ಮಲಪ್ಪುರಂನ ನಿಲಂಬೂರ್‌ನಲ್ಲಿ ಮಗುವಿನ ಚಿನ್ನದ ಸರ ಕಿತ್ತು ನುಂಗಿದ್ದ ಮಹಿಳೆಯ ಹೊಟ್ಟೆಯಿಂದ ಸರ ಇನ್ನೂ ಹೊರಬಂದಿಲ್ಲ. ಎರಡು ಬಾರಿ ಎನಿಮಾ ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ಪೊಲೀಸರ ಕಾವಲಿನಲ್ಲಿ ಆಕೆಯನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಲಪ್ಪುರಂ (ಫೆ.14): ನಿಲಂಬೂರ್‌ನಲ್ಲಿ ಮಗುವಿನ ಕುತ್ತಿಗೆಯಿಂದ ಕಿತ್ತುಕೊಂಡ ಚಿನ್ನದ ಸರವನ್ನು ನುಂಗಿದ್ದ ಆರೋಪಿ ಮಹಿಳೆ ಸದ್ಯ ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾಳೆ. ಆಕೆಯ ಹೊಟ್ಟೆಯಿಂದ ಸರವನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ನಿಲಂಬೂರ್‌ನ ಕ್ಲಿನಿಕ್ ಒಂದರಲ್ಲಿ ವೈದ್ಯರನ್ನು ನೋಡಲು ಬಂದಿದ್ದ ಮಗುವಿನ 3.5 ಗ್ರಾಂ ತೂಕದ ಚಿನ್ನದ ಸರವನ್ನು ಪಾಲೆಮಾಡ್ ಕಲ್ಲನ್‌ಕುನ್ನನ್ ನಿವಾಸಿ ಸಮೀನಾ (35) ಎನ್ನುವ ಮಹಿಳೆ ಕಿತ್ತು ನುಂಗಿದ್ದಳು. ಘಟನೆ ಬಳಿಕ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನಿಲಂಬೂರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಎಕ್ಸ್‌ರೇ ತೆಗೆದಾಗ, ಮಹಿಳೆಯ ಹೊಟ್ಟೆಯಲ್ಲಿ ಸರ ಇರುವುದು ಪತ್ತೆಯಾಗಿತ್ತು.

ಚೈನ್‌ ಹೊರಬರದಿದ್ದರೆ ಸರ್ಜರಿಗೆ ತೀರ್ಮಾನ!

ನಂತರ, ಸರವನ್ನು ಹೊರತೆಗೆಯಲು ಪೊಲೀಸರು ಎನಿಮಾ ಕೊಡಿಸಿದ್ದರು. ಆದರೆ, ಅದು ಫಲ ನೀಡಿಲ್ಲ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆದ ಪೊಲೀಸರು ಮತ್ತೊಮ್ಮೆ ಎನಿಮಾ ಕೊಡಿಸಿದರೂ ಸರ ಹೊರಬರಲಿಲ್ಲ. ಹೀಗಾಗಿ, ಮೊದಲು ಮಂಜೇರಿ ಮೆಡಿಕಲ್ ಕಾಲೇಜಿಗೆ, ನಂತರ ಗುರುವಾರ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನ ಸರ್ಜರಿ ವಾರ್ಡ್‌ಗೆ ಆಕೆಯನ್ನು ಶಿಫ್ಟ್ ಮಾಡಲಾಗಿದೆ.

ವೈದ್ಯರು ಸದ್ಯಕ್ಕೆ ಐದು ದಿನಗಳ ಕಾಲ ಎನಿಮಾ ನೀಡಿ ಕಾಯಲು ಸೂಚಿಸಿದ್ದಾರೆ. ಅದಕ್ಕೂ ಸರ ಹೊರಬರದಿದ್ದರೆ, ಸರ್ಜರಿ ಮೂಲಕ ಹೊರತೆಗೆಯುವ ಬಗ್ಗೆ ತೀರ್ಮಾನಿಸಲಿದ್ದಾರೆ. ಸದ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಕಾವಲಿನಲ್ಲಿ ಸಮೀನಾ ಇದ್ದಾಳೆ.