ರಾಘವ್ ಚಡ್ಡಾ ಸೇರಿದಂತೆ ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸಂಸದರು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಪಕ್ಷವು ಸರಿಯಾದ ದಾರಿಯಲ್ಲಿದ್ದರೆ ನಾಯಕರು ಪಕ್ಷ ಬಿಡುತ್ತಿರಲಿಲ್ಲ, ಅವರಿಗೆ ಪಕ್ಷದೊಳಗೆ ಸಮಸ್ಯೆಗಳಾಗಿರಬಹುದು ಎಂದಿದ್ದಾರೆ.
ನವದೆಹಲಿ (ಏ.25): ರಾಘವ್ ಚಡ್ಡಾ ಸೇರಿದಂತೆ ಆಮ್ ಆದ್ಮಿ ಪಕ್ಷದ (ಆಪ್) ಏಳು ಸಂಸದರು ಪಕ್ಷ ತೊರೆದ ಘಟನೆಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ. 'ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದರೆ, ನಾಯಕರು ಈ ರೀತಿ ಪಕ್ಷವನ್ನು ತೊರೆಯುತ್ತಿರಲಿಲ್ಲ' ಎಂದು ಆಪ್ ವಿರುದ್ಧ ವಿರುದ್ಧ ಕಿಡಿಕಾರಿದ್ದಾರೆ.
ರಾಘವ್ ಚಡ್ಡಾ ಕುರಿತ ಅಣ್ಣ ಹಜಾರೆ ಹೇಳಿದ್ದೇನು?
'ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಚಡ್ಡಾ ಸೇರಿದಂತೆ ಉಳಿದವರಿಗೂ ಪಕ್ಷದೊಳಗೆ ಏನಾದರೂ ಸಮಸ್ಯೆಗಳು ಎದುರಾಗಿರಬೇಕು. ಅದಕ್ಕಾಗಿಯೇ ಅವರು ಪಕ್ಷ ಬಿಟ್ಟಿರಬಹುದು' ಎಂದು ಹಜಾರೆ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ಅಹಲ್ಯನಗರ್ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಎಎಪಿ ಪಕ್ಷದೊಳಗೆ ಉಸಿರುಗಟ್ಟಿಸುವ ವಾತಾವರಣ ಇರಬಹುದು
ಪಕ್ಷ ತೊರೆದವರಿಗೆ ಸಂಘಟನೆಯೊಳಗೆ ಕಷ್ಟದ ವಾತಾವರಣ ಇರಬಹುದು ಎಂದು ಅವರು ಇದೇ ವೇಳೆ ಸೇರಿಸಿದರು. ಅಂದಹಾಗೆ, 2011-12ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯ ಸಮಯದಲ್ಲಿ ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು ಅನ್ನೋದು ಗಮನಾರ್ಹ.
ಎಎಪಿ ಪಕ್ಷ ತೊರೆದ ರಾಘವ್ ಚಡ್ಡಾ ಹೇಳೋದೇನು?
ಶುಕ್ರವಾರ ಆಪ್‌ನ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದರು. ಆಪ್‌ನ ರಾಜ್ಯಸಭಾ ಸದಸ್ಯರ ಪೈಕಿ ಮೂರನೇ ಎರಡರಷ್ಟು ಸದಸ್ಯರು ಪಕ್ಷ ತೊರೆದಿದ್ದು, ಇನ್ನು ಮುಂದೆ ರಾಜ್ಯಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಚಡ್ಡಾ ಹೇಳಿದ್ದಾರೆ. 'ಭಾರತೀಯ ಸಂವಿಧಾನದ ನಿಯಮಗಳನ್ನು ಬಳಸಿಕೊಂಡು ಬಿಜೆಪಿ ಜೊತೆ ವಿಲೀನಗೊಳ್ಳಲು ನಾವು ನಿರ್ಧರಿಸಿದ್ದೇವೆ' ಎಂದು ಚಡ್ಡಾ ತಿಳಿಸಿದ್ದಾರೆ. ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ರಜಿಂದರ್ ಗುಪ್ತಾ, ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಹ್ನಿ ಅವರಂತಹ ಪ್ರಮುಖ ನಾಯಕರು ಬಿಜೆಪಿ ಸೇರುತ್ತಿರುವವರಲ್ಲಿ ಸೇರಿದ್ದಾರೆ.


