ಕೇಂದ್ರ ಸಚಿವ ವಿ.ಸೋಮಣ್ಣ ಅವರು ಟೇಕಲ್‌ನಲ್ಲಿ 23.5 ಕೋಟಿ ರೂ. ವೆಚ್ಚದ ರೈಲ್ವೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ರಾಜ್ಯದಲ್ಲಿ  2000 ಕೋಟಿ ರೂ. ವೆಚ್ಚದ ರೈಲ್ವೇ ಆಧುನೀಕರಣ ಮತ್ತು ಕೋಲಾರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಟೇಕಲ್: ರಾಜ್ಯದ ಎಲ್ಲ ಕಡೆ ಸುಮಾರು 2000 ಕೋಟಿ ರುಪಾಯಿ ವೆಚ್ಚದಲ್ಲಿ ರೈಲ್ವೇ ವಿದ್ಯುದ್ದೀಕರಣ ಮತ್ತು ಆಧುನೀಕರಣ ಮಾಡಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಲೆವೆಲ್ ಕ್ರಾಸಿಂಗ್ ಬದಲಿಗೆ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯ ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜ್ಯಕ್ಕೆ ಕೋಲಾರ, ಬೆಂಗಳೂರು, ರಾಮನಗರ ಹಾಗೂ ತುಮಕೂರು ಹೃದಯಭಾಗ ಇದ್ದ ಹಾಗೆ. ಈ ಭಾಗದ ಅಭಿವೃದ್ದಿ ಮಾಡುವುದು ನಮ್ಮ ಚಿಂತೆನೆಯಾಗಿದೆ. ಕೋಲಾರದಿಂದ ಬೆಂಗಳೂರಿಗೆ ನೇರ ರೈಲ್ವೇ ಮಾಡಲು ಸ್ಥಳ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕೇಂದ್ರ- ರಾಜ್ಯ ಸಹಭಾಗಿತ್ವ

ಈ ಮೇಲ್ಸೇತುವೆ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ 50:50 ವೆಚ್ಚ ಹಂಚಿಕೆಯ ಆಧಾರದಲ್ಲಿ 23.5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರಸ್ತೆ ಮೇಲ್ಸೇತುವೆ ರೈಲ್ವೆ ಸ್ಕ್ಯಾನ್ 36 ಮೀ. ಬೋ ಸ್ಪಿಂಗ್ ಗರ್ಡರ್ ನಿಂದ ಕೂಡಿದೆ. ಮಾಲೂರು ಕಡೆಗೆ 140.28 ಮೀ. ಉದ್ದದ ಅಪ್ರೋಚ್ ರೋಡ್ ಇದ್ದು ಬಂಗಾರಪೇಟೆಯ ಕಡೆಗೆ 154.7 ಮೀ. ಉದ್ದದ ಅಪ್ರೋಚ್ ಇದೆ ಎಂದರು.

ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಕಷ್ಟಕರವಾಗಿದೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಭಾರತ ಸರ್ಕಾರದ ಪೂರ್ಣ ಅನುದಾನದಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕೋಚ್ ಫ್ಯಾಕ್ಟರಿಗೆ ಜಾಗ ನೀಡಲಿ

ಈ ಹಿಂದೆ ಕೆ.ಎಚ್.ಮುನಿಯಪ್ಪ ರೈಲ್ವೆ ಖಾತೆ ಸಚಿವರಾಗಿದ್ದ ವೇಳೆ ಕೋಲಾರ ಜಿಲ್ಲೆಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಪ್ರಾರಂಭಿಸಲು ಉದ್ದೇಶಿಸಿದ್ದರು, ಆದರೆ ಅದು ಕೈಗೂಡಿರಲಿಲ್ಲ, ಇಲ್ಲಿನ ಜಿಲ್ಲಾಡಳಿತ ಜಮೀನನ್ನು ಒದಗಿಸಿದರೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಕಾರ್ಖಾನೆ ತೆರೆದು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.

ಸಾರ್ವಜನಿಕರಿಗೆ ಅನುಕೂಲ:

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಹಲವು ವರ್ಷಗಳ ಕನಸು ನನಸಾಗಿದೆ, ಟೇಕಲ್ ರೈಲ್ವೆ ಹಳಿಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ ಇದರಿಂದ ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗಿತ್ತು, ರಾಜ್ಯ-ಕೇಂದ್ರ ಸರ್ಕಾರದ ಶೇ.50ರ ಅನುದಾನದಡಿ 23 ಕೋಟಿ ರೂಗಳ ವೆಚ್ಚದಲ್ಲಿ ಗುಣಮಟ್ಟದ ರೈಲ್ವೆ ಮೇಲ್ಸೇತುವೆ ನಿರ್ಮಿಸಿರುವುದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಸಂಸದ ಎಂ.ಮಲ್ಲೇಶ್ ಬಾಬು, ಶಾಸಕಿ ರೂಪಕಲಾ ಶಶಿಧರ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಅನಿಲ್ ಕುಮಾರ್, ಜಿಲ್ಲಾಧಿಕಾರಿ ರವಿಕುಮಾರ್, ಜಿಪಂ ಸಿಇಒ ಪ್ರವೀಣ್ ಬಾಗೇವಾಡಿ, ಎಸ್ಪಿ ನಿಖಿಲ್.ಬಿ, ಮಾಜಿ ಶಾಸಕ ವೆಂಕಟಮುನಿಯಪ್ಪ, ಗ್ರಾಪಂ ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷೆ ಮಮತಾ ಶಶಿಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮತ್ತಿತರರು ಇದ್ದರು.

ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಹೊಸ ಮಾರ್ಗ ಮತ್ತು ಯೋಜನೆ

ಗದಗ-ವಾಡಿ: 2025-26ನೇ ಸಾಲಿನ ಬಜೆಟ್‌ನಲ್ಲಿ ₹549.45 ಕೋಟಿ ಹಂಚಿಕೆ ಮಾಡಲಾಗಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ: ₹549.45 ಕೋಟಿ ಮಂಜೂರು ಮಾಡಲಾಗಿದೆ

ರಾಯದುರ್ಗ-ತುಮಕೂರು ಮಾರ್ಗವಾಗಿ ಕಲ್ಯಾಣದುರ್ಗ: ₹434.85 ಕೋಟಿ ಮಂಜೂರು.

ಬಾಗಲಕೋಟ-ಕುಡಚಿ: ₹428.1 ಕೋಟಿ ಮಂಜೂರು.

ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ-ಡಿ-ಗಾಮ: ದ್ವಿಗುಣಗೊಳಿಸಲು ₹413.73 ಕೋಟಿ ಮೀಸಲಿಡಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆ (BSRP): 2025-26ಕ್ಕೆ ₹350 ಕೋಟಿ ಹಂಚಿಕೆ.

ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ಪುನರಾಭಿವೃದ್ಧಿ: ಈ ನಿಲ್ದಾಣಗಳು ಕ್ರಮವಾಗಿ ₹367 ಕೋಟಿ ಮತ್ತು ₹485 ಕೋಟಿ ಹಂಚಿಕೆಯೊಂದಿಗೆ ಪುನರಾಭಿವೃದ್ಧಿಗೆ ಒಳಗಾಗುತ್ತಿವೆ.