'ಬಿಕ್ಲು ಶಿವ' ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಹಮದಾಬಾದ್‌ನಿಂದ ಆಗಮಿಸುತ್ತಿದ್ದ ಅವರನ್ನು, ಹತ್ಯೆಯ ಆರೋಪಿಗಳೊಂದಿಗಿನ ನಂಟಿನ ಶಂಕೆಯ ಮೇಲೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ.
ಬೆಂಗಳೂರು (ಫೆ.112): ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಬಂಧನಕ್ಕೊಳಗಾದ ದೃಶ್ಯ ಮಾಸುವ ಮುನ್ನವೇ, ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಅಂತಹದ್ದೇ ಬಿಗ್ ಡೆವಲಪ್‌ಮೆಂಟ್ ನಡೆದಿದೆ. ಮಾಜಿ ಸಚಿವ ಹಾಗೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ (CID) ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಈ ಹಠಾತ್ ಬೆಳವಣಿಗೆಗೆ ಕಾರಣವಾಗಿರುವುದು ರಾಜಧಾನಿಯಲ್ಲಿ ನಡೆದಿದ್ದ 'ಬಿಕ್ಲು ಶಿವ' ಎಂಬ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಬಿಕ್ಲು ಶಿವನನ್ನು ಆತನ ಮನೆಯ ಮುಂದೆಯೇ ಐದಾರು ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ, ಹತ್ಯೆ ಮಾಡಿದ ಆರೋಪಿಗಳು ಬೈರತಿ ಬಸವರಾಜ್ ಅವರ ಪರಮಾಪ್ತರು ಎಂಬ ಸುಳಿವು ಸಿಕ್ಕಿತ್ತು. ಈ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರ ಪರೋಕ್ಷ ಅಥವಾ ಪ್ರತ್ಯಕ್ಷ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ವಿಚಾರಣೆ ಅನಿವಾರ್ಯವಾಗಿತ್ತು.
ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ:
ಬೈರತಿ ಬಸವರಾಜ್ ಅವರು ಇಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರಂತೆ ದೇವನಹಳ್ಳಿ ಎಸಿಪಿ ಹರ್ಷ ಅವರ ನೇತೃತ್ವದ ಪೊಲೀಸ್ ತಂಡ ಹಾಗೂ ಸಿಐಡಿಯ ವಿಶೇಷ ತಂಡ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟಿತ್ತು. ಶಾಸಕರು ಬರುತ್ತಿದ್ದಂತೆಯೇ ವಶಕ್ಕೆ ಪಡೆಯಲು ಟರ್ಮಿನಲ್ 1ರ ಬಳಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಕೆಎಸ್ಆರ್ಪಿ (KSRP) ತುಕಡಿಗಳನ್ನು ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜಿಸಲಾಗಿತ್ತು.
ಇಂಡಿಗೋ ವಿಮಾನದಲ್ಲಿ ಬಂದಿಳಿದ ಶಾಸಕ:
ಅಹಮದಾಬಾದ್‌ನಿಂದ ಹೊರಟಿದ್ದ ಇಂಡಿಗೋ ವಿಮಾನ (6E683) ಸಂಜೆ 7 ಗಂಟೆಯ ಸುಮಾರಿಗೆ ಬೆಂಗಳೂರಿನ ರನ್‌ವೇ ಮೇಲೆ ಲ್ಯಾಂಡ್ ಆಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆದರು. ವಿಮಾನದ ಒಳಗೆ ಹೋದ ಸಿಐಡಿ ಅಧಿಕಾರಿಗಳು, ಬೈರತಿ ಬಸವರಾಜ್ ಅವರನ್ನು ಟರ್ಮಿನಲ್ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ. ಬೈರತಿ ಬಸವರಾಜ್ ಅವರನ್ನು ಕರೆತರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದಿದ್ದ ಜನರಲ್ಲಿ ಕುತೂಹಲ ಮೂಡಿತ್ತು.
ಸದ್ಯ ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಶಾಸಕರಿಗಿದ್ದ ಸಂಬಂಧ ಹಾಗೂ ಆಸ್ತಿ ವಿವಾದದಲ್ಲಿ ಅವರ ಹಸ್ತಕ್ಷೇಪದ ಬಗ್ಗೆ ಸುದೀರ್ಘ ವಿಚಾರಣೆ ನಡೆಯಲಿದೆ. ಈ ಬಂಧನ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬುದು ಕುತೂಹಲಕಾರಿಯಾಗಿದೆ.


