ಮಹಿಳೆಯರಿಗೆ ರಾಜಕೀಯ ನ್ಯಾಯ ನೀಡಬೇಕು. ಮಹಿಳಾ ಮೀಸಲಾತಿ ಮೂಲಕ ಅವರಿಗೆ ರಾಜಕೀಯ ನಿರ್ಣಯ ಕೈಗೊಳ್ಳುವ ಸ್ಥಾನ ಕಲ್ಪಿಸಬೇಕು ಎನ್ನುವುದು ಎನ್ಡಿಎ ಕನಸಾಗಿತ್ತು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಖಂಡಿಸಿದ್ದಾರೆ.
ಚಿಕ್ಕಮಗಳೂರು (ಏ.19): ಮಹಿಳೆಯರಿಗೆ ರಾಜಕೀಯ ನ್ಯಾಯ ನೀಡಬೇಕು. ಮಹಿಳಾ ಮೀಸಲಾತಿ ಮೂಲಕ ಅವರಿಗೆ ರಾಜಕೀಯ ನಿರ್ಣಯ ಕೈಗೊಳ್ಳುವ ಸ್ಥಾನ ಕಲ್ಪಿಸಬೇಕು ಎನ್ನುವುದು ಎನ್ಡಿಎ ಕನಸಾಗಿತ್ತು. ಆದರೆ, ಕಾಂಗ್ರೆಸ್, ಡಿಎಂಕೆ, ಆಪ್, ಟಿಎಂಸಿಯಂತಹ ವಿಪಕ್ಷಗಳು ಈ ಕನಸು ಭಂಗಗೊಳಿಸುವ ಕೆಲಸ ಮಾಡಿವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಡಾ. ಬಿ ಆರ್.ಅಂಬೇಡ್ಕರ್ ಮಹಿಳೆಯರಿಗೆ ರಾಜಕೀಯ ನ್ಯಾಯಕೊಡುವ ಕನಸು ಕಂಡಿದ್ದರು. ಹಿಂದೂಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಅವಕಾಶ ನೀಡುವ ಸಂದರ್ಭದಲ್ಲಿ, ಅಂದಿದ್ದ ಬಹುತೇಕ ಕಾಂಗ್ರೆಸ್ ಸದಸ್ಯರು ಹಿಂದೂಕೋಡ್ ಬಿಲ್ ವಿರುದ್ಧ ಮತ ಚಲಾಯಿಸಿ, ಅಂಬೇಡ್ಕರ್ ಆಶಯವಿರೋಧಿಸಿದ್ದರು ಎಂದರು.
ಸ್ವಾತಂತ್ರ್ಯ ಬಂದು 79 ವರ್ಷಗಳಾಗಿವೆ ಈಗಲಾದರೂ ಮಹಿಳೆಯರಿಗೆ ನ್ಯಾಯ ಸಿಗಬಹುದು ಎಂದು ಭಾವಿಸಿದ್ದೆವು. ಅವರಿಗೆ ರಾಜಕೀಯ ನ್ಯಾಯ ನೀಡುವ ಪ್ರಧಾನಿ ಮೋದಿ ಪ್ರಯತ್ನಕ್ಕೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಅಡ್ಡಿಯಾಗಿ, ತಾವು ಮಹಿಳಾ ವಿರೋಧಿ, ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಈಗಲೂ ಅಡ್ಡಗಾಲು
ಈ ಮೂಲಕ ಬಸವಣ್ಣನವರ ಸಮ ಸಮಾಜದ ಆಶಯಕ್ಕೆ ವಿಪಕ್ಷಗಳು ಈಗಲೂ ಅಡ್ಡಗಾಲು ಹಾಕಿವೆ. ಮೀಸಲಾತಿ ಇಲ್ಲದ ಕ್ಷೇತ್ರಗಳಲ್ಲಿ ಮಹಿಳೆಯರು ನಿಂತು ಗೆಲ್ಲುವುದು ಅಪರೂಪ. ಮಹಿಳಾ ಶಾಸಕರು ಮತ್ತು ಸಂಸದರ ಸಂಖ್ಯೆ ನಗಣ್ಯ ಎನ್ನುವಷ್ಟಿದೆ. ಮೀಸಲಾತಿಯ ಮೂಲಕ ಅವರಿಗೆ ಶಕ್ತಿ ತುಂಬುವ ಪ್ರಯತ್ನವನ್ನೂ ವಿಪಕ್ಷಗಳು ಹಾಳುಗೆಡವಿವೆ. ಮಹಿಳಾ ಸಂಸದರಾದರೂ ಆತ್ಮಸಾಕ್ಷಿಯಿಂದ ಮತ ಚಲಾಯಿಸಿ, ಮಸೂದೆ ಬೆಂಬಲಿಸಬಹುದು ಎನ್ನುವ ವಿಶ್ವಾಸ ಇತ್ತು. ಆದರೆ, ಅವರೂ ಮಸೂದೆಯ ವಿರುದ್ಧ ಮತ ಹಾಕಿರುವುದು ವಿಪರ್ಯಾಸ. ವಿಪಕ್ಷಗಳ ಈ ನಡೆಯನ್ನು ದೇಶ ಕ್ಷಮಿಸುವುದಿಲ್ಲ ಎಂದರು.


