ಮಂಜಿನ ನಗರಿ ಮಡಿಕೇರಿ ಅಂದ್ರೆ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುತ್ತೆ. ದೂರದ ಬೆಟ್ಟ ಅಂದರೆ ನುಣ್ಣಗೆ ಎನ್ನುವ ಹಾಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಡಿಕೇರಿ ಅಂದರೆ ಸ್ವರ್ಗ ಎನ್ನುತ್ತಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.10): ಮಂಜಿನ ನಗರಿ ಮಡಿಕೇರಿ ಅಂದ್ರೆ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುತ್ತೆ. ದೂರದ ಬೆಟ್ಟ ಅಂದರೆ ನುಣ್ಣಗೆ ಎನ್ನುವ ಹಾಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಡಿಕೇರಿ ಅಂದರೆ ಸ್ವರ್ಗ ಎನ್ನುತ್ತಾರೆ. ಆದರೆ ಜಿಲ್ಲಾ ಕೇಂದ್ರದ ಬಡಾವಣೆ ಒಂದರಲ್ಲೇ ಕನಿಷ್ಠ ರಸ್ತೆಯೂ ಇಲ್ಲದ ಬಡಾವಣೆಗಳೂ ಇದ್ದು, ಯಾರಾದರೂ ಸತ್ತರೂ ಹೆಣ ಹೊರುವುದಕ್ಕೂ ರಸ್ತೆಯಿಲ್ಲದ ಪರಿಸ್ಥಿತಿ ಇದೆ. ಆ ಸ್ಥಿತಿಯನ್ನು ನೀವು ಒಮ್ಮೆ ಓದಿ. ಸಾಮಾನ್ಯವಾಗಿ ಹೆಣಭಾರ ಎನ್ನುವ ಮಾತೊಂದು ಇದೆ ಅಲ್ವಾ,? ಹೆಣ ಎಂದರೆ ಅತ್ಯಂತ ಭಾರವಾದದ್ದು.

ಹೀಗಾಗಿಯೇ ಶವ ಹೊರುವುದಕ್ಕೆ ನಾಲ್ಕು ಜನರು ಬೇಕೇ ಬೇಕಲ್ವಾ. ಆದರೆ ಅತ್ಯಂತ ಕಡಿದಾದ ಬೆಟ್ಟ ಪ್ರದೇಶದಲ್ಲೂ ಅದೇ ಹೆಣ ಹೊರುವುದಕ್ಕೂ ಇಲ್ಲಿ ದಾರಿಯೇ ಇಲ್ಲ. ಹೌದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಕನ್ನಂಡಬಾಣೆ ಬಡಾವಣೆಯಲ್ಲಿ ಇಂದಿಗೂ ರಸ್ತೆ ಇಲ್ಲ. ಅತ್ಯಂತ ಕಡಿದಾದ ಬೆಟ್ಟ ಪ್ರದೇಶವಾಗಿರುವ ಕನ್ನಂಡಬಾಣೆಯಲ್ಲಿ ಬರೋಬ್ಬರಿ 30 ಕ್ಕೂ ಹೆಚ್ಚು ಕುಟುಂಬಗಳಿದ್ದು 180 ಮೆಟ್ಟಿಲುಗಳನ್ನು ಹತ್ತಿ ಮನೆಗಳಿಗೆ ಹೋಗಬೇಕು. ಬಡಾವಣೆಯ ನಿವಾಸಿ ಧರ್ಮಣ್ಣ ಎಂಬುವವರು ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಅಂತ್ಯ ಸಂಸ್ಕಾರದ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಲು ಮಡಿಕೇರಿಯ ಕನ್ನಂಡ ಬಡಾವಣೆಗೆ ಮೃತದೇಹ ತರಬೇಕಾಗಿತ್ತು.

ವಿಪರ್ಯಾಸವೆಂದರೆ ರಸ್ತೆಯೇ ಇಲ್ಲದಿರುವುದರಿಂದ ನಾಲ್ಕು ಜನರು ಮೃತದೇಹ ಹೊರಲು ದಾರಿಯೇ ಇಲ್ಲದೆ ಕಷ್ಟಪಟ್ಟು ಸ್ಟ್ರಚ್ಚರ್ ಒಂದಕ್ಕೆ ಶವ ಮಲಗಿಸಿ ಇಬ್ಬರೇ ಹೊತ್ತಿದ್ದಾರೆ. ಏದುಸಿರು ಬಿಡುತ್ತಾ 180 ಮೆಟ್ಟಿಲು ಹತ್ತಿದ್ದಾರೆ. ನಂತರ ಅವರ ಮನೆಗೆ ಸಾಗಿಸಿ ಅಲ್ಲಿ ಹಲವು ವಿಧಿ ವಿಧಾನಗಳನ್ನು ನೆರವೇರಿಸಿ ಶ್ಮಶಾನಕ್ಕೆ ಶವ ಸಾಗಿಸಲು ಪಡಬಾರದ ಕಷ್ಟ ಪಟ್ಟಿದ್ದಾರೆ. ಇಬ್ಬರೇ ಶವವನ್ನು ಸ್ಟ್ರಚ್ಚರ್ನಲ್ಲಿ ಹಾಕಿಕೊಂಡು ಕಷ್ಟಪಟ್ಟು 180 ಮೆಟ್ಟಿಲು ಇಳಿದಿದ್ದಾರೆ. ಇದ್ದಾಗಲು ನೆಮ್ಮದಿಯಾಗಿ ಇರಲು ಸಾಧ್ಯವಿರಲಿಲ್ಲ. ಸತ್ತಾಗಲೂ ಸಂಸ್ಕಾರ ಮಾಡಲು ಹೋಗುವುದಕ್ಕೂ ಪಡಬಾರದ ಕಷ್ಟ ಅನುಭವಿಸಬೇಕಾಯಿತು ಎಂದು ಮೃತ ಧರ್ಮ ಅವರ ಪತ್ನಿ.

ಇಷ್ಟಕ್ಕೂ ಇಲ್ಲಿಗೆ ರಸ್ತೆ ಮಾಡದೇ ಇರುವುದಕ್ಕೆ ಕಾರಣ ಅರಣ್ಯ ಇಲಾಖೆ. ಕನ್ನಂಡಬಾಣೆ ಬಡಾವಣೆಯ ಪಕ್ಕದಲ್ಲೇ ಸಂರಕ್ಷಿತಾರಣ್ಯವಿದೆ. ಬಡಾವಣೆಗೂ ಅರಣ್ಯಕ್ಕೂ ಮಧ್ಯೆ 10 ಅಡಿ ಅಂತದ ಜಾಗವಿದ್ದು ಇಲ್ಲಿ ರಸ್ತೆ ಮಾಡಬಹುದು. ಆದರೆ ಅರಣ್ಯ ಇಲಾಖೆ ಇದು ನಮ್ಮ ಜಾಗವಾಗಿದ್ದು, ಫೈಯರ್ ಲೈನ್ ಜಾಗ. ಅಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಮಾಡಲು ಬಿಡುವುದಿಲ್ಲ ಎನ್ನುತ್ತಿದೆ. ಈ ಹಿಂದೆಯೇ ನಗರಸಭೆಯಿಂದ ಇಲ್ಲಿ ರಸ್ತೆ ಮಾಡುವುದಕ್ಕೆ 25 ಲಕ್ಷ ಮೀಸಲಿರಿಸಿತ್ತು ಎನ್ನಲಾಗಿದೆ. ಆ ಅನುದಾನದಲ್ಲಿ ರಸ್ತೆ ನಿರ್ಮಿಸುವುದಕ್ಕೆ ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಿ ಜೆಸಿಬಿ ಮತ್ತಿತರೆ ವಾಹನಗಳನ್ನು ಸೀಜ್ ಮಾಡಿದ್ದರಂತೆ.

ಹೀಗಾಗಿ ಕಳೆದ 45 ರಿಂದ 50 ವರ್ಷಗಳಿಂದಲೂ ರಸ್ತೆಯೇ ಇಲ್ಲದೆ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಯಾರಿಗಾದರೂ ಆರೋಗ್ಯ ಸರಿಯಿಲ್ಲದಿದ್ದರೂ ಕುರ್ಚಿಗಳಲ್ಲಿ ಕೂರಿಸಿಕೊಂಡು ಹೊತ್ತುಕೊಂಡು ಹೋಗಬೇಕು. ವೃದ್ಧರಂತು ಮನೆ ಬಿಟ್ಟು ಎಲ್ಲಿಯೂ ಹೋಗುವಂತೆಯೇ ಇಲ್ಲ. ಪುಟ್ಟ ಮಕ್ಕಳು ಅಂಗನವಾಡಿಗೂ ಹೋಗುವಂತೆ ಇಲ್ಲ ಎನ್ನುವ ಪರಿಸ್ಥಿತಿ ನಮ್ಮದು ಎಂದು ಮಹಿಳೆ ದಮಯಂತಿ ಹೇಳಿದ್ದಾರೆ. ಏನೇ ಆಗಲಿ ಅರಣ್ಯ ಇಲಾಖೆ ಇದು ನಮ್ಮ ಜಾಗ ರಸ್ತೆ ಮಾಡಲು ಬಿಡುವುದಿಲ್ಲ ಎಂದು ಅಡ್ಡಿಪಡಿಸುತ್ತಿದ್ದು ಜನರು ಮಾತ್ರ ನಿತ್ಯ 180 ಮೆಟ್ಟಿಲುಗಳನ್ನು ಹತ್ತಿ ಇಳಿದು ಬದುಕು ದೂಡುವಂತೆ ಆಗಿದೆ.