ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ, ಮಗನ ಜಗಳವನ್ನು ಬಿಡಿಸಲು ಹೋದ 50 ವರ್ಷದ ತಂದೆ ಮಾಬುಸಾಬ್ ಯುವಕರ ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ. ಈ ಘೋರ ಘಟನೆಗೆ ಸಂಬಂಧಿಸಿದಂತೆ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಕಾರಿಗನೂರು ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಯುವಕರ ಜಗಳವು ಹೃದಯವಿದ್ರಾವಕ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಗನೊಂದಿಗೆ ಜಗಳವಾಡುತ್ತಿದ್ದ ಯುವಕರ ಗುಂಪನ್ನು ಬಿಡಿಸಲು ಹೋಗಿದ್ದ ತಂದೆಯೇ ಯುವಕರ ಹಲ್ಲೆಗೆ ಬಲಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳಾದ ಭಂಗಿ ಹನುಮಂತ, ಚರಣ, ಹುಲಿಗೆಮ್ಮ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರ, ದರ್ಶನ, ಚಂದ್ರ, ಗುರಯ್ಯ ಎಂಬ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಕಾರಿಗನೂರು ಪ್ರದೇಶದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಜತೆಗೆ ಪೊಲೀಸರ ಗಸ್ತು ಕೂಡ ಹೆಚ್ಚಳ ಮಾಡಲಾಗಿದೆ. ಐಜಿಪಿ ವರ್ತಿಕಾ ಕಟಿಯಾರ್‌, ಎಸ್ಪಿ ಎಸ್‌. ಜಾಹ್ನವಿ, ಎಎಸ್ಪಿ ಮಂಜುನಾಥ, ಡಿವೈಎಸ್ಪಿಡಾ. ಮಂಜುನಾಥ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

15ಕ್ಕೂ ಹೆಚ್ಚು ಯುವಕರಿಂದ ಹಲ್ಲೆ

ಮೃತ ವ್ಯಕ್ತಿಯನ್ನು ಕಾರಿಗನೂರು ನಿವಾಸಿ ಮಾಬುಸಾಬ್ (50) ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಹಿತಿಯ ಪ್ರಕಾರ, ಮಾಬುಸಾಬ್ ಅವರ ಎರಡನೇ ಮಗ ಮೌಲಾಹುಸೇನ್ ಮತ್ತು ಯುವಕರ ನಡುವೆ ಜಗಳ ನಡೆಯುತ್ತಿತ್ತು. ಈ ಜಗಳ ತೀವ್ರ ಸ್ವರೂಪ ಪಡೆದು, ಸುಮಾರು 15ಕ್ಕೂ ಹೆಚ್ಚು ಜನರ ಯುವಕರ ಗುಂಪು ಮೌಲಾಹುಸೇನ್ ಮೇಲೆ ಹಲ್ಲೆಗೆ ಮುಂದಾಯಿತು.

ಮಗನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಗಮನಿಸಿದ ತಂದೆ ಮಾಬುಸಾಬ್ ಜಗಳವನ್ನು ಶಮನಗೊಳಿಸಲು ಮಧ್ಯ ಪ್ರವೇಶಿಸಿದ್ದಾರೆ. ಆದರೆ, ಜಗಳ ಬಿಡಿಸಲು ಹೋದ ತಂದೆಯ ಮೇಲೆಯೇ ಆಕ್ರೋಶಗೊಂಡ ಯುವಕರ ಗುಂಪು ಹಲ್ಲೆ ನಡೆಸಿದ್ದು, ಈ ವೇಳೆ ಮಾಬುಸಾಬ್ ಅವರ ಎದೆಗೆ ತೀವ್ರವಾಗಿ ಹೊಡೆದಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಗಂಡನ ಸಾವಿಗೆ ನ್ಯಾಯ ಕೊಡಿಸಿ ಎಂದು ಪತ್ನಿ ಕಣ್ಣೀರು

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಹೊಸಪೇಟೆ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. “ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ” ಎಂದು ಪತ್ನಿ ಕಣ್ಣೀರಿಟ್ಟಿದ್ದಾರೆ.

ಈ ದುರ್ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನೆಲ್ಲ ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಟನೆಯಿಂದ ಕಾರಿಗನೂರು ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಬಲಪಡಿಸಿದೆ.