ಬೀದರ್ ಜಿಲ್ಲೆಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 23ಕ್ಕೂ ಹೆಚ್ಚು ಜಾನುವಾರುಗಳನ್ನು ಬಸವಕಲ್ಯಾಣ ಶಾಸಕ ಶರಣು ಸಲಗರ ರಕ್ಷಿಸಿದ್ದಾರೆ. 3 ಗೂಡ್ಸ್ ವಾಹನಗಳಲ್ಲಿ ಅಮಾನವೀಯವಾಗಿ ತುಂಬಿದ್ದರಿಂದ ಉಸಿರುಗಟ್ಟಿ ಒಂದು ಎತ್ತು ಸಾವನ್ನಪ್ಪಿದ್ದು, ಶಾಸಕರು ದಂಧೆಕೋರರ ವಿರುದ್ಧ ದೂರು ದಾಖಲಿಸಿದ್ದಾರೆ.

ಬೀದರ್ (ಏ.26): ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಾಟ ಜಾಲ ಮತ್ತೆ ಹೆಡೆಎತ್ತುತ್ತಿದ್ದು, ಇಂದು ಸ್ವತಃ ಶಾಸಕರೊಬ್ಬರು ರಸ್ತೆಗಿಳಿದು ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ಅವರು ಮೂರು ಗೂಡ್ಸ್ ವಾಹನಗಳ ಮೇಲೆ ಧಿಡೀರ್ ದಾಳಿ ನಡೆಸಿ, ಅಮಾನವೀಯವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 23ಕ್ಕೂ ಅಧಿಕ ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಘಟನೆಯ ವಿವರ:

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಚಿಟ್ಟಾ ಕ್ರಾಸ್ ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮೂರು ಗೂಡ್ಸ್ ವಾಹನಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶಾಸಕ ಶರಣು ಸಲಗರ್ ಅವರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತಡೆದರು. ಈ ವೇಳೆ ವಾಹನಗಳನ್ನು ಪರಿಶೀಲಿಸಿದಾಗ ಅಲ್ಲಿನ ದೃಶ್ಯ ಅತ್ಯಂತ ಮನಕಲಕುವಂತಿತ್ತು.

ಉಸಿರುಗಟ್ಟಿ ಪ್ರಾಣ ಬಿಟ್ಟ ಎತ್ತು:

ಆಕಳುಗಳು, ಕರುಗಳು, ಎತ್ತುಗಳು ಹಾಗೂ ಎಮ್ಮೆ ಕರುಗಳನ್ನು ಯಾವುದೇ ಕನಿಷ್ಠ ನಿಯಮಗಳನ್ನು ಪಾಲಿಸದೆ, ಉಸಿರುಗಟ್ಟುವಂತೆ ವಾಹನಗಳಲ್ಲಿ ತುರುಕಲಾಗಿತ್ತು. ಕೇವಲ ಒಂದು ವಾಹನದಲ್ಲಿ ಮಿತಿಮೀರಿದ ಅಂದರೆ ಆರು ದೊಡ್ಡ ಜಾನುವಾರುಗಳನ್ನು ತುಂಬಿದ್ದರಿಂದ, ಗಾಳಿ ಸಿಗದೆ ಎತ್ತುವೊಂದು ವಾಹನದಲ್ಲೇ ಸಾವನ್ನಪ್ಪಿದೆ. ಇದನ್ನು ಕಂಡ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಾಲಕರಿಗೆ ಶಾಸಕರಿಂದ ಕ್ಲಾಸ್:

ಜಾನುವಾರುಗಳ ಮೇಲಿನ ಕ್ರೌರ್ಯ ಕಂಡ ಶಾಸಕ ಸಲಗರ್ ಚಾಲಕರ ಮೇಲೆ ಕೆಂಡಾಮಂಡಲರಾದರು. "ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಕೆಲಸ ಮಾಡಿ, ಈ ರೀತಿ ಮೂಕ ಪ್ರಾಣಿಗಳನ್ನು ಕೊಲ್ಲುವುದು ಎಷ್ಟು ಸರಿ? ನಿಮ್ಮ ಹೆಂಡತಿ, ಮಕ್ಕಳನ್ನು ಇದೇ ರೀತಿ ಅಮಾನವೀಯವಾಗಿ ವಾಹನದಲ್ಲಿ ತುಂಬಿ ಸಾಗಿಸ್ತೀರಾ? ಪ್ರಾಣಿಗಳ ಮೇಲೆ ಯಾಕಿಷ್ಟು ಕ್ರೌರ್ಯ?" ಎಂದು ಚಾಲಕರನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದಲೇ ಇಂತಹ ಅಕ್ರಮ ದಂಧೆಕೋರರಿಗೆ ಲೈಸೆನ್ಸ್ ಸಿಕ್ಕಂತಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ" ಎಂದು ದೂರಿದರು.

ಪೊಲೀಸ್ ಕ್ರಮ:

ವಿಷಯ ತಿಳಿಯುತ್ತಿದ್ದಂತೆಯೇ ಮಂಠಾಳ ಪೊಲೀಸ್ ಠಾಣೆಯ ಪಿಎಸ್ಐ ಸುವರ್ಣ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಶರಣು ಸಲಗರ್ ಅವರು ಅಕ್ರಮ ದಂಧೆಕೋರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ರಕ್ಷಿಸಲಾದ 23 ಜಾನುವಾರುಗಳನ್ನು ತಕ್ಷಣವೇ ಹತ್ತಿರದ ಗೋಶಾಲೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಬೀದರ್ ಜಿಲ್ಲೆಯ ಗಡಿ ಭಾಗಗಳಲ್ಲಿ ಇಂತಹ ಅಕ್ರಮ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.