ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದಾಗ, ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿಗೆ ನ್ಯಾಯಾಲಯ ಜಾಮೀನು ನೀಡಿದೆ. 2025ರಲ್ಲಿ ನಡೆದ ಈ ಹತ್ಯೆ ಪ್ರಕರಣದಲ್ಲಿ, ಚಿರಾಪುಂಜಿ ಬಳಿ ಪತಿಯ ಶವ ಪತ್ತೆಯಾಗಿತ್ತು.

ಶಿಲ್ಲಾಂಗ್/ಮೇಘಾಲಯ (ಏ.28): ತನ್ನ ಹನಿಮೂನ್ ಪ್ರವಾಸದ ಅವಧಿಯಲ್ಲೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿಗೆ ಮೇಘಾಲಯದ ನ್ಯಾಯಾಲಯವು ಮಂಗಳವಾರ ಜಾಮೀನು ನೀಡಿದೆ. 2025ರಲ್ಲಿ ನಡೆದ ಈ ಭೀಕರ ಹತ್ಯೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇಂದೋರ್ ನಿವಾಸಿಗಳಾದ ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ ಮದುವೆಯ ನಂತರ ಹನಿಮೂನ್‌ಗಾಗಿ ಈಶಾನ್ಯ ರಾಜ್ಯವಾದ ಮೇಘಾಲಯಕ್ಕೆ ತೆರಳಿದ್ದರು. ಕಳೆದ ವರ್ಷ ಮೇ 23 ರಂದು ಪ್ರವಾಸದ ವೇಳೆಯಲ್ಲಿ ಪತಿ ರಾಜಾ ರಘುವಂಶಿ ಹಠಾತ್ತನೆ ನಾಪತ್ತೆಯಾಗಿದ್ದರು.

ರಾಜಾ ನಾಪತ್ತೆಯಾದ ಸುಮಾರು ಹತ್ತು ದಿನಗಳ ನಂತರ, ಅಂದರೆ ಜೂನ್ 2 ರಂದು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಸುಂದರ ಪ್ರವಾಸಿ ತಾಣ ಸೋಹ್ರಾ (ಚಿರಾಪುಂಜಿ) ಬಳಿಯ ಜಲಪಾತದ ಸಮೀಪ ಅವರ ವಿರೂಪಗೊಂಡ ಶವ ಪತ್ತೆಯಾಗಿತ್ತು.

ಹತ್ಯೆಯ ಹಿಂದೆ ಪತ್ನಿ ಮತ್ತು ಪ್ರಿಯಕರ?

ಪತಿ ನಾಪತ್ತೆಯಾದಾಗ ಸೋನಂ ನಾಟಕವಾಡಿದ್ದರೂ, ತನಿಖೆ ನಡೆಸಿದ ಮೇಘಾಲಯ ಪೊಲೀಸರಿಗೆ ಆಕೆಯ ನಡವಳಿಕೆಯಲ್ಲಿ ಅನುಮಾನ ಬಂದಿತ್ತು. ಪೊಲೀಸರ ತನಿಖೆಯ ವೇಳೆ, ಸೋನಂ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎನ್ನುವುದು ಗೊತ್ತಾಗಿತ್ತು.ಪ್ರಿಯಕರ ಮತ್ತು ಇತರ ಕೆಲವು ಸಹಚರರು ಈ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಸೋನಂ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

ಜಾಮೀನು ಮತ್ತು ಮುಂದಿನ ಕ್ರಮ

"ಆರೋಪಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆದಾಗ್ಯೂ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಾಗುತ್ತಿದೆ ಮತ್ತು ಪೊಲೀಸರು ಕಾನೂನಿನ ಪ್ರಕಾರ ಈ ಪ್ರಕರಣವನ್ನು ಮುಂದುವರಿಸಲಿದ್ದಾರೆ," ಎಂದು ಎಸ್‌ಪಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ.