ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ ಕನ್ನಡತಿ ಸಾಧ್ವಿ ಸೈಲ್ ತವರಿಗೆ ಮರಳಿದ್ದಾರೆ. ಗೋವಾ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಗೆದ್ದ ಕಾರವಾರದ ಶಾಸಕರ ಪುತ್ರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.

ಕಾರವಾರ: ಫೆಮಿನಾ ಮಿಸ್ ಇಂಡಿಯಾ 2026 ಕಿರೀಟವನ್ನು ಗೆದ್ದು ದೇಶದ ಮಟ್ಟದಲ್ಲಿ ಕೀರ್ತಿ ತಂದ ಕನ್ನಡತಿ ಸಾಧ್ವಿ ಸೈಲ್ ಅವರು ಇಂದು ತವರಿಗೆ ಮರಳುತ್ತಿದ್ದಂತೆ ಅದ್ದೂರಿ ಸ್ವಾಗತ ದೊರೆಯಿತು. ಗೋವಾದ ದಾಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು, ಸ್ನೇಹಿತರು ಮತ್ತು ಬಂಧುಗಳು ಸೇರಿ ಸಾಧ್ವಿ ಅವರಿಗೆ ಭರ್ಜರಿ ಬರಮಾಡಿಕೊಂಡರು.

ಸಾಧ್ವಿ ಸೈಲ್ ಅವರು ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿಯಾಗಿದ್ದು, ಮೂಲತಃ ಗೋವಾದಲ್ಲಿ ಜನಿಸಿದ ಹಿನ್ನೆಲೆ ಈ ಬಾರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಕನ್ನಡತಿ ಎಂಬ ಹೆಗ್ಗಳಿಕೆಯನ್ನು ಕೊಂಡೊಯ್ದ ಅವರು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಕಿರೀಟ ಗೆದ್ದು ಗಮನ ಸೆಳೆದಿದ್ದಾರೆ.

ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿ ನಡೆದ ಸ್ಪರ್ಧೆ

ಈ ವರ್ಷದ ಫೆಮಿನಾ ಮಿಸ್ ಇಂಡಿಯಾ 2026 ಸ್ಪರ್ಧೆ ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಆವರಣದಲ್ಲಿ ನಡೆದಿತ್ತು. ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಸುಂದರಿಯರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಸಾಧ್ವಿ ಸೈಲ್ ಅವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ರಾಜನಂದಿನಿ ಪವಾರ್ ಪ್ರಥಮ ರನ್ನರ್-ಅಪ್ ಸ್ಥಾನವನ್ನು ಪಡೆದರು.

ಕಿರೀಟ ಗೆದ್ದ ನಂತರ ಮೊದಲ ಬಾರಿಗೆ ತವರಿಗೆ ಆಗಮಿಸಿದ ಸಾಧ್ವಿಗೆ ಅಭಿಮಾನಿಗಳಿಂದ ಭಾರೀ ಸ್ವಾಗತ ದೊರಕಿದ್ದು, ಹರ್ಷೋದ್ಗಾರಗಳು ಮೊಳಗಿದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಧ್ವಿ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗೋವಾದಲ್ಲಿ ಸನ್ಮಾನ ಕಾರ್ಯಕ್ರಮ

ಇನ್ನೊಂದೆಡೆ, ಮಿಸ್ ಇಂಡಿಯಾ ವಿಜೇತೆ ಸಾಧ್ವಿ ಸೈಲ್ ಅವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ ಗೋವಾದ ತಾಜ್ ಹಾರಿಝಾನ್‌ನಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಒಟ್ಟಾರೆ, ಕಾರವಾರದ ಹೆಮ್ಮೆಯ ಪುತ್ರಿ ಸಾಧ್ವಿ ಸೈಲ್ ಅವರ ಈ ಸಾಧನೆ ಕರ್ನಾಟಕಕ್ಕೂ ಹೆಮ್ಮೆ ತಂದುಕೊಟ್ಟಿದ್ದು, ಯುವತಿಯರಿಗೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.