ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ED) 17 ಕಡೆ ದಾಳಿ ನಡೆಸಿದ್ದು, ಬಿಟ್‌ಕಾಯಿನ್ ಹಗರಣದ ತನಿಖೆಯ ಭಾಗವಾಗಿ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರ ಮೊಹಮ್ಮದ್ ನಲಪಾಡ್ ನಿವಾಸದ ಮೇಲೂ ಶೋಧ ನಡೆಸಿದೆ. ಪ್ರಮುಖ ಆರೋಪಿ ಶ್ರೀಕೃಷ್ಣ ಜೊತೆಗಿನ ಸಂಪರ್ಕದ ಶಂಕೆಯ ಮೇಲೆ ಈ ದಾಳಿ ನಡೆದಿದೆ.

ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಒಟ್ಟು 17 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ಶಾಸಕ ನಲಪಾಡ್ ಹ್ಯಾರಿಸ್ ಹಾಗೂ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ಅಶೋಕ ನಗರ ನಿವಾಸಗಳ ಮೇಲೂ ಶೋಧ ನಡೆದಿದೆ. ಅಶೋಕ್ ನಗರದಲ್ಲಿರುವ ಇವರ ಮನೆಗಳಲ್ಲಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ.

ಸುಮಾರು 12 ಮಂದಿ ಇಡಿ ಅಧಿಕಾರಿಗಳ ತಂಡ ಮನೆ ಒಳಗೆ ದಾಖಲೆಗಳು ಮತ್ತು ಇತರೆ ಮಾಹಿತಿಗಳ ಪರಿಶೀಲನೆ ನಡೆಸುತ್ತಿದೆ. ಈ ದಾಳಿ ಹಿಂದಿನ ಕೆಲವು ವರ್ಷಗಳಿಂದ ನಡೆಯುತ್ತಿರುವ ಬಿಟ್‌ಕಾಯಿನ್ ಸಂಬಂಧಿತ ಪ್ರಕರಣಗಳ ತನಿಖೆಯ ಭಾಗವಾಗಿದ್ದು, ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ (ಶ್ರೀಕಿ) ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಅನುಮಾನದ ಮೇಲೆ ಈ ದಾಳಿ ನಡೆದಿದೆ.

ಸುಮಾರು ಆರು ವರ್ಷಗಳ ಹಿಂದೆ ನಡೆದಿದ್ದ ನಾಲ್ಕೂವರೆ ಕೋಟಿ ರೂಪಾಯಿ ಮೌಲ್ಯದ ಹಣಕಾಸು ವ್ಯವಹಾರ ಈ ದಾಳಿಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. 2024ರ ಜೂನ್ ತಿಂಗಳಲ್ಲಿ ಸಿಐಡಿ ವಿಶೇಷ ತನಿಖಾ ದಳ (SIT) ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿತ್ತು. ಇದಕ್ಕೂ ಮುನ್ನ, 2021ರಲ್ಲಿ ಸಿಸಿಬಿ (CCB) ಅಧಿಕಾರಿಗಳಿಂದ ಇಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿತ್ತು. ನಂತರ ಸಿಐಡಿ ಅಧಿಕಾರಿಗಳಿಂದ ಅಧಿಕೃತ ಪ್ರಕರಣದ ದಾಖಲೆಗಳನ್ನು ಪಡೆದು ತನಿಖೆಯನ್ನು ಮುಂದುವರಿಸಿತ್ತು.

ಕರ್ನಾಟಕದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕೇಸ್‌ಗಳು ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದಾಗಿ ತಿಳಿದುಬಂದಿದೆ. ಜಾರಿ ನಿರ್ದೇಶನಾಲಯವು ಪಿಎಮ್‌ಎಲ್‌ಎ 2002 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

ಕ್ರಿಪ್ಟೋಕರೆನ್ಸಿ ಹ್ಯಾಕ್

ತನಿಖೆಯ ಪ್ರಕಾರ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವೆಬ್‌ಸೈಟ್‌ಗಳು ಹಾಗೂ ಡಿಜಿಟಲ್ ವಾಲೆಟ್‌ಗಳನ್ನು ಹ್ಯಾಕ್ ಮಾಡಿ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು (ಕ್ರಿಪ್ಟೋಕರೆನ್ಸಿ) ಕಳವು ಮಾಡಲಾಗಿದೆ ಎಂಬ ಆರೋಪಗಳಿವೆ. ಹ್ಯಾಕ್ ಮಾಡಲಾದ ಡೇಟಾ ಮತ್ತು ಹಣವನ್ನು ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಿ, ಆ ಮೂಲಕ ಬಂದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ಈ ಹಣವನ್ನು ಶ್ರೀಕೃಷ್ಣ ಹಾಗೂ ಅವರ ಸಹಚರರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ, ಶ್ರೀಕಿ ಮತ್ತು ರಾಬಿನ್ ಖಂಡೆವಾಲ ನಡುವೆ ಹಣಕಾಸು ವ್ಯವಹಾರಗಳು ನಡೆದಿರುವುದೂ ದೃಢಪಟ್ಟಿದೆ.

ಇಡಿ ದಾಳಿಯ ಮಹತ್ವ

ಈ ದಾಳಿ ಬೆಂಗಳೂರು ಇಡಿ ಘಟಕದಿಂದ ನಡೆಸಲ್ಪಟ್ಟಿದ್ದು, ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಲೆಕ್ಕಾಚಾರಗಳು ಮತ್ತು ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿದೆ. ನಲಪಾಡ್ ಹಾಗೂ ಹ್ಯಾರಿಸ್ ಅವರ ನಿವಾಸಗಳಲ್ಲಿ ನಡೆದಿರುವ ಶೋಧದಿಂದ ಈ ಪ್ರಕರಣದಲ್ಲಿ ಹೊಸ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ. ಈ ಪ್ರಕರಣವು ರಾಜ್ಯದ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ತನಿಖೆಯ ದಿಕ್ಕು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.