ಬೆಂಗಳೂರಿನಲ್ಲಿ ಪಿತ್ರಾರ್ಜಿತ ಆಸ್ತಿಗಾಗಿ ವಕೀಲನಿಂದ ಹಿರಿಯ ಸಹೋದರನ ಕೊಲೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ, ನಗರದ ವಿವಿಧೆಡೆ ನಡೆದ ಕಾರ್ಯಾಚರಣೆಗಳಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ ಹತ್ತು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಅವರಿಂದ 88.22 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, ವಾಹನಗಳು ಮತ್ತು ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು (ಮಾ.1): ಪಿತ್ರಾರ್ಜಿತ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಹಿರಿಯ ಸೋದರನಿಗೆ ಚಾಕುವಿನಿಂದ ಇರಿದು ಕೊಂದ ವಕೀಲನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೋಡಿಚಿಕ್ಕಹಳ್ಳಿ ನಿವಾಸಿ ಶ್ರೀಕಾಂತಯ್ಯ (36) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಕಿರಿಯ ಸೋದರ ನರೇಂದ್ರನನ್ನು ಬಂಧಿಸಲಾಗಿದೆ. ಭೂ ವ್ಯಾಜ್ಯ ಸಂಬಂಧ ಬೆಳಗ್ಗೆಸೋದರರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ರೊಚ್ಚಿಗೆದ್ದು ಅಣ್ಣನಿಗೆ ತಮ್ಮ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಆತನನ್ನು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಶ್ರೀಕಾಂತಯ್ಯ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಡಿಚಿಕ್ಕಹಳ್ಳಿಯ ಭೂ ಮಾಲಿಕ ತಿಮ್ಮಪ್ಪ ದಂಪತಿಗೆ ಮೂವರು ಮಕ್ಕಳಿದ್ದು, ಅನಾರೋಗ್ಯದಿಂದ ತಂದೆ ಮೃತಪಟ್ಟ ಬಳಿಕ ಅವರ ಮಕ್ಕಳ ಮಧ್ಯೆ ಆಸ್ತಿ ವಿಚಾರವಾಗಿ ಮನಸ್ತಾಪವಾಗಿತ್ತು. ಮೈಸೂರಿನಲ್ಲಿ ನರೇಂದ್ರ ವಕೀಲನಾಗಿದ್ದರೆ, ಬೆಂಗಳೂರಿನಲ್ಲಿ ಆತನ ಸೋದರ ಕ್ರಿಮಿನಲ್ ಲಾಯರ್ ಆಗಿದ್ದ. ಪದೇ ಪದೇ ಆಸ್ತಿ ಪಾಲು ವಿಷಯವಾಗಿ ಅಣ್ಣ-ತಮ್ಮಂದಿರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶುಕ್ರವಾರ ಬೆಳಗ್ಗೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶಿಗರು ಸೇರಿ 10 ಪೆಡ್ಲರ್ಸ್ ಸೆರೆ: ₹88.22 ಲಕ್ಷದ ಡ್ರಗ್ಸ್‌ ಜಪ್ತಿ 
ಬೆಂಗಳೂರು:ನಗರ ಪೊಲೀಸರು ಐದು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳು ಸೇರಿ 10 ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹88.22 ಲಕ್ಷದ ಮೌಲ್ಯದ 787 ಗ್ರಾಂ ಎಂಡಿಎಂಎ, 22 ಕೆ.ಜಿ. ಗಾಂಜಾ, ಮೂರು ದ್ವಿಚಕ್ರ ವಾಹನ ಹಾಗೂ ಐದು ಮೊಬೈಲ್‌ ಜಪ್ತಿ ಮಾಡಿದ್ದಾರೆ.

ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರು ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹77 ಲಕ್ಷ ಮೌಲ್ಯದ 743 ಗ್ರಾಂ ಎಂಡಿಎಂಎ, 1 ಕೆ.ಜಿ. 231 ಗ್ರಾಂ ಗಾಂಜಾ, 4 ಮೊಬೈಲ್‌ ಫೋನ್‌ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಕೆಎಂಎಫ್‌ ಕಾಂಪೌಂಡ್‌ ಬಳಿ ಅಪರಿಚಿತರು ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಇಬ್ಬರು ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

Breaking news: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ನೇಹಿತನ ಕಾರಿಗೆ ಲಾರಿ‌ ಡಿಕ್ಕಿ, ಕಾರು ನುಜ್ಜುಗುಜ್ಜು!

ಹೊರರಾಜ್ಯದ ಪೆಡ್ಲರ್‌ ಬಂಧನ:
ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹2 ಲಕ್ಷ ಮೌಲ್ಯದ 5 ಕೆ.ಜಿ. 210 ಗ್ರಾಂ ಗಾಂಜಾ, 1 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಸಿಂಗಯ್ಯನಪಾಳ್ಯದ ರೈಲ್ವೆ ಟ್ರಾಕ್‌ ಬಳಿ ಅಪರಿಚಿತ ವ್ಯಕ್ತಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಕಾಟನ್‌ಪೇಟೆ ವ್ಯಾಪ್ತಿಯ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹60 ಸಾವಿರ ಮೌಲ್ಯದ 30 ಗ್ರಾಂ ಎಂಡಿಎಂಎ ಜಪ್ತಿ ಮಾಡಿದ್ದಾರೆ. ಕಾಟನ್‌ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ: 
ಬಳಿ ಗಾಂಜಾ ಮಾರಾಟಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹7 ಲಕ್ಷ ಮೌಲ್ಯದ 14 ಕೆ.ಜಿ. 20 ಗ್ರಾಂ ಗಾಂಜಾ ಹಾಗೂ ಎರಡು ಬೈಕ್‌ ಜಪ್ತಿ ಮಾಡಲಾಗಿದೆ.

ಕಲಾಸಿಪಾಳ್ಯ ಎಫ್ ಸ್ಟ್ರೀಟ್‌ನ ಟಿಪ್ಪು ಆರ್ಮರಿ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹1.62 ಲಕ್ಷ ಮೌಲ್ಯದ 9 ಗ್ರಾಂ ಎಂಡಿಎಂಎ, 1 ಕೆ.ಜಿ. 551 ಗ್ರಾಂ ಗಾಂಜಾ ಹಾಗೂ 1 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.