ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಬಾಕಿ ಉಳಿಸಿಕೊಂಡಿದ್ದ ರೂ. 2.67 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸಿದೆ. ಪಂಚಾಯತ್ನಿಂದ ನೋಟಿಸ್ ಜಾರಿಯಾದ ಬಳಿಕ, ಆಡಳಿತ ಮಂಡಳಿಯು ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸುವ ಮೂಲಕ ದೀರ್ಘಕಾಲದ ವಿವಾದಕ್ಕೆ ತೆರೆ ಎಳೆದಿದೆ.
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಬಾಕಿಯಾಗಿದ್ದ ರೂ. 2 ಕೋಟಿ 67 ಲಕ್ಷ ಆಸ್ತಿ ತೆರಿಗೆಯನ್ನು ಇಂದು ಪಾವತಿಸಲಾಗಿದೆ ಎಂದು ವರದಿಯಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಸತಿಗೃಹಗಳ ಆಸ್ತಿ ತೆರಿಗೆ ದೀರ್ಘಕಾಲ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ, ವಸತಿಗೃಹ ಜಪ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ನೀಡಿದ ಬಳಿಕವೇ ದೇವಸ್ಥಾನ ಆಡಳಿತದಿಂದ ಬಾಕಿ ತೆರಿಗೆ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಶ್ಲೇಷ ವಸತಿಗೃಹಕ್ಕೆ ಸಂಬಂಧಿಸಿದಂತೆ ರೂ. 1 ಕೋಟಿ 23 ಲಕ್ಷ ಹಾಗೂ ದೇವಸ್ಥಾನಕ್ಕೆ ಸೇರಿದ ಇತರೆ ಕೆಲವು ಕಟ್ಟಡಗಳ ರೂ. 1 ಕೋಟಿ 44 ಲಕ್ಷ ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸಲಾಗಿದೆ. ಈ ಮೂಲಕ ಒಟ್ಟು ರೂ. 2 ಕೋಟಿ 67 ಲಕ್ಷ ತೆರಿಗೆ ಮೊತ್ತ ಗ್ರಾಮ ಪಂಚಾಯತ್ಗೆ ಸಂದಿದೆ. ಈ ಬೆಳವಣಿಗೆಗೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ಸಂತಸ ವ್ಯಕ್ತಪಡಿಸಿದ್ದು, ಬಾಕಿ ತೆರಿಗೆ ಪಾವತಿಸಿದಕ್ಕಾಗಿ ದೇವಸ್ಥಾನ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಕ್ಕೆ ದೇಗುಲದ ಆದಾಯ ಎಷ್ಟು?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ಆದಾಯ ₹155.95 ಕೋಟಿ ಆಗಿತ್ತು. ಈ ಆದಾಯವು 2023-24ನೇ ಸಾಲಿಗೆ ಹೋಲಿಸಿದರೆ 9.94 ಕೋಟಿ ರೂ. ಹೆಚ್ಚಾಗಿದ್ದು, ದೇವಸ್ಥಾನವು ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ದೇವಸ್ಥಾನದ ಒಟ್ಟು ಖರ್ಚು 79.82 ಕೋಟಿ ರೂ. ಆಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಬರುವ ಈ ದೇಗುಲವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಈ ಆದಾಯ ಬಂದಿದೆ.
ಕಿರುಸಷ್ಠಿ ಸಂಭ್ರಮ
ಇನ್ನು ದೇವಾಲಯ ನಗರಿ ಹಾಗೂ ಸಾಂಸ್ಕೃತಿಕ ನಗರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಕಿರುಷಷ್ಠಿ ಸಾಂಸ್ಕೃತಿಕ ವೈಭವ 5 ದಿನಗಳ ಕಾಲ ಡಿ. 22ರಿಂದ 26ರ ತನಕ ರಥಬೀದಿಯ ನೂತನ ಸಭಾಭವನದಲ್ಲಿನೆರವೇರಲಿದೆ. ಡಿ.26ರಂದು ಸಂಜೆ ಶ್ರೀ ದೇವರ ವೈಭವದ ಕಿರುಷಷ್ಠಿ ರಥೋತ್ಸವ ನೆರವೇರಲಿದೆ.


