ಉತ್ತರ ಪ್ರದೇಶದ ಗಾಜಿಯಾಬಾದ್ನ ಮಾಲ್ ಒಂದರಲ್ಲಿ ಯುವಕನೊಬ್ಬ ಯುವತಿಗೆ ಪ್ರೇಮ ನಿವೇದನೆ ಮಾಡಿ, ಅಲ್ಲೇ ತಾಳಿ ಕಟ್ಟಿ ಮದುವೆಯಾಗಿದ್ದಾನೆ. ಈ ಅನಿರೀಕ್ಷಿತ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.
ಬ್ರಹ್ಮ ಪ್ರತಿಯೊಬ್ಬರನ್ನು ಭೂಮಿಗೆ ಕಳುಹಿಸಿಕೊಡುವ ಮೊದಲು ಯಾರು ಎಲ್ಲಿ ಯಾವಾಗ ಯಾರನ್ನು ಮದುವೆ ಆಗಬೇಕು ಎಂದು ಬರೆದಿರ್ತಾನೆ ಎಂದು ಹೇಳುವ ಮಾತನ್ನು ನೀವು ಕೇಳಿರಬಹುದು. ಕೆಲವು ವಿಚಿತ್ರ ಹಾಗೂ ಅಚಾನಕ್ ಆಗಿ ನಡೆಯುವ ಮದುವೆಗಳನ್ನು ನೋಡಿದರೆ ಇದು ನಿಜವೇನೂ ಅನಿಸುತ್ತಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಮಾಲೊಂದರಲ್ಲಿ ಯುವತಿಯೊಬ್ಬಳಿಗೆ ಮೊದಲಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ನಂತರ ಅಲ್ಲೇ ಆಕೆಯ ಹಣೆಗೆ ಸಿಂಧೂರವಿಟ್ಟು ತಾಳಿ ಕಟ್ಟಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡುವ ಜೊತೆಗೆ ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಅಂದಹಾಗೆ ಈ ವಿಚಿತ್ರ ವಿಶೇಷ ಮದುವೆ ನಡೆದಿರುವುದು ಉತ್ತರ ಪ್ರದೇಶದ ಗಾಜಿಯಾಬಾದ್ನ ಗೌರ್ ಸೆಂಟ್ರಲ್ ಮಾಲ್ನಲ್ಲಿ ಅಂದಾಜು 2 ನಿಮಿಷಗಳ ವೀಡಿಯೋದಲ್ಲಿ ಕಾಣುವಂತೆ ಮೊದಲಿಗೆ ಯುವಕ ಮಂಡಿಯೂರಿ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಜೋಡಿಯ ಸುತ್ತಲೂ ಹತ್ತಕ್ಕೂ ಹೆಚ್ಚು ಹುಡುಗರು ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅವರಲ್ಲನೇಕರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೋದಲ್ಲಿ ಕಾಣುವಂತೆ ಯುವಕನ ಪ್ರೀತಿಯಿಂದ ಪ್ರಪೋಸ್ ಮಾಡ್ತಿದ್ದಂತೆ ಯುವತಿ ಕರಗಿ ಹೋಗಿದ್ದು, ಅಲ್ಲಿಯೇ ಆತನ ಮುಂದೆ ಮೊಣಕಾಲೂರಿ ಕುಳಿತಿದ್ದಾಳೆ. ಈ ವೇಳೆ ಸುತ್ತಲೂ ನಿಂತ ಯುವಕರು ಜೋರಾಗಿ ಚಪ್ಪಾಳೆ ತಟ್ಟಿ ಅವರಿಬ್ಬರನ್ನು ಪ್ರೋತ್ಸಾಹಿಸಿದ್ದಾರೆ.
ಇದೇ ಸಮಯದಲ್ಲಿ ಹುಡುಗ ಆಕೆಯ ಹಣೆಗೆ ಕುಂಕುಮವಿಟ್ಟಿದ್ದಾನೆ. ನಂತರ ಇಬ್ಬರು ಪರಸ್ಪರ ತಬ್ಬಿಕೊಂಡಿದ್ದಾರೆ. ಯುವಕ ಅಲ್ಲಿಯೇ ಆಕೆಯ ಕತ್ತಿಗೆ ತಾಳಿ ಕಟ್ಟಿದ್ದಾನೆ. ಅಲ್ಲಿದ್ದ ಯುವಕನ ಸ್ನೇಹಿತರು ಈ ಯುವಕನ ಈ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲಿದ್ದ ಎಲ್ಲರ ಮೊಗದಲ್ಲಿ ನಗು ತುಂಬಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಯಾರಾದರೂ ಅಲ್ಲಿಯೇ ಲೈಟರ್ ಬೆಳಗಿ ಆಗ ಸಪ್ತಪದಿಯನ್ನು ತುಳಿಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮದುವೆಯಿಂದಾಗಿ ಈಗ ಗೌರ್ ಸೆಂಟ್ರಲ್ ಮಾಲ್ ಗೌರ್ ಸೆಂಟ್ರಲ್ ಮಂದಿರ್ ಆಗಿ ಬದಲಾಗಿದೆ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂತಹ ಮದುವೆಯೇ ಒಳ್ಳೆಯದೆನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮದುವೆಯ ಪವಿತ್ರ ಸಂಸ್ಕಾರವನ್ನು ತಮಾಷೆಯಾಗಿ ಪರಿವರ್ತಿಸಲಾಗಿದೆ. ಹುಡುಗಿಯ ಹಿಂದೆ ಯಾರು? ಯಾರೂ ಇಲ್ಲ. ಹುಡುಗನ ಹಿಂದೆ ಯಾರು? ಯಾರೂ ಇಲ್ಲ. ಕಾಮದ ಬಿರುಗಾಳಿಯಲ್ಲಿ ಇಬ್ಬರೂ ಕೊಚ್ಚಿ ಹೋಗುತ್ತಿದ್ದಾರೆ. ಮದುವೆಯ ನಂತರ ಒಂದು ಕುಟುಂಬ ಸ್ಥಾಪನೆಯಾಗುವುದರಿಂದ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆ ನಡೆಯುತ್ತದೆ. ಎರಡು ಕುಟುಂಬಗಳ ಒಕ್ಕೂಟ ನಡೆಯುವಲ್ಲಿ, ಎರಡೂ ಕುಟುಂಬಗಳು ಒಟ್ಟಾಗಿ ವರ ಮತ್ತು ವಧುವಿನ ಜೀವನವನ್ನು ಸುಂದರಗೊಳಿಸಲು ಕೆಲಸ ಮಾಡುತ್ತವೆ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೆ, ಅವರು ಮಧ್ಯಸ್ಥಿಕೆ ವಹಿಸುತ್ತಾರೆ. ಮಾಲ್ನಲ್ಲಿ ಬೇರೇನಾದರೂ ಸಂಭವಿಸಬಹುದು, ಆದರೆ ಅದನ್ನು ಮದುವೆ ಎಂದು ಕರೆಯುವುದು ಮದುವೆಯೆಂಬ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು
ಮದುವೆ ಹೇಗೆ ಬೇಕಾದರೂ ಆಗಲಿ ಆದರೆ ಹೀಗೆ ಮದುವೆ ಮಾಡಿಕೊಳ್ಳುವಾಗ ಇರುವ ಹುಮ್ಮಸ್ಸನ್ನೇ ಕಷ್ಟಸುಖಗಳ ನಡುವೆಯೇ ಕಡೆತನಕವೂ ಉಳಿಸಿಕೊಂಡು ಹೋಗುವುದರಲ್ಲಿ ನಿಜವಾದ ಬದುಕಿನ ಸೌಂದರ್ಯವಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಇದನ್ನೂ ಓದಿ: 14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?


