ಮದುವೆಯಾಗಿ ತಿಂಗಳು ಕಳೆಯುವ ಮುನ್ನವೇ ಬೆಂಗಳೂರಿನ ಬಾಗಲಗುಂಟೆಯಲ್ಲಿ ನವವಿವಾಹಿತೆ ಐಶ್ವರ್ಯ (24) ನೇಣಿಗೆ ಶರಣಾಗಿದ್ದಾರೆ. ಗಂಡ ಮತ್ತು ಅತ್ತೆಯ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಆರೋಪಿಸಿದ್ದು, ಇದೊಂದು ಕೊಲೆ ಎಂದು ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಡಿ.24): ಹಸೆಮಣೆ ಏರಿ ಇನ್ನೂ ತಿಂಗಳು ತುಂಬುವ ಮೊದಲೇ ನವವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಐಶ್ವರ್ಯ ಸಿಕೆ (24) ಮೃತ ದುರ್ದೈವಿ.

ಘಟನೆಯ ಹಿನ್ನೆಲೆ

ಐಶ್ವರ್ಯ ಅವರಿಗೆ ಕಳೆದ ನವೆಂಬರ್ 27ರಂದು ಬೆಂಗಳೂರಿನ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ಎಂಬುವವರ ಜೊತೆ ವಿಜೃಂಭಣೆಯಿಂದ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ಮೊದಲ ದಿನದಿಂದಲೇ ದಂಪತಿಗಳ ನಡುವೆ ಕಲಹ ಆರಂಭವಾಗಿತ್ತು ಎನ್ನಲಾಗಿದೆ. ಗಂಡ ಲಿಖಿತ್ ಮತ್ತು ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. 'ನಿಮ್ಮ ಮಗಳನ್ನು ನಿಮ್ಮ ಮನೆಗೇ ಕರೆದುಕೊಂಡು ಹೋಗಿ' ಎಂದು ಲಿಖಿತ್ ಐಶ್ವರ್ಯ ಪೋಷಕರಿಗೆ ಪದೇ ಪದೇ ಹೇಳುತ್ತಿದ್ದ ಎನ್ನಲಾಗಿದೆ.

ಪೋಷಕರು ಬಂದು ಹೋದ ಕೆಲವೇ ಗಂಟೆಗಳಲ್ಲಿ ಸಾವು

ಬುಧವಾರ (ನಿನ್ನೆ) ಬೆಳಿಗ್ಗೆಯಷ್ಟೇ ಐಶ್ವರ್ಯ ಪೋಷಕರು ಮಲ್ಲಸಂದ್ರದ ಗಂಡನ ಮನೆಗೆ ಬಂದು ದಂಪತಿಗಳ ನಡುವೆ ರಾಜಿ ಸಂಧಾನ ಮಾಡಿಸಿದ್ದರು. 'ಇನ್ಮುಂದೆ ಚೆನ್ನಾಗಿ ಬಾಳಿ' ಎಂದು ಬುದ್ಧಿ ಹೇಳಿ ಪೋಷಕರು ಮದ್ದೂರಿಗೆ ಮರಳಿದ್ದರು. ಆದರೆ ಅವರು ಊರು ತಲುಪುವಷ್ಟರಲ್ಲೇ ಮಗಳು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಬರಸಿಡಿಲಿನಂತಹ ಸುದ್ದಿ ಸಿಕ್ಕಿದೆ.

ಕೊಲೆ ಆರೋಪ ಮತ್ತು ಪೊಲೀಸ್ ತನಿಖೆ

ನಮ್ಮ ಮಗಳು ಆತ್ಮ*ಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಇದು ಗಂಡ ಮತ್ತು ಅತ್ತೆ ಸೇರಿ ಮಾಡಿರುವ ಕೊಲೆ' ಎಂದು ಮೃತಳ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಿಖಿತ್ ಸಿಂಹ ಮತ್ತು ಆತನ ಕುಟುಂಬಸ್ಥರನ್ನು ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಐಶ್ವರ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.