನಿದೆ?
ಎನ್‌ಡಿಎ ಬಿಡುಗಡೆ ಮಾಡಿದ ಪ್ರಣಾಳಿಕೆಯ ಪ್ರಮುಖ ಅಂಶ 1 ಕೋಟಿ ಸರ್ಕಾರಿ ಉದ್ಯೋಗ. ಇದಕ್ಕಾಗಿ ಆರ್ಥಿಕ ನೆರವನ್ನೂ, ಆರ್ಥಿಕ ಸಂಪಲನ್ಮೂಲಗಳ ಕುರಿತು ಹೇಳಿದೆ. 1 ಕೋಟಿ ಸರ್ಕಾರಿ ಹುದ್ದೆ ಹಾಗೂ ನೇಮಕಾತಿ ನಡೆಯಲಿದೆ ಎಂದಿದೆ. ಇದೇ ವೇಳೆ ಮಹಿಳಾ ಸಬಲೀಕರಣಕ್ಕಾಗಿ ಲಕ್‌ಪತಿ ದೀದಿ ಯೋಜನೆಯನ್ನು 1 ಕೋಟಿ ಮಂದಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ, ಇಂಡಿಯಾ ನೇರಾನೇರ ಸ್ಪರ್ಧೆ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ನಡುವೇ ನೇರ ಸ್ಪರ್ಧೆ ಇದೆ. ಎನ್‌ಡಿಎ ಮೈತ್ರಿಯಲ್ಲಿ ಬಿಜೆಪಿ, ಲೋಕ್ ಜನಶಕ್ತಿ ಪಾರ್ಟಿ (ರಾಮ ವಿಲಾಸ್), ಹಿಂದುಸ್ತಾನಿ ಆವಾಮ್ ಮೋರ್ಚಾ, ರಾಷ್ಟ್ರೀಯ ಲೋಕಮೋರ್ಚಾ ಪಕ್ಷಗಳಿವೆ. ಇನ್ನು ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ಮೈತ್ರಿಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್, ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್), ಕಮ್ಯೂನಿಸ್ಟ್ (ಸಿಪಿಐ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಎಂ), ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ಮುಕೇಶ್ ಸಹಾನಿ) ಪಾರ್ಟಿಗಳು ಮೈತ್ರಿಯಾಗಿ ಬಿಹಾರ ಚುನಾವಣೆಗೆ ಸ್ಪರ್ಧಿಸುತ್ತಿದೆ.
ಪ್ರಶಾಂತ್ ಕಿಶೋರ್ ಜನ ಸುರಾಜ್ ಹೋರಾಟ
ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಹೋರಾಟದ ನಡುವೆ ಈ ಬಾರಿ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ ಮೇಲೆ ಭರವಸೆಗಳು ಮೂಡಿದೆ. 242 ಕ್ಷೇತ್ರದಲ್ಲಿ ಜನಸುರಾಜ್ ಪಾರ್ಟಿ ಸ್ಪರ್ಧಿಸುತ್ತಿದೆ. ಹೀಗಾಗಿ ಈ ಬಾರಿ ಫಲಿತಾಂಶ ತೀವ್ರ ಕುತೂಹಲ ಕೆರಳಿಸಲಿದೆ. ಕಾರಣ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಹಲವು ಅಭ್ಯರ್ಥಿಗಳ ಮತಗಳನ್ನು ಜನ ಸುರಾಜ್ ಪಾರ್ಟಿ ಕಸಿದುಕೊಳ್ಳಲಿದೆ. ಹೀಗಾಗಿ ಗೆಲುವು ಯಾರಿಗೆ ಅನ್ನೋ ಕೂಹಲ ಕೊನೆಯ ಮತ ಎಣಿಕೆವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ.
ಎರಡು ಹಂತದಲ್ಲಿ ಮತದಾನ
ಬಿಹಾರ ವಿಧಾನಸಭೆ ಚುನಾವಣೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ನವೆಂಬರ್ 6ರಂದು ಮತದಾನ ನಡೆಯಲಿದೆ. ಇನ್ನು ನವೆಂಬರ್ 11ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಘೋಷಣೆಯಾಗಲಿದೆ.


