ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ಪ್ರಧಾನ ಅರ್ಚಕರನ್ನು ಪ್ರಶ್ನಿಸಿದೆ. ಸಂಪೂರ್ಣ ಭಕ್ತಿಯಿದ್ದರೂ ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರಬೇಕಲ್ಲವೇ ಎಂದು ನ್ಯಾಯಾಧೀಶರು ಕೇಳಿದ್ದಾರೆ.

- ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಣೆಯಲ್ಲಿ ಅಭಿಪ್ರಾಯ

ಪಿಟಿಐ ನವದೆಹಲಿ: ‘ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ?’ ಎಂದು ಶಬರಿಮಲೆ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರನ್ನು, ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

9 ನ್ಯಾಯಾಧೀಶರ ಸಂವಿಧಾನ ಪೀಠವು ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಸೇರಿ ವಿವಿಧ ಆಚರಣೆಗಳ ಕುರಿತು ವಿಚಾರಣೆ ನಡೆಸುತ್ತಿದೆ.

ಈ ವೇಳೆ ಶಬರಿಮಲೆ ಅರ್ಚಕರ ಪರ ಹಾಜರಾದ ಹಿರಿಯ ವಕೀಲ ವಿ. ಗಿರಿ, ‘ಭಕ್ತನೊಬ್ಬ ದೇವಸ್ಥಾನಕ್ಕೆ ಪೂಜೆಗೆ ಹೋದಾಗ ಅದು ದೇವತೆಯ ಗುಣಲಕ್ಷಣಗಳಿಗೆ ವಿರುದ್ಧವಾಗಿರಲು ಸಾಧ್ಯವಿಲ್ಲ. ಅವನು/ಅವಳು ದೇವತೆಯ ಅಗತ್ಯ ಗುಣಲಕ್ಷಣಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದೇವಾಲಯಗಳಲ್ಲಿನ ಆಚರಣೆಗಳು ಧರ್ಮದ ಅವಿಭಾಜ್ಯ ಅಂಗವಾಗಿವೆ’ ಎಂದರು.

ಇದಕ್ಕೆ ಆಕ್ಷೇಪಿಸಿದ ನ್ಯಾ। ಅಮಾನುಲ್ಲಾ, ‘ನಾನು ದೇಗುಲಕ್ಕೆ ನೂರು ಪ್ರತಿಶತ ನಂಬಿಕೆಯೊಂದಿಗೆ ಹೋಗುತ್ತೇನೆ. ನಾನು ಸಂಪೂರ್ಣ ಭಕ್ತಿ ಹೊಂದಿದ್ದೇನೆ. ನನ್ನ ಹೃದಯದಲ್ಲಿ ಯಾವುದೇ ಅಶುದ್ಧತೆಯಿಲ್ಲ. ಆದರೆ ಒಂದು ನಿರ್ದಿಷ್ಟ ಸನ್ನಿವೇಶದ ಕಾರಣ ನೀಡಿ ನೀವು ದೇವರನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನನಗೆ ಹೇಳಲಾಗುತ್ತದೆ. ಈಗ, ಸಂವಿಧಾನವು ರಕ್ಷಣೆಗೆ ಬರುವುದಿಲ್ಲವೇ?" ಎಂದು ಪ್ರಶ್ನಿಸಿದರು. ‘ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವೆ ವ್ಯತ್ಯಾಸವಿರುವುದಿಲ್ಲ’ ಎಂದು ಹೇಳಿದರು.