ಎಕ್ಸ್ಪ್ರೆಸ್ ವೇಯಲ್ಲಿ ದಟ್ಟ ಮಂಜಿನ ಕಾರಣ ಏಳು ಬಸ್ಗಳು ಮತ್ತು ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ನಾಲ್ವರು ಸಜೀವ ದಹನವಾಗಿದ್ದು, 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ:
ದಟ್ಟ ಮಂಜಿನ ಕಾರಣಕ್ಕೆ ದಾರಿ ಕಾಣದೇ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಮಥುರಾ ಸಮೀಪ ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ಈ ದುರಂತ ಸಂಭವಿಸಿದೆ. ಏಳು ಬಸ್ಗಳು ಹಾಗೂ ಮೂರು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಈ ಬೆಂಕಿಯಲ್ಲಿ ನಾಲ್ವರು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈ ದುರಂತದಲ್ಲಿ 66 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ರಕ್ಷಿಸಿ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಿಂದಾಗಿ ವಾಹನಗಳು ನಜ್ಜುಗುಜ್ಜಾಗಿದ್ದು, ವಾಹನಗಳ ಮಧ್ಯೆ ದೇಹದ ಭಾಗಗಳು ಸಿಲುಕಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಅಲ್ಲಿದ್ದ ಯುವಕನೋರ್ವ ತಾನು 8 ರಿಂದ 9 ದೇಹಗಳನ್ನು ಬಸ್ನಿಂದ ಹೊರಗೆ ಎಳೆದಿದ್ದೇನೆ ಎಂದು ಹೇಳಿದ್ದು, ಅಪಘಾತದಲ್ಲಿ ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ
ಪ್ರತ್ಯಕ್ಷದರ್ಶಿಯೊಬ್ಬರು 20 ಆಂಬುಲೆನ್ಸ್ನಲ್ಲಿ 150 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಅವರು ಈ ಬಗ್ಗೆ ಮಾತನಾಡಿದ್ದು, ಯಮುನಾ ಎಕ್ಸ್ಪ್ರೆಸ್ ವೇಯ ಮೈಲಿಗಲ್ಲು 127ರ ಬಳಿ ಬಲ್ದೇವ್ ಪೊಲೀಸ್ ಠಾಣೆ ಸಮೀಪ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮ ವಾಹನ, ರಾಜ್ಯ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹೆದ್ದಾರಿಯಿಂದ ವಾಹನಗಳ ಅವಶೇಷಗಳನ್ನು ತೆಗೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಹಠಾತ್ ಬ್ರೇಕ್ ಹಾಕಿದಾಗ ಸರಣಿ ಅಪಘಾತ
ಎಕ್ಸ್ಪ್ರೆಸ್ವೇಯಲ್ಲಿ ದಟ್ಟವಾದ ಮಂಜಿನಿಂದ ಮುಂದೆ ಹೋಗುವ ವಾಹನಗಳು ಕಾಣುತ್ತಿರಲಿಲ್ಲ. ಇದ್ದಕ್ಕಿದ್ದಂತೆ, ಒಂದು ಬಸ್ನ ವೇಗ ಕಡಿಮೆಯಾಯಿತು, ಇದರಿಂದಾಗಿ ಹಲವಾರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದವು. ಡಿಕ್ಕಿಯ ನಂತರ, ಬಾಂಬ್ ಸ್ಫೋಟಗೊಂಡಂತೆ ಭಾಸವಾಯಿತು ಎಂದು ಪ್ರತ್ಯಕ್ಷದರ್ಶಿ ಭಗವಾನ್ ದಾಸ್ ಹೇಳಿದ್ದಾರೆ. ಜನರು ಬಸ್ಸಿನ ಕಿಟಕಿಗಳನ್ನು ಒಡೆದು ತಪ್ಪಿಸಿಕೊಳ್ಳಲು ಹೊರಗೆ ಹಾರುತ್ತಿದ್ದರು ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಎಷ್ಟು ಜನರಿಗೆ ಹಾನಿಯಾಗಿದೆ ಎಂದು ಎಣಿಸಲು ಸಾಧ್ಯವಿಲ್ಲ ಎಂದು ಆಂಬ್ಯುಲೆನ್ಸ್ ಕೆಲಸಗಾರ ಅಮಿತ್ ಕುಮಾರ್ ಹೇಳಿದ್ದಾರೆ. ಈ ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ಮೋದಿ ತೇರಿ ಖಬರ್ ಖುದೇಗಿ: ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರಿಂದ ಆಕ್ಷೇಪಾರ್ಹ ಘೋಷಣೆ
ಅಪಘಾತದ ನಂತರ ಬಸ್ಗಳಲ್ಲಿ ಸ್ಫೋಟ:
ಗಾಯಾಳುಗಳಿಗೆ ವೃಂದಾವನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಯಾವುದೇ ರೋಗಿಗಳ ಸ್ಥಿತಿ ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಪ್ರಕಾರ ಅಪಘಾತದ ನಂತರ 3 ಬಸ್ಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಹೇಳಿದ್ದಾರೆ. ಗೊಂಡಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಶಾಲಿನಿ ಎಂಬುವವರು ನಾನು ನಿದ್ರಿಸುತ್ತಿದ್ದೆ ಸ್ಫೋಟದಂತಹ ಶಬ್ದ ಕೇಳಿದಾಗ ನನಗೆ ಎಚ್ಚರವಾಯಿತು. ಮಕ್ಕಳು ಕೆಳಗೆ ಬಿದ್ದಿರುವುದನ್ನು ನಾನು ನೋಡಿದೆ. ಜನರು ಕಿಟಕಿಗಳಿಂದ ಜಿಗಿಯುತ್ತಿದ್ದರು. ನಾನು ಕೂಡ ಕೆಳಗೆ ಇಳಿದೆ. ಇದಾದ ನಂತರ, ಬಸ್ಗಳಲ್ಲಿ ಸ್ಫೋಟಗಳು ಸಂಭವಿಸಲು ಪ್ರಾರಂಭಿಸಿದವು. ಒಂದರ ನಂತರ ಒಂದರಂತೆ ಮೂರು ಬಸ್ಗಳಲ್ಲಿ ಸ್ಫೋಟಗಳು ಸಂಭವಿಸಿದವು. ಅವೆಲ್ಲವೂ ಬೆಂಕಿಯ ಉಂಡೆಗಳಾಗಿ ಮಾರ್ಪಟ್ಟವು ಎಂದು ಅವರು ಹೇಳಿದ್ದಾರೆ.


