ಕರ್ನಾಟಕದ ಜೈಲುಗಳು ಅತಿಯಾದ ಜನಸಂದಣಿ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ. ಹೊಸ ಡಿಜಿಪಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ, ತಂತ್ರಜ್ಞಾನದ ಬಳಕೆ ಮತ್ತು ಸಮಗ್ರ ಸುಧಾರಣೆಗಳ ಮೂಲಕ ಈ ವ್ಯವಸ್ಥೆಯನ್ನು ಬದಲಾಯಿಸುವ ಸಾಧ್ಯತೆಗಳನ್ನು ಈ ಲೇಖನ ಪರಿಶೀಲಿಸುತ್ತದೆ.

ಮ್ಮ ಜೈಲುಗಳು ತಪ್ಪು ಮಾಡಿರುವ ವ್ಯಕ್ತಿಗಳಿಗೆ ಜೀವನದಲ್ಲಿ ಸುಧಾರಣೆ ಹೊಂದಲು ಒಂದು ಎರಡನೇ ಅವಕಾಶ ಕಲ್ಪಿಸುವ ತಾಣವಾಗಿರಬೇಕಿತ್ತು. ಅಲ್ಲಿ ಖೈದಿಗಳು ಹೊಸ ಕೌಶಲಗಳನ್ನು ಕಲಿತುಕೊಂಡು, ಹೊರಗೆ ಬರುವಾಗ ಉತ್ತಮ ಪ್ರಜೆಗಳಾಗಿ ಬದಲಾಗಬೇಕಿತ್ತು. ಆದರೆ ಇಂದು, ಕರ್ನಾಟಕದ ಜೈಲುಗಳು ಮೂಲ ಉದ್ದೇಶಗಳಿಂದ ಸಂಪೂರ್ಣ ಭಿನ್ನವಾಗಿವೆ. ಸುಧಾರಣಾ ಕೇಂದ್ರಗಳಾಗುವ ಬದಲಾಗಿ, ರಾಜ್ಯದ ಜೈಲುಗಳು ಮುಕ್ತವಾಗಿ ಮಾದಕ ದ್ರವ್ಯಗಳು ಸಂಚರಿಸುವ, ಭಯೋತ್ಪಾದಕರು ಮತ್ತು ಭೂಗತ ಪಾತಕಿಗಳಿಗೆ ಫೋನ್‌ಗಳು ಲಭಿಸುವ, ಅತ್ಯಾಚಾರಿಗಳು ಕಂಬಿಯ ಹಿಂದಿನಿಂದಲೇ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುವ ತಾಣಗಳಾಗಿವೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ನಮ್ಮ ಜೈಲು ವ್ಯವಸ್ಥೆಯಲ್ಲಿ ಇರುವ ಎಲ್ಲ ಸಮಸ್ಯೆಗಳನ್ನೂ ತೆರೆದಿಟ್ಟಿವೆ. ಕೇವಲ ಒಂದು ತಿಂಗಳ ಹಿಂದೆ, ಜೈಲಿನ ಅಧಿಕಾರಿಗಳು ನಡೆಸಿದ ಹಠಾತ್ ದಾಳಿಯಲ್ಲಿ 15 ಮೊಬೈಲ್ ಫೋನ್‌ಗಳು, 11 ಸಿಮ್ ಕಾರ್ಡ್‌ಗಳು, ಚಾರ್ಜರ್‌ಗಳು, ಮತ್ತು ಇಯರ್ ಬಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಂದು ಇದು ಒಂದು ಬಾರಿಯ ಸಮಸ್ಯೆಯೇನಲ್ಲ. ನವೆಂಬರ್ 2025ರಲ್ಲಿ, ಓರ್ವ ಐಸಿಸ್‌ಗೆ ನೇಮಕಾತಿ ನಡೆಸುವಾತ, ಉಮೇಶ್ ರೆಡ್ಡಿ ಎಂಬ ಸರಣಿ ಅತ್ಯಾಚಾರಿ, ಮತ್ತು ತೆಲುಗು ನಟ ತರುಣ್ ತಮ್ಮ ಜೈಲಿನ ಕೋಣೆಗಳಲ್ಲೇ ಮುಕ್ತವಾಗಿ ಫೋನ್ ಬಳಸುವ, ಟಿವಿ ನೋಡುವ ವೀಡಿಯೋಗಳು ಹರಿದಾಡಿದ್ದವು. ಈ ಹಿಂದೆ, ನಟ ದರ್ಶನ್ ಜೈಲಿನ ಕೋಣೆಯಲ್ಲೂ ಆರಾಮಾಗಿ ಸಿಗರೆಟ್ ಸೇದುತ್ತಾ, ಹೋಟೆಲ್ ಕೋಣೆಯಲ್ಲಿರುವಂತೆ ಆರಾಮಾಗಿದ್ದ ದೃಶ್ಯಗಳು ಎಲ್ಲರಿಗೂ ಆಘಾತ ಉಂಟುಮಾಡಿದ್ದವು.

ಅತಿದೊಡ್ಡ ಸಮಸ್ಯೆಯೆಂದರೆ, ಭಾರತದ ಜೈಲುಗಳು ಈಗ ಅಕ್ರಮ ವಸ್ತುಗಳಿಗೆ ಮಾರುಕಟ್ಟೆಗಳಾಗಿವೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿರುವ ಆಮಿರ್ ಖಾನ್ ಎಂಬ ಓರ್ವ ಮಾದಕ ದ್ರವ್ಯಗಳ ಪೂರೈಕೆದಾರ ಕಳ್ಳ ಸಾಗಣೆ ಮಾಡಿರುವ ಮೊಬೈಲ್ ಫೋನ್ ಬಳಸಿಕೊಂಡು, ತನ್ನ ಸಂಪೂರ್ಣ ಡ್ರಗ್ ಜಾಲವನ್ನು ನಿರ್ವಹಿಸುತ್ತಿದ್ದ. ಆತನ ಸಹಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖರೀದಿ ಆದೇಶ ತೆಗೆದುಕೊಂಡು, 71 ಲಕ್ಷ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ಪೂರೈಸಿದ್ದಾರೆ. ಆತನ ಫೋನನ್ನು ಪತ್ತೆಹಚ್ಚಲು ಪೊಲೀಸರು ಜೈಲಿನಲ್ಲಿ ದಾಳಿ ಮಾಡಿದರೂ, ಅವರಿಗೆ ಏನನ್ನೂ ಪತ್ತೆಹಚ್ಚಲಾಗಲಿಲ್ಲ. ಇದು ಜೈಲಿನೊಳಗೆ ನಿಷಿದ್ಧ ವಸ್ತುಗಳನ್ನು ಎಷ್ಟು ಸುಲಭವಾಗಿ ಬಚ್ಚಿಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ, ಜೈಲರ್ ಮೊಬೈಲ್ ಫೋನ್ ಮತ್ತು ಮಾದಕ ದ್ರವ್ಯಗಳು ಜೈಲಿನೊಳಗೆ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿದ್ದಕ್ಕೆ ಇಬ್ಬರು ಖೈದಿಗಳು ಜೈಲರ್ ಮತ್ತು ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದರು. ಖೈದಿಗಳು ತಮ್ಮ ಜೀವನದಲ್ಲಿ ಶಿಸ್ತು ಮೂಡಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳ ಮೇಲೇ ಹಲ್ಲೆ ನಡೆಸುತ್ತಿದ್ದಾರೆಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ? ಕಾರಾಗೃಹಗಳ ನಿಯಂತ್ರಣದ ಕುರಿತು ಈ ಬೆಳವಣಿಗೆ ಸೂಚಿಸುವುದೇನು?

ಜೈಲಿನ ಗೋಡೆಗಳನ್ನು ದಾಟಿರುವ ಮೂಲಭೂತ ಸಮಸ್ಯೆಗಳು

ಕರ್ನಾಟಕದಲ್ಲಿ 54 ಜೈಲುಗಳಿದ್ದು, ಅಲ್ಲಿ 12,000 ಖೈದಿಗಳನ್ನು ಇಡಲು ಅವಕಾಶವಿದೆ. ಆದರೆ, ಈ ಜೈಲುಗಳೊಳಗೆ 18,000ಕ್ಕೂ ಹೆಚ್ಚಿನ ಖೈದಿಗಳನ್ನು ಇಡಲಾಗಿದೆ. ಕೇವಲ 4,244 ಖೈದಿಗಳಿಗೆ ನಿರ್ಮಿಸಲಾಗಿರುವ ಪರಪ್ಪನ ಅಗ್ರಹಾರದಲ್ಲೇ 5,000ಕ್ಕೂ ಹೆಚ್ಚಿನ ಖೈದಿಗಳಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹ ಎಷ್ಟು ನಿಬಿಡವಾಗಿದೆ ಎಂದರೆ, ಅಲ್ಲಿ ಸುತ್ತಮುತ್ತ ನಡೆದಾಡಲೂ ಕಷ್ಟಕರ ಪರಿಸ್ಥಿತಿಯಿದೆ.

ಆದರೆ, ಅತಿಯಾದ ಜನ ತುಂಬಿರುವುದು ಮೂಲಭೂತ ಸಮಸ್ಯೆಗಳಲ್ಲಿ ಒಂದಷ್ಟೇ. ಬಹುತೇಕ ಕಾರಾಗೃಹಗಳಲ್ಲಿ ಖೈದಿಗಳ ಸಾಗಾಣಿಕೆಗೆ ಬೇಕಾದಷ್ಟು ವಾಹನಗಳಿಲ್ಲ, ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದರೆ ಅವರನ್ನು ಸಾಗಿಸುವ, ನ್ಯಾಯಾಲಯಕ್ಕೆ ಕರೆದೊಯ್ಯುವ ವ್ಯವಸ್ಥೆಗಳಿಲ್ಲ. ಯಾರಾದರೂ ಖೈದಿಗೆ ತುರ್ತು ಚಿಕಿತ್ಸೆ ಬೇಕಾದರೆ, ಆಂಬ್ಯುಲೆನ್ಸ್ ಕೊರತೆಯ ಕಾರಣದಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸುವುದು ಕಷ್ಟಕರವಾಗುತ್ತದೆ. ಖೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಬೇಕಾದರೂ ಜೈಲುಗಳಲ್ಲಿ ಸೀಮಿತ ಸಂಖ್ಯೆಯ ವಾಹನಗಳು ಇರುವುದರಿಂದ ನ್ಯಾಯ ಲಭಿಸುವುದೂ ವಿಳಂಬವಾಗುತ್ತದೆ.

ಜೈಲುಗಳು ಹೀಗೆ ಮಿತಿಮೀರಿ ತುಂಬಿದಾಗ, ಸಿಬ್ಬಂದಿಗಳಿಗೆ ಎಲ್ಲರ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈಗ ಕೇವಲ 400 ಸಿಬ್ಬಂದಿಗಳು ಪರಪ್ಪನ ಅಗ್ರಹಾರದಲ್ಲಿ 5,000ಕ್ಕೂ ಹೆಚ್ಚು ಖೈದಿಗಳನ್ನು ನಿರ್ವಹಿಸುತ್ತಿದ್ದಾರೆ. ಅಂದರೆ, ಜೈಲಿನ ಪ್ರತಿ ಅಧಿಕಾರಿಯೂ ತಲಾ 12ಕ್ಕೂ ಹೆಚ್ಚು ಖೈದಿಗಳ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಇಂತಹ ಗಂಭೀರ ಕೊರತೆಯ ನಡುವೆ ಸಿಬ್ಬಂದಿಗಳು ಸಿಬ್ಬಂದಿಗಳು ಹೇಗೆ ಭದ್ರತೆಯನ್ನು ನಿರ್ವಹಿಸಲು ಸಾಧ್ಯ? ಈ ಕಾರಣದಿಂದಲೇ ಇಷ್ಟೊಂದು ದಾಳಿಗಳು ನಡೆದರೂ ಫೋನ್‌ಗಳು ಮತ್ತು ಮಾದಕ ವಸ್ತುಗಳು ಜೈಲಿನೊಳಗೆ ಬರುತ್ತಲೇ ಇರುತ್ತವೆ.

ಕರ್ನಾಟಕದ ಬಹುತೇಕ ಖೈದಿಗಳು, ಅಂದರೆ, 70%ಕ್ಕೂ ಹೆಚ್ಚು ಜನರು ಇನ್ನೂ ವಿಚಾರಣೆಗೆ ಒಳಗಾಗಿಲ್ಲ, ಅಪರಾದಿಗಳೆಂದು ಘೋಷಿತರೂ ಆಗಿಲ್ಲ. ಅವರಿನ್ನೂ ತಮ್ಮ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಕೆಲವು ಬಡ ಜನರು ಜಾಮೀನಿಗೆ ಹಣ ಹೊಂದಿಸಲು ಸಾಧ್ಯವಾಗದೆ, ಸಣ್ಣ ಪುಟ್ಟ ಅಪರಾಧಗಳಿಗೆ ವರ್ಷಾನುಗಟ್ಟಲೆ ಜೈಲಿನಲ್ಲೇ ಕಳೆಯುತ್ತಾರೆ. ಈ ಸಮಯದಲ್ಲಿ ಅವರು ಜೈಲಿನೊಳಗಿರುವ ದೊಡ್ಡ ಅಪರಾಧಿಗಳೊಡನೆ ಸೇರಿ, ಅಪರಾಧಗಳನ್ನು ನಡೆಸುವ ಇನ್ನಷ್ಟು ಹೊಸ ವಿಧಾನಗಳನ್ನು ಕಲಿಯುತ್ತಾರೆ. ಬಳಿಕ ಜೈಲಿನಿಂದ ಹೊರ ಬರುವಾಗ ಇನ್ನಷ್ಟು ಕೆಟ್ಟವರಾಗಿಯೇ ಬರುತ್ತಾರೆ.

ಜೈಲಿನ ಒಳಗೆ ಜೀವನವಂತೂ ತೀರಾ ಕೆಟ್ಟದಾಗಿರುತ್ತದೆ. ಖೈದಿಗಳಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲ, ಶೌಚಾಲಯಗಳು ತೀರಾ ಕೊಳಕಾಗಿರುತ್ತವೆ, ಮತ್ತು ವೈದ್ಯಕೀಯ ಸೌಲಭ್ಯಗಳು ತೀರಾ ಕೆಳಮಟ್ಟದಲ್ಲಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಖೈದಿಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಜೀವಿಸಿದಾಗ, ಅವರು ವಿಪರೀತ ಕೋಪ ಮತ್ತು ಹತಾಶೆಗೆ ಒಳಗಾಗುತ್ತಾರೆ. ಇದು ಮಾದಕದ್ರವ್ಯ ಪೂರೈಕೆದಾರರು ಮತ್ತು ಗ್ಯಾಂಗ್ ಸದಸ್ಯರಿಗೆ ಅವರನ್ನು ಸೇರಿಸಿಕೊಳ್ಳಲು ಅನುಕೂಲವಾಗುತ್ತದೆ.

ಸಿಬ್ಬಂದಿಗಳನ್ನು ದೂರುವ ಬದಲು, ಸಮಸ್ಯೆಗಳನ್ನು ಅರಿಯೋಣ

ಕಾರಾಗೃಹಗಳಲ್ಲಿ ನಡೆಯುವ ಎಲ್ಲ ಭ್ರಷ್ಟಾಚಾರ ಮತ್ತು ಭದ್ರತಾ ವೈಫಲ್ಯಗಳಿಗೆ ನಾವು ಕೇವಲ ವಾರ್ಡನ್‌ಗಳನ್ನು ದೂರಲು ಸಾಧ್ಯವಿಲ್ಲ. ಜೈಲಿನ ಸತ್ಯ ನಾವು ಅಂದುಕೊಂಡದ್ದಕ್ಕಿಂತಲೂ ಸಂಕೀರ್ಣವಾಗಿದೆ. ಜೈಲಿನ ಅಧಿಕಾರಿಗಳು ಸ್ವತಃ ಅತ್ಯಂತ ಕೆಟ್ಟ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರು ಮಿತಿಮೀರಿ ಕೆಲಸ ಮಾಡಿದರೂ, ಅತ್ಯಂತ ಕಡಿಮೆ ಸಂಬಳ ಪಡೆಯುತ್ತಾರೆ. ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಬೇಕಾದ ಮೂಲಭೂತ ವ್ಯವಸ್ಥೆಗಳೂ ಅವರಿಗೆ ಲಭ್ಯವಿರುವುದಿಲ್ಲ.

ಓರ್ವ ಜೈಲಿನ ವಾರ್ಡನ್ ಸರಿಯಾದ ಶೌಚಾಲಯ ವ್ಯವಸ್ಥೆಗಳೂ ಇಲ್ಲದೆ, ವಿಶ್ರಾಂತಿ ಕೊಠಡಿಗಳಿಲ್ಲದೆ, ಯಾವುದೇ ರಜೆಯ ಸೌಲಭ್ಯಗಳಿಲ್ಲದೆ 12ರಿಂದ 14 ಗಂಟೆ ನಿರಂತರವಾಗಿ ದುಡಿಯುತ್ತಾರೆ. ಅವರು ಸರಿಯಾದ ಹೆಚ್ಚುವರಿ ಸಿಬ್ಬಂದಿ ಮತ್ತು ಬೆಂಬಲಗಳೂ ಇಲ್ಲದೆ ಅಪಾಯಕಾರಿ ಅಪರಾಧಿಗಳೊಡನೆ ಕಾರ್ಯಾಚರಿಸಬೇಕಾಗುತ್ತದೆ. ಬಹಳಷ್ಟು ಜೈಲಿನ ವಾರ್ಡನ್‌ಗಳಿಗೆ ಹಲವಾರು ವರ್ಷಗಳಿಂದ ಸಂಬಳವೇ ಹೆಚ್ಚಳ ಕಂಡಿಲ್ಲ. ಅವರ ವಸತಿ ಗೃಹಗಳಂತೂ ಕೆಟ್ಟ ಪರಿಸ್ಥಿತಿಯಲ್ಲಿರುತ್ತವೆ. ಜೈಲಿನ ಸಿಬ್ಬಂದಿಗಳನ್ನು ಆಗಾಗ ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡುವುದರಿಂದ, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವುದೂ ಕಷ್ಟಕರವಾಗುತ್ತದೆ.

ಸಿಬ್ಬಂದಿಗಳು ಇಂತಹ ಕೆಟ್ಟ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಾಗ, ಅವರಲ್ಲಿ ಹಲವರು ಭ್ರಷ್ಟಾಚಾರದ ಸುಳಿಗೆ ಬೀಳುವ ಸಾಧ್ಯತೆಗಳಿವೆ. ಮೊಬೈಲ್ ಫೋನ್ ಜೈಲಿನೊಳಗೆ ಬರುವಾಗ ಕಣ್ಣು ಮುಚ್ಚಿಕೊಂಡಿರಲು ಯಾರೋ ಖೈದಿ ಸಿಬ್ಬಂದಿಗೆ 50,000 ರೂಪಾಯಿ ಲಂಚ ನೀಡುತ್ತಾನೆ. ಕೇವಲ 30,000 ರೂಪಾಯಿ ಸಂಬಳ ಪಡೆದು, ಮಕ್ಕಳ ಶಾಲಾ ಶುಲ್ಕ ಹೊಂದಿಸಲು ಚಿಂತೆಗೊಳಗಾಗುವ ಜೈಲಿನ ವಾರ್ಡನ್‌ಗೆ ಈ ಹಣದ ಆಮಿಷ ಸೆಳೆಯುತ್ತದೆ. ಹಾಗೆಂದು ಇದು ಭ್ರಷ್ಟಾಚಾರದ ಸಮರ್ಥನೆಯಲ್ಲ, ಆದರೆ ವಾಸ್ತವವಾಗಿ ಏನಾಗುತ್ತದೆ ಎನ್ನುವುದರ ಚಿತ್ರಣ.

ಇದಕ್ಕೆ ಪರಿಹಾರ ಕೇವಲ ಶಿಕ್ಷೆ ನೀಡುವುದಲ್ಲ. ಬದಲಿಗೆ, ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯುವುದು. ಕರ್ನಾಟಕದ ಜೈಲುಗಳಲ್ಲಿ 30% ಸಿಬ್ಬಂದಿ ಕೊರತೆಯಿದ್ದು, ಇದರ ಪೂರೈಕೆಗೆ ಭಾರೀ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಅವರಿಗೆ ಉತ್ತಮ ಸಂಬಳ, ಉತ್ತಮ ವಸತಿ ನಿಲಯಗಳು, ಅವರ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸಬೇಕು. ಸಿಬ್ಬಂದಿಗಳನ್ನು ಆಗಾಗ ಬದಲಿಸುವುದರಿಂದ, ಅವರು ಖೈದಿಗಳೊಡನೆ ಆತ್ಮೀಯರಾಗದಂತೆ ಖಾತ್ರಿಪಡಿಸಬೇಕು. ಒತ್ತಡ ಮತ್ತು ಆಘಾತಗಳಿಗೆ ಒಳಗಾಗಿರುವ ಸಿಬ್ಬಂದಿಗಳಿಗೆ ಸಮಾಲೋಚನೆ ನಡೆಸಬೇಕು.

ವಾರ್ಡನ್‌ಗಳಿಗೆ ಒಳ್ಳೆಯ ಕಾರ್ಯಾಚರಣಾ ವಾತಾವರಣ, ಉತ್ತಮ ಸಂಬಳ, ಮತ್ತು ಬೆಂಬಲ ವ್ಯವಸ್ಥೆ ಒದಗಿಸಿದರೆ, ಅವರು ಲಂಚಕ್ಕೆ ಕೈಚಾಚುವ ಸಾಧ್ಯತೆಗಳು ಕಡಿಮೆಯಾಗಬಹುದು. ಇನ್ನು ಸಾಕಷ್ಟು ಸಿಬ್ಬಂದಿಗಳ ನೇಮಕವಾದಾಗ, ಯಾವ ಒಬ್ಬ ವ್ಯಕ್ತಿಗೆ ಅಪಾರ ಪ್ರಮಾಣದ ಹಣ ಅಥವಾ ನಿಷಿದ್ಧ ವಸ್ತುಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ತಂತ್ರಜ್ಞಾನ ಎಲ್ಲವನ್ನೂ ಮೇಲ್ವಿಚಾರಣೆ ಮಾಡುವಾಗ, ಸಹಜವಾಗಿಯೇ ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆಯಾಗುತ್ತದೆ.

ಹೊಸ ಡಿಜಿಪಿ ಅಲೋಕ್ ಕುಮಾರ್ ಅವರ ಭರವಸೆ

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಕರ್ನಾಟಕದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದು, ವ್ಯವಸ್ಥೆ ಸುಧಾರಿಸುವ ಹೊಸ ಭರವಸೆ ಮೂಡಿದೆ. 1994ನೇ ಸಾಲಿನ ಐಪಿಎಸ್ ಅಧಿಕಾರಿಯಾದ ಅಲೋಕ್ ಕುಮಾರ್ ಅವರು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆ ಅಪಘಾತಗಳ ಸಾವಿನ ಪ್ರಮಾಣವನ್ನು ಅರ್ಧದಷ್ಟು ಕಡಿಮೆಗೊಳಿಸಿ, ಹೆಚ್ಚಿನ ಜನಪ್ರಿಯತೆ ಗಳಿಸಿದರು. ಅವರು ಎಎನ್‌ಪಿಆರ್ ಕ್ಯಾಮರಾಗಳಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು, ಕಾನೂನು ಉಲ್ಲಂಘಿಸುವವರನ್ನು ಪತ್ತೆಹಚ್ಚಿ, ಬಹಳಷ್ಟು ಜೀವಗಳನ್ನು ರಕ್ಷಿಸಿದರು.

ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಅಲೋಕ್ ಕುಮಾರ್ ಅವರು ಬೆಂಗಳೂರು, ಮೈಸೂರು, ಮತ್ತು ಕಾರವಾರ ಜಿಲ್ಲಾ ಕಾರಾಗೃಹಗಳಲ್ಲಿ ಅಚ್ಚರಿಯ ದಾಳಿಗಳಿಗೆ ಆದೇಶ ನೀಡಿದ್ದಾರೆ. ಅವರ ತಂಡ ಈಗಾಗಲೇ 13 ಮೊಬೈಲ್ ಫೋನ್‌ಗಳು ಮತ್ತು 6 ಗಾಂಜಾದ ಕಟ್ಟುಗಳನ್ನು ವಶಪಡಿಸಿಕೊಂಡಿವೆ. ಕಾರವಾರ ಜೈಲಿನಲ್ಲಿ ಆಕ್ರಮಣಕಾರಿ ವರ್ತನೆ ತೋರಿದ ನಾಲ್ವರು ಖೈದಿಗಳನ್ನು ಬೇರೆ ಜೈಲುಗಳಿಗೆ ವರ್ಗಾಯಿಸಲಾಗಿದೆ. ಇದು ಜೈಲುಗಳಲ್ಲಿ ಮರಳಿ ಶಿಸ್ತು ಮೂಡಿಸಲು ಅಲೋಕ್ ಕುಮಾರ್ ಬದ್ಧರಾಗಿರುವುದಕ್ಕೆ ಸಾಕ್ಷಿಯಾಗಿದೆ.

ಹಾಗೆಂದು ಕೇವಲ ದಾಳಿಗಳಿಂದಷ್ಟೇ ಸಮಸ್ಯೆ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಅಲೋಕ್ ಕುಮಾರ್ ಅವರಿಗೂ ತಿಳಿದಿದೆ. ಅವರ ಮುಂದೆ ಈಗ ಇನ್ನೂ ದೊಡ್ಡ ಸವಾಲಿದೆ. ಜೈಲಿನ ಆಮೂಲಾಗ್ರ ವ್ಯವಸ್ಥೆಯನ್ನು ಸುಧಾರಿಸುತ್ತಾ, ಇದೇ ವೇಳೆ ಸಿಬ್ಬಂದಿಗಳ ಕೆಲಸದ ಸ್ಥಿತಿಗಳನ್ನು ಸುಧಾರಿಸಿ, ಪುನರ್ವಸತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಿದೆ. ಇದಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಂಡು, ಮಾನವರ ಮೇಲಿನ ಅವಲಂಬನೆ ಕಡಿಮೆಗೊಳಿಸುವುದೂ ಮುಖ್ಯವಾಗಿದೆ.

ತಂತ್ರಜ್ಞಾನ ಪ್ರಥಮ ಕಾರ್ಯವಿಧಾನ

ತಂತ್ರಜ್ಞಾನವನ್ನು ಸ್ಮಾರ್ಟ್ ಆಗಿ ಬಳಸುವ ಮೂಲಕ ಅಲೋಕ್ ಕುಮಾರ್ ಅವರು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶಸ್ಸು ಸಾಧಿಸಿದ್ದರು. ಅವರು ಇದೇ ವಿಧಾನವನ್ನು ರಾಜ್ಯದ ಜೈಲುಗಳಿಗೂ ಅನ್ವಯಿಸಬಹುದು. ಕೇವಲ ಮಾನವ ಕಣ್ಗಾವಲಿನ ಮೇಲೆ ಅವಲಂಬಿಸುವ ಬದಲು, ಜೈಲುಗಳ ಪ್ರತಿಯೊಂದು ಕಾರಿಡಾರ್‌ಗಳಲ್ಲಿ, ಸೆಲ್‌ಗಳಲ್ಲಿ, ಮತ್ತು ಭೇಟಿಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಈ ಕ್ಯಾಮರಾಗಳು ಒಂದು ಕೇಂದ್ರ ನಿಯಂತ್ರಣ ಕೇಂದ್ರದಿಂದ 24/7 ನಿರ್ವಹಿಸಲ್ಪಡಬೇಕು.

ಅನಧಿಕೃತ ಮೊಬೈಲ್ ಬಳಕೆಯನ್ನು ತಡೆಯುವ ಸಲುವಾಗಿ, ಜೈಲುಗಳಲ್ಲಿ ಪ್ರಬಲ ಮೊಬೈಲ್ ಫೋನ್ ಜಾಮರ್‌ಗಳನ್ನು ಅಳವಡಿಸಬೇಕು. ಸಿಬ್ಬಂದಿ, ಭೇಟಿ ನೀಡುವವರು, ವಕೀಲರು, ಪೂರೈಕೆದಾರರು ಸೇರಿದಂತೆ ಜೈಲಿನೊಳಗೆ ಬಂದು ಹೋಗುವ ಎಲ್ಲರ ಮಾಹಿತಿಯನ್ನೂ ದಾಖಲಿಸುವ ಬಯೋಮೆಟ್ರಿಕ್ ವಿಧಾನ ಜಾರಿಗೆ ಬರಬೇಕು. ಎಕ್ಸ್ ರೇ ಸ್ಕ್ಯಾನರ್‌ಗಳು ಮತ್ತು ಮೆಟಲ್ ಡಿಟೆಕ್ಟರ್‌ಗಳು ಜೈಲೊಳಗೆ ಬರುವ ಪ್ರತಿಯೊಂದು ಪಾರ್ಸೆಲ್, ಮತ್ತು ಆಹಾರ ವಸ್ತುಗಳನ್ನು ಪರಿಶೀಲಿಸಬೇಕು. ಜೈಲೊಳಗೆ ಬರುವವರನ್ನು ಸಿಬ್ಬಂದಿಗಳು ತಪಾಸಣೆ ನಡೆಸುವ ಬದಲು, ದೇಹದ ಸ್ಕ್ಯಾನರ್‌ಗಳನ್ನು ಬಳಸಬೇಕು.

ಖೈದಿಗಳ ಚಲನವಲನ, ಭೇಟಿ ನೀಡುವವರ ಮಾಹಿತಿ, ಮತ್ತು ಕೋರ್ಟ್ ದಿನಾಂಕಗಳನ್ನು ದಾಖಲಿಸಲು ಕಾಗದ ಪತ್ರಗಳ ಬದಲಿಗೆ ಡಿಜಿಟಲ್ ರಿಜಿಸ್ಟರ್‌ಗಳನ್ನು ಬಳಸಬೇಕು. ಜೈಲಿನ ವಾಹನಗಳನ್ನು ಜಿಪಿಎಸ್ ಮೂಲಕ ನೈಜ ಸಮಯದಲ್ಲಿ ಗಮನಿಸಬೇಕು. ಯಾರಾದರೂ ಖೈದಿಯ ನ್ಯಾಯಾಲಯದ ವಿಚಾರಣೆಯ ದಿನ ತಪ್ಪಿಹೋದರೆ, ಅಥವಾ ಜೈಲಿನ ವಾಹನ ತನ್ನ ಮಾರ್ಗ ಬದಲಿಸಿದರೆ, ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಬೇಕು.

ತಂತ್ರಜ್ಞಾನವೇ ಎಲ್ಲದರ ನಿರ್ವಹಣೆ ನಡೆಸುವಾಗ, ಮಾನವ ಭ್ರಷ್ಟಾಚಾರ ಕಷ್ಟಕರವಾಗುತ್ತದೆ. ಕ್ಯಾಮರಾ ದೃಶ್ಯಾವಳಿಗಳು ಎಲ್ಲವನ್ನೂ ತೋರಿಸುವಾಗ, ಜೈಲಿನ ವಾರ್ಡನ್ ತಾನು ಫೋನ್ ಒಳಬಂದದ್ದು ನೋಡಿಲ್ಲ ಎಂದು ಸುಳ್ಳಾಡಲು ಸಾಧ್ಯವಿಲ್ಲ. ಪ್ರತಿಯೊಂದು ಪಾರ್ಸೆಲ್ ಸಹ ಸ್ಕ್ಯಾನರ್‌ಗಳ ಮೂಲಕ ತಪಾಸಣೆಗೆ ಒಳಗಾಗುವಾಗ, ಓರ್ವ ಪೂರೈಕೆದಾರ ಮಾದಕ ವಸ್ತುಗಳನ್ನು ಒಳಗೆ ಒಯ್ಯಲು ಸಾಧ್ಯವಿಲ್ಲ. ಈ ಮೂಲಕ ಜನರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ವ್ಯವಸ್ಥೆಯ ನಂಬಿಕಾರ್ಹತೆಯನ್ನು ಹೆಚ್ಚಿಸಬಹುದು.

ವಿವಿಧ ಹಂತಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ

ನೂತನ ಡಿಜಿಪಿಯವರು ಸರ್ಕಾರ ಮೂಲಭೂತ ವ್ಯವಸ್ಥೆಗಳ ಮೇಲೆ ಭಾರೀ ಹೂಡಿಕೆ ನಡೆಸುವಂತೆ ಆಗ್ರಹಿಸಬೇಕು. ಅಂದರೆ, ಖೈದಿಗಳ ದಟ್ಟಣೆಯನ್ನು ಕಡಿಮೆಗೊಳಿಸಲು ಕರ್ನಾಟಕದಾದ್ಯಂತ ಕನಿಷ್ಠ 10-15 ನೂತನ ಕಾರಾಗೃಹಗಳನ್ನು ಸ್ಥಾಪಿಸಬೇಕು. ಈಗಾಗಲೇ ಇರುವ ಜೈಲುಗಳನ್ನು ಇನ್ನಷ್ಟು ವಿಸ್ತರಿಸಿ, ವಿಚಾರಣಾಧೀನ ಖೈದಿಗಳು ಮತ್ತು ಅಪರಾಧಿಗಳನ್ನು ಪ್ರತ್ಯೇಕಗೊಳಿಸಬೇಕು. ಅದರಲ್ಲೂ ವಿವಿಧ ವರ್ಗಗಳ ಅಪರಾಧಿಗಳನ್ನು, ಅಂದರೆ ಮೊದಲ ಬಾರಿಗೆ ಅಪರಾಧ ಮಾಡಿದವರು ಮತ್ತು ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿದವರನ್ನು ಪ್ರತ್ಯೇಕವಾಗಿಡಬೇಕು.

ಜೈಲಿನಲ್ಲಿ ಅಪಾರ ವಾಹನಗಳ ಅಗತ್ಯವಿದೆ. ಅಂದರೆ, ವೈದ್ಯಕೀಯ ಅವಶ್ಯಕತೆಗಳಿಗೆ ಆಂಬ್ಯುಲೆನ್ಸ್, ನ್ಯಾಯಾಲಯಕ್ಕೆ ಖೈದಿಗಳನ್ನು ಸಾಗಿಸಲು ಬಸ್, ಖೈದಿಗಳ ವರ್ಗಾವಣೆಗೆ ವ್ಯಾನ್‌ಗಳು, ಸಿಬ್ಬಂದಿ ಸಾಗಣೆಗೆ ಕಾರುಗಳ ಅವಶ್ಯಕತೆಯಿದೆ. ಜೈಲಿನ ಆಸ್ಪತ್ರೆಗಳು ಆಧುನಿಕ ಉಪಕರಣಗಳು, ಪೂರ್ಣಾವಧಿಯ ವೈದ್ಯರು, ಮತ್ತು ಔಷಧ ಪೂರೈಕೆಯನ್ನು ಹೊಂದಬೇಕು. ಇನ್ನು ಅಡುಗೆ ಮನೆಗಳ ಸ್ವಚ್ಛತೆ, ಸಂಗ್ರಹಣಾ ವ್ಯವಸ್ಥೆ, ಮತ್ತು ನಿಯಂತ್ರಣ ವ್ಯವಸ್ಥೆಗಳು ಅಭಿವೃದ್ಧಿ ಹೊಂದಬೇಕು.

ಸಿಬ್ಬಂದಿಗಳ ವಸತಿ ನಿಲಯಗಳಂತೂ ತಕ್ಷಣವೇ ಸುಧಾರಣೆಗೊಳ್ಳಬೇಕು ಅಥವಾ ಹೊಸ ವಸತಿ ನಿಲಯಗಳ ನಿರ್ಮಾಣವಾಗಬೇಕು. ವಾರ್ಡನ್‌ಗಳಿಗೆ ಆರಾಮದಾಯಕ ಮನೆ, ನೀರು, ವಿದ್ಯುತ್ ಮತ್ತು ಅಂತರ್ಜಾಲದ ವ್ಯವಸ್ಥೆ ಲಭಿಸಬೇಕು. ಜೈಲಿನ ಆವರಣದಲ್ಲಿ ಸಿಬ್ಬಂದಿಗಳ ಮಕ್ಕಳಿಗಾಗಿ ಶಾಲೆ, ಮನೋರಂಜನಾ ವ್ಯವಸ್ಥೆಗಳು, ಮತ್ತು ಶಾಪಿಂಗ್ ವ್ಯವಸ್ಥೆ ಒದಗಿಸಿ, ಅವರನ್ನು ಏಕಾಂಗಿತನ ಕಾಡದಂತೆ ನೋಡಿಕೊಳ್ಳಬೇಕು.

ಸಮಗ್ರ ಪುನರ್ವಸತಿ ಮತ್ತು ಸುಧಾರಣಾ ಕಾರ್ಯಕ್ರಮಗಳು

ನೂತನ ಡಿಜಿಪಿಯವರ ಮುಂದಿರುವ ಅತ್ಯಂತ ಮುಖ್ಯ ಕಾರ್ಯವೆಂದರೆ, ಜೈಲುಗಳನ್ನು ಶಿಕ್ಷೆಯ ತಾಣಗಳಿಂದ ಸುಧಾರಣೆ ಮತ್ತು ಪುನರ್ವಸತಿ ಕೇಂದ್ರಗಳನ್ನಾಗಿ ಪರಿವರ್ತಿಸುವುದು. ಇದಕ್ಕಾಗಿ ಏಕಕಾಲದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅವರು ಆಯೋಜಿಸಬೇಕಾಗುತ್ತದೆ.

ಮೊದಲನೆಯದಾಗಿ, ಎಲ್ಲ ಅನಕ್ಷರಸ್ಥ ಮತ್ತು 10ನೇ ತರಗತಿಯ ವ್ಯಾಸಂಗ ಪೂರ್ಣಗೊಳಿಸಿರದ ಖೈದಿಗಳಿಗೆ ಕಡ್ಡಾಯ ಶಿಕ್ಷಣ ಯೋಜನೆ ರೂಪಿಸಬೇಕು. ತರಗತಿಗಳನ್ನು ನಡೆಸುವ ಸಲುವಾಗಿ ಪೂರ್ಣಾವಧಿಯ ಶಿಕ್ಷಕರನ್ನು ನೇಮಿಸಬೇಕು. ಪುಸ್ತಕಗಳು, ದಿನಪತ್ರಿಕೆಗಳು, ಮತ್ತು ಶೈಕ್ಷಣಿಕ ವಿಚಾರಗಳನ್ನು ಒಳಗೊಂಡ ವಾಚನಾಲಯಗಳ ಸ್ಥಾಪನೆಯಾಗಬೇಕು. ಜೈಲಿನೊಳಗೆ ಶಿಕ್ಷಣ ಪೂರೈಸಿದ ಖೈದಿಗಳಿಗೆ ಪ್ರಮಾಣಪತ್ರ ನೀಡಿ, ಅದು ಅವರಿಗೆ ಬಿಡುಗಡೆಯಾದ ಬಳಿಕ ಉದ್ಯೋಗ ಪಡೆಯಲು ನೆರವಾಗುವಂತೆ ಮಾಡಬಹುದು.

ಎರಡನೆಯದಾಗಿ, ಖೈದಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ಅವರಿಗೆ ಪ್ರಾಯೋಗಿಕ ಕೌಶಲಗಳನ್ನು ಕಲಿಸಬೇಕು. ಮರಗೆಲಸ, ನಳ್ಳಿ ಕೆಲಸ, ಇಲೆಕ್ಟ್ರಿಕಲ್ ಕೆಲಸ, ಮೊಬೈಲ್ ದುರಸ್ತಿ, ಹೊಲಿಗೆ, ಕಂಪ್ಯೂಟರ್ ಮೂಲಭೂತ ತರಬೇತಿ, ವಾಹನ ಚಾಲನೆ, ಅಡುಗೆ, ಬೇಕರಿ, ಮುದ್ರಣ, ಕರಕುಶಲದಂತಹ ಕೌಶಲಗಳನ್ನು ಕಲಿಸಿ, ಅವರಿಗೆ ಪ್ರಮಾಣಪತ್ರ ವಿತರಿಸಬೇಕು. ಖೈದಿಗಳು ತಯಾರಿಸುವ ಉತ್ಪನ್ನಗಳನ್ನು ಹೊರಗಡೆ ಮಾರಾಟ ಮಾಡುವುದರಿಂದ, ಅವರಿಗೆ ಕೊಂಚ ಆದಾಯ ಮತ್ತು ಗೌರವ ಪಡೆಯಲು ಸಾಧ್ಯವಾಗುತ್ತದೆ.

ಮೂರನೆಯದಾಗಿ, ಎಲ್ಲ ಪ್ರಮುಖ ಜೈಲುಗಳಲ್ಲಿ ವ್ಯಸನ ಮುಕ್ತತೆಯ ಕೇಂದ್ರಗಳನ್ನು ತೆರೆಯಬೇಕು. ಕರ್ನಾಟಕದಲ್ಲಿ 1,700 ಖೈದಿಗಳು ಮಾದಕ ದ್ರವ್ಯಗಳ ಪ್ರಕರಣದಲ್ಲಿ ಬಂಧಿತರಾಗಿದ್ದು, ಅವರಿಗೆ ಪುನರ್ವಸತಿ ಒದಗಿಸುವುದು ಅನಿವಾರ್ಯವಾಗಿದೆ. ವೃತ್ತಿಪರ ಸಮಾಲೋಚಕರು, ಮನಶ್ಶಾಸ್ತ್ರಜ್ಞರು, ಮತ್ತು ವ್ಯಸನ ಮುಕ್ತತೆಯ ತಜ್ಞರು ವ್ಯಸನ ಪೀಡಿತ ಖೈದಿಗಳೊಡನೆ ಕಾರ್ಯಾಚರಿಸಬೇಕು. ಅವರನ್ನು ಮಾದಕ ದ್ರವ್ಯಗಳಿಂದ ಬಿಡಿಸಲು ಅವಶ್ಯಕ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಬೇಕು.

ನಾಲ್ಕನೆಯದಾಗಿ, ಮಾನಸಿಕ ಬೆಂಬಲವೂ ಬಹಳ ಮುಖ್ಯವಾಗಿದೆ. ಬಹಳಷ್ಟು ಖೈದಿಗಳು ಖಿನ್ನತೆ, ಆತಂಕ, ಆಘಾತ, ಮತ್ತು ಇತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅವರಿಗೆ ಸಮಾಲೋಚನೆ ಒದಗಿಸಲು ಮನಶ್ಶಾಸ್ತ್ರಜ್ಞರು ಲಭ್ಯವಿರಬೇಕು. ಹಿಂಸಾತ್ಮಕ ಅಪರಾಧಗಳನ್ನು ನಡೆಸಿ ಜೈಲಿಗೆ ಬಂದವರಿಗೆ ಕೋಪದ ನಿರ್ವಹಣೆಯ ತರಗತಿಗಳನ್ನು ನಡೆಸಿ, ಅವರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ನೆರವಾಗಬಹುದು. ಧ್ಯಾನ ಮತ್ತು ಯೋಗ ಕಾರ್ಯಕ್ರಮಗಳು ಅವರಿಗೆ ಮಾನಸಿಕ ಶಾಂತಿ ಮೂಡಿಸಲು ನೆರವಾಗಲಿವೆ.

ಐದನೆಯದಾಗಿ, ಕಾನೂನು ನೆರವಿನ ಘಟಕಗಳನ್ನು ಎಲ್ಲ ಕಾರಾಗೃಹಗಳಲ್ಲೂ ಇನ್ನಷ್ಟು ಬಲಪಡಿಸಬೇಕು. ಬಹಳಷ್ಟು ವಿಚಾರಣಾಧೀನ ಖೈದಿಗಳಿಗೆ ಜಾಮೀನು ಪ್ರಕ್ರಿಯೆ ಅರ್ಥವಾಗಿರದ್ದರಿಂದ, ಅಥವಾ ನ್ಯಾಯವಾದಿಗಳಿಗೆ ಹಣ ನೀಡುವ ಸಾಮರ್ಥ್ಯ ಇಲ್ಲದ್ದರಿಂದ, ಸುಮ್ಮನೇ ಜೈಲಿನಲ್ಲೇ ಉಳಿದಿರುತ್ತಾರೆ. ಕಾನೂನು ಸೇವೆಯ ಸ್ವಯಂಸೇವಕರು ಇಂತಹ ಖೈದಿಗಳನ್ನು ಭೇಟಿಯಾಗಿ, ಅವರಿಗೆ ಅವರ ಹಕ್ಕುಗಳನ್ನು ತಿಳಿಸಿ, ಜಾಮೀನು ಅರ್ಜಿ ಸಲ್ಲಿಸಲು ನೆರವಾಗಿ, ಅವರ ಪ್ರಕರಣ ವೇಗವಾಗುವಂತೆ ಮಾಡಬೇಕು.

ಆರನೆಯದಾಗಿ, ಕುಟುಂಬದೊಡನೆ ಸಂಪರ್ಕ ಹೊಂದುವ ಕಾರ್ಯಕ್ರಮಗಳಡಿ ಖೈದಿಗಳಿಗೆ ಕುಟುಂಬದವರೊಡನೆ ವೀಡಿಯೋ ಕರೆ ಮತ್ತು ಭೇಟಿಗೆ ಅವಕಾಶ ಕಲ್ಪಿಸಬೇಕು. ಖೈದಿಗಳು ತಮ್ಮ ಕುಟುಂಬದವರೊಡನೆ ಸಂಪರ್ಕದಲ್ಲಿದ್ದಾಗ, ಅವರು ಗ್ಯಾಂಗುಗಳಿಗೆ ಸೇರುವ, ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಕಡಿಮೆ. ಖೈದಿಗಳ ಮಕ್ಕಳು ಕಷ್ಟಪಡುವಂತಾಗಬಾರದು. ಇದಕ್ಕಾಗಿ ಅವರ ಶಿಕ್ಷಣ ಮತ್ತು ಕ್ಷೇಮಕ್ಕೆ ನೆರವಾಗುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

ಏಳನೆಯದಾಗಿ, ಬಿಡುಗಡೆಗೂ ಮುನ್ನ ನಡೆಸುವ ಸಮಾಲೋಚನೆ ಖೈದಿಗಳಿಗೆ ಜೈಲಿನ ಹೊರಗೆ ಜೀವನ ನಡೆಸಲು ಸಿದ್ಧರಾಗಿಸಬೇಕು. ಉದ್ಯೋಗ ಪಡೆಯುವುದು ಹೇಗೆ, ಬ್ಯಾಂಕ್ ಖಾತೆ ತೆರೆಯುವುದು ಹೇಗೆ, ಹಳೆಯ ಅಪರಾಧಿಗಳ ಸಂಪರ್ಕದಿಂದ ದೂರವಿರುವುದು ಹೇಗೆ, ಸಾಮಾಜಿಕ ಕಳಂಕವನ್ನು ಎದುರಿಸುವುದು ಹೇಗೆ ಎಲ್ಲವನ್ನೂ ಅವರ ಬಿಡುಗಡೆಗೆ ಮುನ್ನ ತಿಳಿಸಬೇಕು.

ಮುಂದಿದೆ ಸುದೀರ್ಘ ಹಾದಿ

ಡಿಜಿಪಿ ಅಲೋಕ್ ಕುಮಾರ್ ಅವರ ಮುಂದಿರುವ ಹಾದಿ ಸುದೀರ್ಘವೂ, ಸಂಕೀರ್ಣವೂ ಆಗಿದೆ. ಅವರು ಮೂಲಭೂತ ವ್ಯವಸ್ಥೆಗಳನ್ನು ಸುಧಾರಿಸಿ, ಸಾವಿರಾರು ನೂತನ ಸಿಬ್ಬಂದಿಗಳನ್ನು ನೇಮಕಗೊಳಿಸಿ, ಅವರಿಗೆ ತರಬೇತಿ ನೀಡಿ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಭ್ರಷ್ಟಾಚಾರದ ಬೇರುಗಳನ್ನು ತಡೆದು, ಸಮಗ್ರ ಪುನರ್ವಸತಿ ಯೋಜನೆಗಳನ್ನು ಜಾರಿಗೊಳಿಸಬೇಕು. ಮುಖ್ಯ ವಿಚಾರವೆಂದರೆ, ಇವೆಲ್ಲ ಕೆಲಸಗಳನ್ನೂ ಏಕಕಾಲದಲ್ಲಿ ನಡೆಸಬೇಕು. ಹಾಗೆಂದು ಇದೆಲ್ಲ ಒಂದೇ ರಾತ್ರಿಯಲ್ಲಿ, ಅಥವಾ ಒಂದು ವರ್ಷದೊಳಗೆ ನೆರವೇರಲು ಸಾಧ್ಯವಿಲ್ಲ.

ಸರ್ಕಾರವೂ ಅಲೋಕ್ ಕುಮಾರ್ ಅವರಿಗೆ ಅವಶ್ಯಕ ಬಜೆಟ್ ಒದಗಿಸುವ ಮೂಲಕ ಬೆಂಬಲವಾಗಿ ನಿಲ್ಲಬೇಕು. ವಾರ್ಷಿಕ ಜೈಲಿನ ಬಜೆಟ್ ಈಗಿರುವ ಕನಿಷ್ಠ ಪ್ರಮಾಣದಿಂದ ಬಹಳಷ್ಟು ಹೆಚ್ಚಳ ಕಾಣಬೇಕು. ಜೈಲುಗಳಿಗೆ ಹೂಡಿಕೆ ಮಾಡುವ ಹಣ ಖಂಡಿತಾ ವ್ಯರ್ಥವಲ್ಲ. ಅದು ಸಾರ್ವಜನಿಕರ ಸುರಕ್ಷತೆ ಮತ್ತು ಸಾಮಾಜಿಕ ಸುಧಾರಣೆಗೆ ಮಾಡುವ ಹೂಡಿಕೆ.

ನ್ಯಾಯಾಂಗವೂ ಇದಕ್ಕೆ ಸೂಕ್ತ ಸಹಕಾರ ನೀಡಿ, ವಿಚಾರಣೆಗಳನ್ನು ವೇಗಗೊಳಿಸಿ, ಬಾಕಿ ಇರುವ ವಿಚಾರಣೆಗಳ ಸಂಖ್ಯೆಯನ್ನು ಕಡಿಮೆಗೊಳಿಸಬೇಕು. ಸಣ್ಣಪುಟ್ಟ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಹೊಂದುವುದರಿಂದ ಉಳಿಕೆ ಪ್ರಕರಣಗಳನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಜಾಮೀನು ವ್ಯವಸ್ಥೆಯ ಸುಧಾರಣೆಗಳಿಂದ ಜನರು ಸಣ್ಣ ಅಪರಾಧಗಳಿಗೆ ಜೈಲಿನಲ್ಲಿ ಕೊಳೆಯುವುದನ್ನು ತಡೆಯಲು ಸಾಧ್ಯ.

ನಾಗರಿಕ ಸಮಾಜದ ಸಂಸ್ಥೆಗಳು, ಎನ್‌ಜಿಒಗಳು, ಮತ್ತು ಸ್ವಯಂಸೇವಕರನ್ನು ಜೈಲಿನೊಳಗೆ ಆಹ್ವಾನಿಸಿ, ಖೈದಿಗಳಿಗೆ ಕೌಶಲ್ಯ ತರಬೇತಿ, ಸಮಾಲೋಚನೆ, ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಉದ್ಯಮಗಳಿಗೂ ಮಾಜಿ ಖೈದಿಗಳಿಗೆ ಉದ್ಯೋಗ ನೀಡಿ, ಅವರಿಗೆ ಜೀವನದಲ್ಲಿ ಎರಡನೇ ಅವಕಾಶ ನೀಡುವಂತೆ ಪ್ರೇರೇಪಿಸಬೇಕು.

ಸೂಕ್ತ ಕ್ರಮಕ್ಕೆ ಸರಿಯಾದ ಸಮಯ

ನಮ್ಮ ಕಾರಾಗೃಹಗಳು ಅಪಾಯಕಾರಿ ವ್ಯಕ್ತಿಗಳನ್ನು ಸಮಾಜದಿಂದ ದೂರವಿಟ್ಟು, ಅವರಿಗೆ ಪರಿವರ್ತನೆಗೊಳ್ಳಲು ಇನ್ನೊಂದು ಅವಕಾಶ ನೀಡಬೇಕು. ಆದರೆ, ಇಂದು ಅವು ಇವೆರಡು ಕೆಲಸಗಳನ್ನೂ ಮಾಡುತ್ತಿಲ್ಲ. ಅಪರಾಧಿಗಳು ಇಂದಿಗೂ ಹಾಯಾಗಿ ಜೈಲಿನ ಒಳಗಿನಿಂದಲೇ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇನ್ನು ಜೈಲಿನಿಂದ ಹೊರಬರುವ ಖೈದಿಗಳು ಹೆಚ್ಚು ಅಪಾಯಕಾರಿಗಳಾಗುತ್ತಿದ್ದಾರೆ.

ಜೈಲಿನ ವಾರ್ಡನ್‌ಗಳು, ಸಿಬ್ಬಂದಿಗಳನ್ನು ದೂರುವುದು ಸರಿಯಾದ ನಡೆಯಲ್ಲ. ಕೆಟ್ಟದಾದ ಕೆಲಸದ ಸ್ಥಳಗಳಲ್ಲಿ ಭ್ರಷ್ಟಾಚಾರ ಹುಲುಸಾಗಿ ಬೆಳೆಯುತ್ತದೆ ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ, ನೇಮಕಾತಿಯನ್ನು ಹೆಚ್ಚಿಸಿ, ಉತ್ತಮ ಸಂಬಳ ಮತ್ತು ಸವಲತ್ತುಗಳನ್ನು ಒದಗಿಸಿ, ಮಾನವರ ತಪ್ಪುಗಳನ್ನು ತಡೆಯಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಾಗ, ಭ್ರಷ್ಟಾಚಾರ ಸಹಜವಾಗಿಯೇ ಕಡಿಮೆಯಾಗುತ್ತದೆ.

ತಂತ್ರಜ್ಞಾನ ಮತ್ತು ಮಾನವ ನಿರ್ವಹಣೆ ಎರಡನ್ನೂ ಅರ್ಥ ಮಾಡಿಕೊಂಡಿರುವ ಅಲೋಕ್ ಕುಮಾರ್ ಅವರಂತಹ ಸಮರ್ಥ ನಾಯಕರ ನೇತೃತ್ವದಲ್ಲಿ, ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿ ಸುರಕ್ಷತೆಗೆ ಸರ್ಕಾರ ಸೂಕ್ತ ಹೂಡಿಕೆ ನಡೆಸಿ, ರಾಜಕೀಯ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಿದರೆ ಆಗ ಪರಿಸ್ಥಿತಿಯನ್ನು ಸುಧಾರಿಸಬಹುದು. ನಾವು ಈ ಸುಧಾರಣೆಗಳನ್ನು ಕೈಗೊಳ್ಳಲು ಒಂದೊಂದು ದಿನ ತಡ ಮಾಡಿದಾಗಲೂ, ಹೆಚ್ಚು ಯುವ ಜನರು ಜೈಲಿನಿಂದ ಲಭಿಸುವ ಮಾದಕ ವಸ್ತುಗಳಿಗೆ ದಾಸರಾಗುತ್ತಾರೆ. ಜೈಲಿನ ಕಂಬಿಗಳ ಹಿಂದೆ ಹೆಚ್ಚಿನ ಅಪರಾಧಗಳು ಯೋಜಿತವಾಗಿ, ಹೆಚ್ಚು ಜೀವನಗಳು ನಶಿಸುತ್ತವೆ.

ಈಗ ಕರ್ನಾಟಕ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಮಗೆ ಅಪರಾಧಿಗಳನ್ನು ಶಿಕ್ಷಿಸಿ, ಅವರನ್ನು ಸುಧಾರಿಸುವ ಜೈಲುಗಳು ಬೇಕೇ? ಅಥವಾ ಅವುಗಳು ಇನ್ನಷ್ಟು ಅಪರಾಧ ನಡೆಸುವುದನ್ನು ಕಲಿಸುವಂತಿರಬೇಕೇ? ಈ ಕುರಿತ ನಿರ್ಧಾರ ನಮ್ಮದೇ. ನೂತನ ಡಿಜಿಪಿ ಈಗಾಗಲೇ ತಾನು ಕ್ರಮ ಕೈಗೊಳ್ಳಲು ಸಿದ್ಧರಾಗಿರವುದನ್ನು ಪ್ರದರ್ಶಿಸಿದ್ದಾರೆ. ಈಗ ಸರ್ಕಾರ, ನ್ಯಾಯಾಂಗ, ಮತ್ತು ಸಮಾಜ ಅವರಿಗೆ ನೈಜ ಬದಲಾವಣೆ ಬೇಕಾದ ಸಂಪನ್ಮೂಲಗಳು, ತಾಳ್ಮೆ ಮತ್ತು ಬದ್ಧತೆಯನ್ನು ಒದಗಿಸಿ ಬೆಂಬಲಿಸಬೇಕು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)