ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಪಕ್ಷವನ್ನು ಈ ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು (ಏ.19): ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಪಕ್ಷವನ್ನು ಈ ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು, ಸಾಮಾನ್ಯ ವಿಚಾರ ಅಲ್ಲ.
ಇದು ರಾಜಕೀಯ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ, ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತ ಎಂದು ಕಿಡಿಕಾರಿದರು. ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ಪ್ರಧಾನಿ ಮೋದಿ ಅವರ ತೀರ್ಮಾನಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆಯ ವೈಫಲ್ಯ ಅಲ್ಲ. ಮಹಿಳೆಯರ ಹಕ್ಕು ನಿರ್ಲಕ್ಷಿಸುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದರು.
ಮೀಸಲಾತಿ ಕಸಿದ ದ್ರೋಹಿ ಕಾಂಗ್ರೆಸ್: ಮಹಿಳೆಯರಿಗೆ ಪುಕ್ಕಟೆಯಾಗಿ 2 ಸಾವಿರ ರು., ಫ್ರೀ ಬಸ್ ಕೊಟ್ಟರೆ ಸಾಕು ಮನೆಯಲ್ಲೇ ಇರುತ್ತಾರೆ. ಅಡುಗೆ ಮಾಡಿಕೊಂಡು, ದೇವಸ್ಥಾನಕ್ಕೆ ತಿರುಗಿಕೊಂಡು ಇರುತ್ತಾರೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬಾರದು. ಸಂಸತ್, ವಿಧಾನಸಭೆಗೆ ಹೋಗುವುದು ಬೇಡ ಎಂದು ಕಾಂಗ್ರೆಸ್ನವರು ತಿಳಿದಿದ್ದಾರೆ. ಮೀಸಲಾತಿ ಕಸಿದ ದ್ರೋಹಿ ಕಾಂಗ್ರೆಸ್ಸಿಗರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ದೇಶಭಷ್ಟ ಆಗಲಿದೆ
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶ ಭ್ರಷ್ಟವಾಗಲಿದೆ. ತಾಯಂದಿರು ಇವರನ್ನು ಓಡಿಸಲಿದ್ದಾರೆ. ಈ ಹಿಂದೆ ತಲಾಖ್, ದೇಶದ ಭದ್ರತೆಗೆ ಆರ್ಟಿಕಲ್ 370 ತಂದಾಗ, ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ಕಾಂಗ್ರೆಸಿಗರು ವಿರೋಧಿಸಿದ್ದರು. ದೇಶದ ಒಳಿತಿಗಾಗಿ ಏನೇ ಮಾಡಿದರೂ ಇವರು ವಿರೋಧಿಸಿದ್ದಾರೆ. ಇದು ಅಕ್ಷಮ್ಯ ಅಪರಾಧ. ಮಹಿಳೆಯರ ಭವಿಷ್ಯ ನಿರ್ಮಾಣಕ್ಕೆ ನೆರವಾಗಬೇಕಿದ್ದ ಮಸೂದೆಗೆ ತಡೆ ಒಡ್ಡಿ ಕರಾಳ ದಿನವಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕುತಂತ್ರಿ. ಈಗ ಅವರು ಅತಂತ್ರರಾಗಿದ್ದಾರೆ. ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಬಜೆಟ್ನಲ್ಲಿ ಏನೂ ತೋರಿಸದೆ ನಂತರ ಬೆಲೆ ಏರಿಕೆ ಮಾಡಿದರು. ಉಪ ಚುನಾವಣೆಗೆ ಕಾದು ಈಗ ಬೆಲೆ ಏರಿಕೆ ಮಾಡಿದ್ದಾರೆ
- ಆರ್.ಅಶೋಕ್. ವಿರೋಧ ಪಕ್ಷದ ನಾಯಕ


