ವಿಮಾನ ನಿಲ್ದಾಣ ಡ್ಯೂಟಿ ಫ್ರೀ ಶಾಪ್‌ನಿಂದ ಮದ್ಯ ಖರೀದಿಸಿದ ಯುವಕ ಅರೆಸ್ಟ್, ನಿಯಮವೇನು?, ಬಂಧಿತ ಯುವಕನಿಂದ 10 ಬಾಟಲಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಡ್ಡು ಕೊಟ್ಟು ಮದ್ಯ ಖರೀದಿಸಿದರೂ ಯುವಕ ಅರೆಸ್ಟ್ ಆಗಿದ್ದೇಕೆ?
ಕೋಝಿಕ್ಕೋಡ್ (ಅ.14) ವಿಮಾನ ನಿಲ್ದಾಣದ ಶಾಪ್‌ನಿಂದ ಡ್ಯೂಟಿ ಫ್ರಿ ಮದ್ಯ ಖರೀದಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಡ್ಯೂಟಿ ಫ್ರೀ ಲಿಕ್ಕರ್ ಶಾಪ್‌ನಲ್ಲಿ 10 ಬಾಟಲಿ ಮದ್ಯ ಖರೀದಿಸಿ ಹೊರಬಂದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿ 10 ಬಾಟಲಿ ವಶಕ್ಕೆ ಪಡೆದ ಘಟನೆ ಕೇರಳದ ಕೋಝಿಕ್ಕೋಡ್‌ಲ್ಲಿ ನಡೆದಿದೆ. 10 ಬಾಟಲಿ ಕಳ್ಳ ಸಾಗಾಣೆ ಮಾಡುತ್ತಿದ್ದ ಕರಿಪುರ್ ನಿವಾಸಿ ಅಬ್ದುರಹಮಾನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸುಂಕ ರಹಿತ ಕಾರಣ ಅತೀ ಕಡಿಮೆ ಬೆಲೆಯಲ್ಲಿ ಮದ್ಯ
ವಿಮಾನ ನಿಲ್ದಾಣದಲ್ಲಿರುವ ಡ್ಯೂಟಿ ಫ್ರೀ ಲಿಕ್ಕರ್ ಶಾಪ್‌ನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಮದ್ಯ ಲಭ್ಯವಿರುತ್ತದೆ. ಕಾರಣ ಈ ಮದ್ಯದ ಮೇಲೆ ಯಾವುದೇ ಸುಂಕ ವಿಧಿಸಿರುವುದಿಲ್ಲ. ಅಬ್ದುರಹಮಾನ್ ಮದ್ಯ ಖರೀದಿಸಲು ವಿಮಾನ ನಿಲ್ದಾಣದ ಈ ಡ್ಯೂಟಿ ಫ್ರೀ ಶಾಪ್‌ಗೆ ತೆರಳಿದ ಅಬ್ದುರಹಮಾನ್, 10 ಬಾಟಲಿ ಮದ್ಯ ಖರೀದಿಸಿದ್ದಾನೆ. ಬಳಿಕ ವಿಮಾನ ನಿಲ್ದಾಣದಿಂದ ಹೊರಬಂದಿದ್ದಾನೆ. ಹೊರಗಡೆ ಮಾರುಕಟ್ಟೆ ಬೆಲೆಗೆ ಮದ್ಯ ಮಾರಾಟ ಮಾಡಲು ಅಬ್ದುರಹಮಾನ್ ಯೋಜನೆ ಹಾಕಿಕೊಂಡಿದ್ದ. ಆದರೆ ಪೊಲೀಸರು ಅಬ್ದುರಹಮಾನ್‌ನನ್ನು ಅರೆಸ್ಟ್ ಮಾಡಿದ್ದಾರೆ.
ದುಡ್ಡು ಕೊಟ್ಟು ಮದ್ಯ ಖರೀದಿಸಿದರೂ ಯುವಕ ಅರೆಸ್ಟ್ ಆಗಿದ್ದು ಯಾಕೆ, ನಿಯಮವೇನು?
ಅಬ್ದುರಹಮಾನ್ ಡ್ಯೂಟಿ ಫ್ರೀ ಶಾಪ್‌ನಲ್ಲಿ ಮದ್ಯದ ಬೆಲೆ ನೀಡಿ ಖರೀದಿಸಿದ್ದಾನೆ. ನಿಯಮದ ಪ್ರಕಾರ ವಿಮಾನ ನಿಲ್ದಾಣದಲ್ಲಿರುವ ಡ್ಯೂಟಿ ಫ್ರೀ ಲಿಕ್ಕರ್ ಶಾಪ್‌ನಲ್ಲಿ ಮದ್ಯ ಕೇವಲ ವಿದೇಶದಿಂದ ಮರಳುವ ಪ್ರಯಾಣಿಕರಿಗೆ ಮಾತ್ರ ಖರೀದಿಗೆ ಅವಕಾಶವಿದೆ. ಪ್ರತಿ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಮರಳುವ ಪ್ರಯಾಣಿಕರಿಗೆ ಡ್ಯೂಟಿ ಫ್ರಿ ಮದ್ಯ ಖರೀದಿಸಲು ಅವಕಾಶವಿದೆ. ಆದರೆ ಇದಕ್ಕೂ ಮಿತಿ ಇದೆ. ಮಿತಿಗಿಂತ ಹೆಚ್ಚು ಖರೀದಿಸುವಂತಿಲ್ಲ, ಒಯ್ಯುವಂತಿಲ್ಲ. ಇಲ್ಲಿ ಯುವಕ ವಿದೇಶ ಪ್ರಯಾಣ ಮಾಡಲಿಲ್ಲ. ವಿದೇಶದಿಂದ ಬಂದಿಲ್ಲ. ಹೀಗಾಗಿ ಈತ ಡ್ಯೂಟಿ ಫ್ರಿ ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಲು ಸಾಧ್ಯವಿಲ್ಲ. ಇದು ಮೊದಲ ನಿಯಮ ಉಲ್ಲಂಘನೆಯಾಗಿದೆ. ಇನ್ನು ಮಿತಿಗಿಂತ ಹೆಚ್ಚು ಮದ್ಯ ಖರೀದಿಸಿದ್ದಾನೆ. ಇದು ಎರಡನೇ ನಿಯಮ ಉಲ್ಲಂಘನೆ. ಅತಿಕ್ರಮವಾಗಿ, ನಿಯಮ ಬಾಹಿರವಾಗಿ ಮದ್ಯ ಖರೀದಿ ಮಾಡಿದ್ದು ಮೂರನೇ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಪೊಲೀಸರು ಅಬ್ದುರಹಮಾನ್‌ನ ಬಂಧಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದ ನಿಯಮವೇನು?
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಅಂತಾರಾಷ್ಟ್ರೀಯ ಪ್ರಯಾಣಿಕರು ಡ್ಯೂಟಿ ಫ್ರಿ ಮದ್ಯದ ಶಾಪ್‌ನಿಂದ ಗರಿಷ್ಠ 2 ಲೀಟರ್ ಮದ್ಯ ಅಥವಾ ವೈನ್, 100 ಸಿಗರೇಟ್ ಅಥವಾ 125 ಗ್ರಾಂ ಟೊಬ್ಯಾಕೋ ಖರೀದಿಸಲು ಸಾಧ್ಯವಿದೆ . ಒಟ್ಟು ಖರೀದಿ 50,000 ರೂಪಾಯಿ ಮೀರಬಾರದು.
ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ


