ಬೆಂಗಳೂರಿನ 209 ಪ್ರವಾಹಪೀಡಿತ ಪ್ರದೇಶಗಳಲ್ಲಿ 166ರಲ್ಲಿ ಸಮಸ್ಯೆ ಪರಿಹಾರವಾಗಿದೆ. ಉಳಿದ 43 ಸ್ಥಳಗಳಲ್ಲಿ ಮಳೆಗಾಲಕ್ಕೂ ಮುನ್ನ ದುರಸ್ತಿಗೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ. ಕಾಲುವೆ ದುರಸ್ತಿ, ರಸ್ತೆ ಗುಂಡಿ ಮುಚ್ಚುವಿಕೆ, ಅಗ್ನಿಶಾಮಕದಳದ ಸನ್ನದ್ಧತೆ, ನಿಯಂತ್ರಣ ಕೊಠಡಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು (ಮೇ 05): ಬೆಂಗಳೂರಿನಲ್ಲಿ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ಉಂಟಾಗುವ 209 ಪ್ರದೇಶಗಳಿದ್ದು, ಅದರಲ್ಲಿ 166 ಸ್ಥಳಗಳಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಹರಿಸಲಾಗಿದೆ. ಆದರೆ, ಇನ್ನೂ 43 ಸ್ಥಳಗಳು ಪ್ರವಾಹ ಪೀಡಿತ ಪ್ರದೇಶಗಳಿದ್ದು, ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ಸೂಕ್ತ ಕ್ರಮಗಳನ್ನು ಕೈಗೊಂಡು ದುರಸ್ತಿ ಕಾಮಗಾರಿಗಳನ್ನು ಮಾಡುವಂತೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದರು.

ಮುಂದಿನ ತಿಂಗಳಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಬೆಂಗಳೂರು ನಗರದಲ್ಲಿ ಮಳೆಗಾಲದ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ತಡೆಯುವ ಕುರಿತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮುಂಗಾರು ಮಳೆ ಆರಂಭವಾಗುತ್ತಿದೆ. ನಗರದಲ್ಲಿ 209 ಪ್ರವಾಹ ಪೀಡಿತ ಪ್ರದೇಶಗಳಿದ್ದು, ಈಗಾಗಲೇ 166 ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಕಿ 43 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಆಯಾ ವಲಯ ಹಿರಿಯ ಅಧಿಕಾರಿಗಳು ಖುದ್ದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಸೂಚನೆ ನಿಡಿದರು.

ದುರಸ್ತಿ ಕಾಲುವೆಗಳ ಪಟ್ಟಿ ಸಿದ್ಧಪಡಿಸಿ: ಮೆಟ್ರೋ, ಕೆ-ರೈಡ್, ಕೆಪಿಟಿಸಿಎಲ್ ಸೇರಿದಂತೆ ಇನ್ನಿತರೆ ಇಲಾಖೆಗಳ ವತಿಯಿಂದ ನಗರದಾದ್ಯಂತ ಕಾಮಗಾರಿಗಳು ನಡೆಯುತ್ತಿದ್ದು, ಈ ಸ್ಥಳಗಳಲ್ಲಿ ದುರಸ್ತಿಯಾಗಿರುವ ಕಾಲುವೆಗಳ ಪಟ್ಟಿಯನ್ನು ಸಿದ್ಧಪಡಿಸಿ ಆಯಾ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಬೇಕು. ಸಂಬಂಧಟ್ಟ ಇಲಾಖೆಗಳು ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮಳೆ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. 

ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ:
ಮಾರ್ಚ್ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 82 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗವು ಗುರುತಿಸಿದ್ದು, ಪಾಲಿಕೆಗೆ ಪಟ್ಟಿಯನ್ನು ನೀಡಲಾಗಿದೆ. ಈ ಪೈಕಿ ಸಂಬಂಧಪಟ್ಟ ಇಂಜಿನಿಯರ್‌ಗಳು ಸಂಚಾರಿ ಪೊಲೀಸ್ ವಿಭಾಗ ನೀಡಿರುವ ಪಟ್ಟಿಯ ಅನುಸಾರ ಸ್ಥಳ ಪರಿಶೀಲಿಸಿ ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತಿ ಸ್ವಚ್ಚಗೊಳಿಸಬೇಕು. ಸಂಚಾರ ದಟ್ಟಣೆಯಾಗುವುದನ್ನು ನಿಯಂತ್ರಿಸಲು ರಸ್ತೆಯಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಲು ಸೂಚಿಸಿದರು.

ಅಗ್ನಿ ಶಾಮಕ ಠಾಣೆಗಳ ಜೊತೆ ಸಂಪರ್ಕದಲ್ಲಿರಿ: ನಗರದಲ್ಲಿ 20 ಅಗ್ನಿ ಶಾಮಕ ಠಾಣೆಗಳು ಹಾಗೂ 1 ಎಸ್.ಡಿ.ಆರ್.ಎಫ್ ಕಂಪನಿಯಿದ್ದು, ಎಲ್ಲಾ ಅಗ್ನಿ ಶಾಮಕಗಳು ಮಳೆಗಾಲ ಮುಗಿಯುವವರೆಗೂ ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಅಗ್ನಿ ಶಾಮಕ ಠಾಣೆಗಳ ಜೊತೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿರಬೇಕು. ಜೊತೆಗೆ ಅಗ್ನಿ ಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳ ದೂರವಾಣಿ ಸಂಖ್ಯೆಯುಳ್ಳ ಪಟ್ಟಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದರು. 

ಅಧಿಕಾರಿಗಳ ವ್ಯಾಟ್ಸಪ್ ಗ್ರೂಪ್ ರಚಿಸಿ: 

ಬಿಬಿಎಂಪಿಯಲ್ಲಿ 8 ವಲಯಗಳು ಹಾಗೂ ಪಾಲಿಕೆ ಕೇಂದ್ರ ಕಛೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ 63 ಉಪ ವಿಭಾಗಗಳ ನಿಯಂತ್ರಣ ಕೊಠಡಿಗಳು ಸ್ಥಾಪಿಸಲಾಗಲಿದ್ದು, ಎಲ್ಲಾ ನಿಯಂತ್ರಣ ಕೊಠಡಿಗಳಿಗೆ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳನ್ನು ಕೂಡಲೇ ನಿಯೋಜಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವ್ಯಾಟ್ಸಪ್ ಗ್ರೂಪ್ ಗಳನ್ನು ರಚಿಸಿ ಅದರ ಮೂಲಕ ಸಮನ್ವಯ ಮಾಡಿಕೊಂಡು ಮಳೆಯಿಂದಾಗುವ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು. 

ರಾಜಕಾಲುವೆಗಳ ವಾರ್ಷಿಕ ನಿರ್ವಹಣೆ:
ನಗರದಲ್ಲಿ 175 ಕಿ.ಮೀ ಉದ್ದದ ಬೃಹತ್ ನೀರುಗಾಲುವೆಗಳಲ್ಲಿ ವಾರ್ಷಿಕ ನಿರ್ವಹಣೆ ಸರಿಯಾಗಿ ಮಾಡಬೇಕು. ಜೊತೆಗೆ ನಗರದಲ್ಲಿ ಎಲ್ಲೆಲ್ಲಿ ಬೃಹತ್ ನೀರುಗಾಲುವೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಅವುಗಳ ಪಟ್ಟಿ ಸಿದ್ದಪಡಿಸಿ ಕೊಡಬೇಕು. ಆ ಎಲ್ಲಾ ಕಡೆ ತ್ವರಿತವಾಗಿ ಕಾಮಗರಿಗಳನ್ನು ಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. 

239 ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ:

ನಗರದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು 647 ರಸ್ತೆ ಗುಂಡಿಗಳನ್ನು ಮುಚ್ಚಲು ಪಟ್ಟಿ ನೀಡಿದ್ದು, ಅದರಂತೆ ಈಗಾಗಲೇ 323 ರಸ್ತೆ ಗುಂಡಿಗಳನ್ನು ಮುಚ್ಚಲಾಗಿರುತ್ತದೆ. 239 ರಸ್ತೆ ಗುಂಡಿಗಳು ಬಾಕಿಯಿದ್ದು, ಕೂಡಲೆ ಮುಚ್ಚಲಾಗುವುದು. ಇನ್ನು 90 ರಸ್ತೆ ಗುಂಡಿಗಳು ಬೇರೆ-ಬೇರೆ ಇಲಾಖೆಗಳಿಗೆ ಬರಲಿದ್ದು, 5 ರಸ್ತೆಗಳು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಮಾತನಾಡಿ, ನಗರದಲ್ಲಿ ಮಳೆಯಾದ ವೇಳೆ ಹೆಚ್ಚು ಸಮಸ್ಯೆ ಕಂಡುಬರುವ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಅನಂತರ ಯಾವ ಸಮಸ್ಯೆಗಳಿವೆ ಎಂಬುದನ್ನು ಗುರುತಿಸಿ ಇರುವ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.