ಪವಿತ್ರ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಚ್ಚಿ: ಪವಿತ್ರ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ದೇವಾಲಯದಿಂದ ನಾಪತ್ತೆಯಾಗಿರುವ ಚಿನ್ನ ವಿವಿಧ ರಾಜ್ಯಗಳಲ್ಲಿ ಹಂಚಿಕೆಯಾಗಿದೆ ಎಂದು ವರದಿಯಾಗಿದೆ. ಕೇರಳದ ಹೊರಗಿನ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಹ ಇದರಲ್ಲಿ ಭಾಗಿಯಾಗಿವೆ. ಅಪರಾಧವು ರಾಜ್ಯದ ಗಡಿ ಮೀರಿ ವಿಸ್ತರಿಸಿರುವುದರಿಂದ ಕೇರಳ ಪೊಲೀಸರ ಎಸ್‌ಐಟಿ ತನಿಖೆ ಪರಿಣಾಮಕಾರಿ ಆಗದು. ಆದ್ದರಿಂದ ಸಿಬಿಐನಿಂದ ಮಾತ್ರ ಸಮಗ್ರ ತನಿಖೆ ಸಾಧ್ಯ’ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಓರ್ವ ಸೇರಿ 6 ಜನರನ್ನು ಎಸ್ಐಟಿ ಬಂಧಿಸಿದೆ.
ಶಬರಿಮಲೆ ದೇಗುಲ ಹುಂಡಿಗೆ 15 ದಿನದಲ್ಲಿ 92 ಕೋಟಿ ರು. ಸಂಗ್ರಹ
ಶಬರಿಮಲೆ: ಇಲ್ಲಿನ ಪ್ರಸಿದ್ಧ ಅಯ್ಯಪ್ಪನ ದೇಗುಲದ ಬೊಕ್ಕಸಕ್ಕೆ ಪ್ರಸಕ್ತ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲಿ 92 ಕೋಟಿ ರು. ಹರಿದುಬಂದಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ 23 ಕೋಟಿ ರು. ಅಧಿಕ.
ಕಳೆದ ವರ್ಷ ದೇಗುಲಕ್ಕೆ ಈ ಅವಧಿಯಲ್ಲಿ 69 ಕೋಟಿ ರು.ಆದಾಯ ಬಂದಿತ್ತು. ಈ ಸಲ ಶೇ.33ರಷ್ಟು ಹೆಚ್ಚಳದೊಂದಿಗೆ 92 ಕೋಟಿ ರು. ಸಂಗ್ರಹವಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.ಅದರಲ್ಲಿ 47 ಕೋಟಿ ರು. ಅರಾವಣ (ಶಬರಿಮಲೆ ಪ್ರಸಾದ) ಮಾರಾಟದಿಂದ ಸಂಗ್ರಹವಾಗಿದೆ. ಕಳೆದ ಬಾರಿ ಇದು 32 ಕೋಟಿ ರು.ಗಳಷ್ಟಿತ್ತು. ಮತ್ತೊಂದೆಡೆ ಅಪ್ಪಂ ಪ್ರಸಾದದಿಂದ 3.5 ಕೋಟಿ ರು. ಹಾಗೂ ಹುಂಡಿ ಕಾಣಿಕೆಯಿಂದ 26 ಕೋಟಿ ರು. ಸಂಗ್ರಹವಾಗಿದೆ.
ಮಂಡಲಯಾತ್ರೆ ಆರಂಭವಾದ ದಿನದಿಂದ ನ.30ರವರೆಗೆ 13 ಲಕ್ಷ ಯಾತ್ರಿಕರು ಭೇಟಿ ನೀಡಿದ್ದಾರೆ.
ಲೈಂ*ಕ ಹಗರಣ: ಕೇರಳ ಸಾಮಾಜಿಕ ಕಾರ್ಯಕರ್ತ ಈಶ್ವರ್ ಬಂಧನ
ತಿರುವನಂತಪುರಂ: ಕೇರಳದ ಅಮಾನತಾಗಿರುವ ಕಾಂಗ್ರೆಸ್ ಶಾಸಕ ರಾಹುಲ್ ಮಾಮ್‌ಕೂಟತಿಲ್ ಅವರ ವಿರುದ್ಧ ಲೈಂ*ಕ ಕಿರುಕುಳ ದೂರು ದಾಖಲಿಸಿದ್ದ ಮಹಿಳೆಯನ್ನು ಅವಮಾನಿಸಿದ ಆರೋಪದ ಮೇಲೆ, ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಅವರನ್ನು ಬಂಧಿಸಲಾಗಿದೆ. ‘ಟೀವಿ ಚಾನೆಲ್‌ಗಳ ಡಿಬೇಟ್‌ಗಳಲ್ಲಿ ರಾಹುಲ್ ಈಶ್ವರ್ ಅವರು ನನ್ನ ಬಗ್ಗೆ ತುಚ್ಛವಾಗಿ ಮಾತನಾಡಿದ್ದು, ಯೂಟ್ಯೂಬ್ ಚಾನೆಲ್‌ನಲ್ಲೂ ಬೈದಿದ್ದಾರೆ. ನನ್ನ ಫೋಟೋ ಬಹಿರಂಗ ಮಾಡಿದ್ದಾರೆ’ ಎಂದು ಖುದ್ದು ಮಹಿಳೆಯೇ ದೂರು ನೀಡಿದ್ದರು. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿದ್ದು, ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬಿಜೆಪಿ-ಶಿವಸೇನೆ ಒಡಕು: ಶಿಂಧೆ ವಿರುದ್ಧ ಸಚಿವ ರಾಣೆ ವಾಗ್ದಾಳಿ
ಪಿಟಿಐ ಮುಂಬೈಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಿತ್ರಪಕ್ಷಗಳಾದರೂ ಬಿಜೆಪಿ ಹಾಗೂ ಶಿವಸೇನೆ (ಶಿಂಧೆ ಬಣ) ಪರಸ್ಪರ ತಮ್ಮದೇ ನಾಯಕರನ್ನು ತಮ್ಮ ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಕಚ್ಚಾಡಿಕೊಳ್ಳುತ್ತಿವೆ. ಇದರ ನಡುವೆ, ಸೇನಾ ನಾಯಕ ಹಾಗೂ ಡಿಸಿಎಂ ಏಕನಾಥ ಶಿಂಧೆ ವಿರುದ್ಧ ಬಿಜೆಪಿ ಮುಖಂಡರೂ ಆದ ಸಚಿವ ನಿತೇಶ್ ರಾಣೆ ಕಿಡಿಕಾರಿದ್ದು, ಎರಡೂ ಪಕ್ಷಗಳ ನಡುವೆ ಬಾಂಧವ್ಯ ಸರಿಯಿಲ್ಲ ಎಂದು ಸಾಬೀತುಪಡಿಸಿದ್ದಾರೆ.
ಸೋಮವಾರ ಮಾತನಾಡಿದ ರಾಣೆ, ‘ಸಿಂಧುದುರ್ಗದಲ್ಲಿ ಪ್ರತಿಸ್ಪರ್ಧಿ ಸೇನಾ (ಯುಬಿಟಿ) ಅಭ್ಯರ್ಥಿ ಪರ ಶಿಂಧೆ ಸೇನಾ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಶಿಂಧೆ ಅವರ ನಿಯತ್ತಿನ ಬಗ್ಗೆ ಪ್ರಶ್ನೆ ಎತ್ತಿದೆ. ಉದ್ಧವ್ ಠಾಕ್ರೆ ವಿರುದ್ಧ ನಿಜವಾಗಿಯೂ ಶಿಂಧೆ ಬಂಡೆದ್ದು ಹೊರಬಂದರೆ ಎಂಬ ಅನುಮಾನ ಮೂಡಿದೆ’ ಎಂದರು.
ತಮಿಳ್ನಾಡಲ್ಲಿ ದಿತ್ವಾ ಅಬ್ಬರ ಕೊಂಚ ಇಳಿಕೆ: ಆದರೂ ಮಳೆ
ಚೆನ್ನೈ: ತಮಿಳುನಾಡಿನಲ್ಲಿ ಮೂವರ ಬಲಿಪಡೆದ ದಿತ್ವಾ ಚಂಡಮಾರುತದ ಪ್ರಭಾವ ಕೊಂಚ ತಗ್ಗಿದೆ. ಆದರೂ ರಾಜಧಾನಿ ಚೆನ್ನೈ ಸೇರಿದಂತೆ ಅನೇಕ ಕಡೆ ಮಳೆ ಸುರಿದಿದೆ.ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಡಲೂರು ಮತ್ತು ರಾಣಿಪೇಟೆ ಸೇರಿ ಕೆಲವೆಡೆ ಸಾಧಾರಣ ಮಳೆಯಾಗಿದೆ. ನಿರಂತರ ಮಳೆಯಿಂದ ಚೆನ್ನೈನಿಂದ ಪೋರ್ಟ್ ಬ್ಲೇರ್‌ಗೆ ತೆರಳಬೇದ್ದ 10 ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸ್ಟಾಲಿನ್ ಸೂಚಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸುಮಾರು 200 ಜನವಸತಿ ಪ್ರದೇಶಗಳು ಜಲಾವೃತಗೊಂಡಿದೆ. ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರಕ್ಷಣಾ ಸಿಬ್ಬಂದಿ ಬೋಟ್‌ಗಳ ವ್ಯವಸ್ಥೆ ಮಾಡಿಕೊಂಡು ಸರ್ವ ರೀತಿಯಲ್ಲಿಯೂ ಸನ್ನದ್ಧರಾಗಿದ್ದಾರೆ.
ಲಂಕೆಯಲ್ಲಿ ಸಾವಿನ ಸಂಖ್ಯೆ 366ಕ್ಕೇರಿಕೆ
ದಿತ್ವಾ ಚಂಡಮಾರುತದ ಪ್ರಭಾವ ಶ್ರೀಲಂಕಾದಲ್ಲೂ ತಗ್ಗಿದೆ. ಆದರೆ ಸಾವಿನ ಸಂಖ್ಯೆ 366ಕ್ಕೇರಿದ್ದು, 367 ಕಾಣೆಯಾಗಿದ್ದಾರೆ.
ಭೂಹಗರಣ: ಬಾಂಗ್ಲಾ ಪದಚ್ಯುತ ಪ್ರಧಾನಿ ಹಸೀನಾಗೆ 5 ವರ್ಷ ಜೈಲು
ಢಾಕಾ: ಈಗಾಗಲೇ ನರಮೇಧ ಕೇಸಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ ಇಲ್ಲಿನ ಮತ್ತೊಂದು ನ್ಯಾಯಾಲಯ ಭೂಹಗರಣದಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಇಲ್ಲಿನ ಪೂರ್ವಾಚಲ್‌ನಲ್ಲಿ ಸರ್ಕಾರಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಆಯೋಗ, ಜನವರಿಯಲ್ಲಿ ಹಸೀನಾ ಸೇರಿ 29 ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು. ಕೇಸಿನಲ್ಲಿ ಪೂರ್ವಾಚಲ್‌ನ 6 ಸೈಟುಗಳನ್ನು ಹಸೀನಾ ಅಕ್ರಮವಾಗಿ ಪಡೆದು, ತಮ್ಮ ಮಕ್ಕಳು, ಸಂಬಂಧಿಕರಿಗೆ ಕೊಟ್ಟಿದ್ದರು ಎಂದು ಆರೋಪಿಸಿತ್ತು. ಇದರ ವಿಚಾರಣೆ ನಡೆಸಿದ ಪೀಠ, ಹಸೀನಾಗೆ 5 ವರ್ಷ, ಹಸೀನಾ ಸೋದರಿ ಶೇಖ್ ರೆಹಾನಾಗೆ 7 ವರ್ಷ, ಬ್ರಿಟನ್ ಸಂಸದ, ಹಸೀನಾ ಸಂಬಂಧಿ ತುಲಿಪ್ ಸಿದ್ದಿಕಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಿಚ್ಛೇದಿತ ಪತ್ನಿ ಕೊಂದು ಸೆಲ್ಫಿ, ಸ್ಟೇಟಸ್!
ಕೊಯಮತ್ತೂರು: ಕೆಲವು ಮನಃಸ್ಥಿತಿಗಳು ಎಷ್ಟೊಂದು ವಿಕೃತ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ತಮಿಳುನಾಡಿನ ಎಸ್. ಬಾಲಮುರುಗನ್ ಎಂಬಾತ ತನ್ನ ವಿಚ್ಛೇದಿತ ಪತ್ನಿಯನ್ನು ಕಡಿದು ಬರ್ಬರವಾಗಿ ಹ* ಮಾಡಿದ್ದಾನೆ. ಮಾತ್ರವಲ್ಲದೇ ಆಕೆಯ ದೇಹದೊಂದಿಗೆ ಸೆಲ್ಫಿ ತೆಗೆಸಿಕೊಂಡು, ವಾಟ್ಸಾಪ್ ಸ್ಟೇಟಸ್ ಹಾಕಿ ಪೈಶಾಚಿಕತೆ ಮೆರೆದಿದ್ದಾನೆ.
ಬಾಲಮುರುಗನ್ ಮತ್ತು ಆತನ ಪತ್ನಿ ಕೆಲ ಸಮಯಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಹೀಗಾಗಿ ಆಕೆ ತನ್ನಿಬ್ಬರು ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು, ಕೊಯಮತ್ತೂರಿನ ಹಾಸ್ಟೆಲ್‌ನಲ್ಲಿ ತಂಗಿದ್ದಳು.
ಈ ನಡುವೆ ಭಾನುವಾರ ಆಕೆಯನ್ನು ಭೇಟಿಯಾಗುವ ನೆಪದಲ್ಲಿ ಮುರುಗನ್ ಹಾಸ್ಟೆಲ್‌ಗೆ ತೆರಳಿದ್ದ. ಅಲ್ಲಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದು ಮುರುಗನ್ ಕುಡುಗೋಲಿನಿಂದ ಕಡಿದು ವಿಚ್ಛೇದಿತ ಪತ್ನಿಯನ್ನು ಕಡಿದು ಕೊಂದಿದ್ದಾನೆ.ಅಷ್ಟಕ್ಕೆ ಸುಮ್ಮನಾಗದ ಆತ ಆಕೆಯ ಶವವದೊಂದಿಗೆ ಸೆಲ್ಫಿ ತೆಗೆಸಿಕೊಂಡು ಅದನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು, ‘ಆಕೆ ದ್ರೋಹ ಬಗೆದಿದ್ದಾಳೆ. ಅದಕ್ಕೇ ಶಾಸ್ತಿ ಮಾಡಿದೆ’ ಎಂದು ವಿಕೃತಿ ಮೆರೆದಿದ್ದಾನೆ. ಘಟನೆ ಸಂಬಂಧ ಪೊಲೀಸರು ಹಾಸ್ಟೆನಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.


