ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ, ಎರಡೂ ರಾಜ್ಯಗಳಲ್ಲಿ ಚುನಾವಣಾ ಅಕ್ರಮಕ್ಕೆ ಬಳಸಲು ಯತ್ನಿಸಿದ 2334 ಕೋಟಿ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೋಲ್ಕತಾ/ಚೆನ್ನೈ: ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯ ಹಂತ-1 ಗುರುವಾರ ನಡೆಯಲಿದೆ. ಅಂತೆಯೇ ತಮಿಳುನಾಡು ಚುನಾವಣೆ ಕೂಡ ಏಕಹಂತದಲ್ಲಿ ಇದೇ ದಿನ ಜರುಗಲಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಿಗೆ 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ. ಡಿಎಂಕೆ-ಕಾಂಗ್ರೆಸ್ ಕೂಟ, ಅಣ್ಣಾಡಿಎಂಕೆ-ಬಿಜೆಪಿ ಕೂಟ ಹಾಗೂ ವಿಜಯ್ ಅವರ ಟಿವಿಕೆ ನಡುವೆ ತ್ರಿಕೋನ ಕದನ ಏರ್ಪಟ್ಟಿದೆ.
ಇನ್ನು ಪ.ಬಂಗಾಳದ 294 ಸ್ಥಾನಗಳ ಪೈಕಿ 152 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದೆ. ಟಿಎಂಸಿ-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಆದರೆ ಇದೇ ವೇಳೆ ಕಾಂಗ್ರೆಸ್-ಎಡರಂಗ ಏನು ಕಮಾಲ್ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ, 1.75 ಕೋಟಿ ಮಹಿಳೆಯರು ಸೇರಿದಂತೆ 3.60 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತದಾನಕ್ಕೆ ಅರ್ಹರಾಗಿದ್ದಾರೆ.
ಬಂಗಾಳದ 2ನೇ ಹಂತದ ಚುನಾವಣೆ ಏ.29ಕ್ಕೆ ನಡೆಯಲಿದೆ. ತಮಿಳುನಾಡು, ಬಂಗಾಳ ಸೇರಿ ಚುನಾವಣೆ ನಡೆದಿರುವ 4 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ಮೇ 4ಕ್ಕೆ ನಡೆಯಲಿದೆ.
ತ. ನಾಡು, ಬಂಗಾಳ: 2334 ಕೋಟಿ ರು. ನಗದು/ವಸ್ತು ವಶ
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಅಕ್ರಮಕ್ಕೆ ಬಳಕೆಯಾಗುತ್ತಿತ್ತು ಎನ್ನಲಾದ 2334 ಕೋಟಿ ರು.ಮೌಲ್ಯದ ನಗದು, ಚಿನ್ನ, ಮದ್ಯ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಪೈಕಿ ತಮಿಳುನಾಡಿನಲ್ಲಿ 1262 ಕೋಟಿ ರು. ಹಾಗೂ ಪಶ್ಚಿಮ ಬಂಗಾಳದಲ್ಲಿ 1072 ಕೋಟಿ ರು. ಮೌಲ್ಯದ ನದಗು/ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ತಮಿಳುನಾಡು ಚುನಾವಣಾ ಆಯುಕ್ತೆ ಅರ್ಚನಾ ಪಟ್ನಾಯಕ್ ಅವರು, ರಾಜ್ಯದಲ್ಲಿ ಜಪ್ತಾದ 1,262 ಕೋಟಿ ರು. ಮೌಲ್ಯದ ವಸ್ತುವಿನಲ್ಲಿ 543 ಕೋಟಿ ರು. ನಗದು ಪತ್ತೆಯಾಗಿದೆ ಎಂದಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ 1072.13 ಕೋಟಿ ರು. ಮೌಲ್ಯದ ಅಕ್ರಮ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2ನೇ ಹಂತದ ಚುನಾವಣೆ ಏ.29ಕ್ಕೆ ನಡೆಯಲಿದ್ದು, ಜಪ್ತಿ ಪ್ರಮಾಣ ಇನ್ನಷ್ಟು ಹಚ್ಚಳ ಸಾಧ್ಯತೆ ಇದೆ.
ತಮಿಳುನಾಡಲ್ಲಿ ಮತದಾನ: ಗಡಿ ಚೆಕ್ಪೋಸ್ಟ್ಗಳಲ್ಲಿ ಕಟ್ಟೆಚ್ಚರ
ತಮಿಳುನಾಡಿನಲ್ಲಿ ಏ.23ರಂದು ವಿಧಾನಸಭೆ ಚುನಾವಣೆ ಮತದಾನ ನಡೆಯಲಿರುವುದರಿಂದ ಚೆಕ್ಪೋಸ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ತಾಲೂಕಿನ ಅರ್ಧನಾರೀಪುರ ಚೆಕ್ಪೋಸ್ಟ್, ರಾಮಪುರ ಠಾಣಾ ವ್ಯಾಪ್ತಿ ಗರಿಕೆಖಂಡಿ ಮತ್ತು ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿ ಪಾಲಾರ್ ಚೆಕ್ಪೋಸ್ಟ್ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ವಿವಿಧ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೇ, ಈ ಚೆಕ್ ಪೋಸ್ಟ್ಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಮಿಳುನಾಡಿನಿಂದ ರಾಜ್ಯಕ್ಕೆ ಮತ್ತು ರಾಜ್ಯದಿಂದ ತಮಿಳುನಾಡಿಗೆ ಹೋಗುವ ಹೋಗುವಂಥ ವಾಹನಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಗರಿಕೆ ಖಂಡಿ ಪೊಲೀಸ್ ಚೆಕ್ಚೆಕ್ ಪೋಸ್ಟ್ನಲ್ಲಿ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ.


