ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಸಿಐಡಿ ತನಿಖೆಗೆ ಸವಾಲಾಗಿದೆ. ಕಳೆದ 15 ದಿನಗಳಿಂದ ಸಂಪರ್ಕಕ್ಕೆ ಸಿಗದ ಅವರ ಪತ್ತೆಗಾಗಿ ಸಿಐಡಿ ದೇಶಾದ್ಯಂತ ಶೋಧ ನಡೆಸುತ್ತಿದ್ದು, ಹೈಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ತನಿಖೆ ಚುರುಕುಗೊಂಡಿದೆ.
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೈರತಿ ಬಸವರಾಜ್ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವುದು ಸಿಐಡಿ ತನಿಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ಸುಮಾರು 15 ದಿನಗಳಿಂದ ಬೈರತಿ ಬಸವರಾಜ್ ಅವರ ಬಗ್ಗೆ ಯಾವುದೇ ಖಚಿತ ಸುಳಿವು ದೊರಕದ ಹಿನ್ನೆಲೆಯಲ್ಲಿ, ಸಿಐಡಿ ತಂಡಗಳು ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಹುಡುಕಾಟ ನಡೆಸುತ್ತಿವೆ.
ಸಿಐಡಿ ಮೂಲಗಳ ಪ್ರಕಾರ, ಕಳೆದ 45 ದಿನಗಳಿಂದ ಬೈರತಿ ಬಸವರಾಜ್ ಅವರ ಅಧಿಕೃತ ದೂರವಾಣಿ ಸಂಖ್ಯೆ ಸಂಪೂರ್ಣವಾಗಿ ಸ್ವಿಚ್ ಆಫ್ ಆಗಿದ್ದು, ಅವರ ಅಧಿಕೃತ ಫೋನ್‌ನಿಂದ ಯಾವುದೇ ಕರೆಗಳ ವಿನಿಮಯ ನಡೆದಿಲ್ಲ. ಬೆಳಗಾವಿ ವಿಧಾನಸಭಾ ಅಧಿವೇಶನದ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಗದ ಸ್ಥಿತಿಯಲ್ಲಿದ್ದಾರೆ. ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರಿಗೂ ಅವರು ಸಂಪರ್ಕಕ್ಕೆ ಸಿಗದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮೂರು ತಿಂಗಳ ಹಿಂದೆಯೇ ಲುಕ್ ಔಟ್ ನೋಟೀಸ್
ಈ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಎಸ್ಪಿ ಅವರಿಂದ ಮೂರು ತಿಂಗಳ ಹಿಂದೆಯೇ ಲುಕ್ ಔಟ್ ನೋಟೀಸ್ (LOC) ಜಾರಿಗೊಳಿಸಲಾಗಿತ್ತು. ಈ ನೋಟೀಸ್ ಒಂದು ವರ್ಷದ ಅವಧಿಗೆ ಮಾನ್ಯವಾಗಿದ್ದು, ದೇಶದ ಯಾವುದೇ ವಿಮಾನ ನಿಲ್ದಾಣ ಅಥವಾ ಬಂದರಿನಿಂದ ವಿದೇಶಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ದೇಶದ ಒಳನಾಡು ವಿಮಾನಯಾನ ಹಾಗೂ ಅಂತರ್ ರಾಜ್ಯ ಪ್ರಯಾಣಕ್ಕೆ ಇದರಿಂದ ಅಡ್ಡಿಯಾಗದ ಕಾರಣ, ಪಾಸ್‌ಪೋರ್ಟ್ ಬಳಸದೆಯೇ ಆಧಾರ್ ಕಾರ್ಡ್ ಮೂಲಕ ಬೈರತಿ ಬಸವರಾಜ್ ರಾಜ್ಯಾಂತರ ಪ್ರಯಾಣ ಮಾಡಿಕೊಂಡಿರುವ ಶಂಕೆ ಸಿಐಡಿಗೆ ಬಲವಾಗಿದೆ
ತನಿಖಾ ಮೂಲಗಳ ಪ್ರಕಾರ, ಬೈರತಿ ಬಸವರಾಜ್ ಒಂದೇ ಸ್ಥಳದಲ್ಲಿ ಎರಡು ದಿನಕ್ಕಿಂತ ಹೆಚ್ಚು ಕಾಲ ವಾಸ್ತವ್ಯ ಹೂಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಜಾಮೀನು ಅರ್ಜಿ ವಜಾಗೊಳ್ಳುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ, ತಮ್ಮ ಹುಟ್ಟುಹಬ್ಬಕ್ಕೂ ಮುನ್ನವೇ ಅವರು ಬೆಂಗಳೂರು ತೊರೆದಿರುವ ಅನುಮಾನ ವ್ಯಕ್ತವಾಗಿದೆ.
ಫೆಬ್ರವರಿ 3ರಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಬೈರತಿ
ಫೆಬ್ರವರಿ 4ರಂದು ಬೈರತಿ ಬಸವರಾಜ್ ಅವರ ಹುಟ್ಟುಹಬ್ಬವಿತ್ತು. ಆದರೆ ಹುಟ್ಟುಹಬ್ಬದ ಯಾವುದೇ ಕಾರ್ಯಕ್ರಮದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಕೊನೆಯದಾಗಿ ಫೆಬ್ರವರಿ 3ರಂದು ಮೇಡಹಳ್ಳಿ ಕೊಡಂಡರಾಮ ಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಫೆಬ್ರವರಿ 4ರಿಂದಲೇ ಅವರು ಸಂಪೂರ್ಣವಾಗಿ ನಾಪತ್ತೆಯಾಗಿದ್ದಾರೆ ಎಂದು ಸಿಐಡಿ ದಾಖಲೆಗಳು ತಿಳಿಸುತ್ತವೆ.
ನಿನ್ನೆ ಹೈಕೋರ್ಟ್‌ನಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಹಿನ್ನೆಲೆ, ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಹೈಕೋರ್ಟ್ ರಜಾಕಾಲ ಪೀಠದಿಂದ ಜಾಮೀನು ಮಂಜೂರಾಗಿದ್ದ ಕಾರಣ, ಹಿಂದಿನ ಲುಕ್ ಔಟ್ ನೋಟೀಸ್‌ಗೆ ಈಗ ವ್ಯಾಲಿಡಿಟಿ ಇಲ್ಲ ಎಂಬ ಕಾನೂನು ಅಂಶದ ಮೇಲೆ ಸಿಐಡಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಹೊಸ ಲುಕ್ ಔಟ್ ನೋಟೀಸ್ ಜಾರಿಗೊಳಿಸಲು ಸಿಐಡಿ ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಸಿಐಡಿ ತಂಡಗಳು ಮುಂಬೈ ಹಾಗೂ ಅದರ ಸುತ್ತಮುತ್ತ ವ್ಯಾಪಕ ಶೋಧ ಕಾರ್ಯ ನಡೆಸುತ್ತಿವೆ. ಜೊತೆಗೆ ಬೆಳಗಾವಿಯಲ್ಲಿ ಒಂದು ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಬೈರತಿ ಬಸವರಾಜ್ ವಿದೇಶಕ್ಕೆ ತೆರಳಿಲ್ಲ ಎಂಬುದನ್ನು ಸಿಐಡಿ ಖಚಿತಪಡಿಸಿಕೊಂಡಿದ್ದು, ದೇಶದೊಳಗೇ ಅವರು ಅಡಗಿಕೊಂಡಿರುವ ಸಾಧ್ಯತೆಯ ಮೇರೆಗೆ ತನಿಖೆ ಮುಂದುವರಿದಿದೆ. ಬಹುತೇಕ ಮುಂಬೈನಲ್ಲಿ ಇರುವ ಬಗ್ಗೆ ಬಲವಾದ ಅನುಮಾನ ಇದೆ ಎನ್ನಲಾಗಿದೆ.
ಈ ನಡುವೆ, ಬೈರತಿ ಬಸವರಾಜ್ ನಾಪತ್ತೆ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, “ನಿನ್ನೆ ಕೋರ್ಟ್‌ನಲ್ಲಿ ಆದೇಶ ಹೊರಬಂದಿದೆ. ಅವರು ಸ್ವಯಂಪ್ರೇರಿತವಾಗಿ ಬಂದು ಸರೆಂಡರ್ ಆದರೆ ಒಳ್ಳೆಯದು. ಇಲ್ಲದಿದ್ದರೆ ಸಿಐಡಿ ಅವರನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಬೈರತಿ ಬಸವರಾಜ್ ಪತ್ತೆಗೆ ಸಿಐಡಿ ಸಂಪೂರ್ಣ ಬಲ ಪ್ರಯೋಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸುವ ನಿರೀಕ್ಷೆ ವ್ಯಕ್ತವಾಗಿದೆ.


