ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೇಗಾದರೂ ಮಾಡಿ ಉತ್ತಮ ಆದಾಯ ಗಳಿಸಬೇಕೆಂಬ ದೃಷ್ಟಿಯಿಂದ ರೈತರು ಕಷ್ಟಪಟ್ಟು ಕೃಷಿ ಮಾಡುತ್ತಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.02): ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೇಗಾದರೂ ಮಾಡಿ ಉತ್ತಮ ಆದಾಯ ಗಳಿಸಬೇಕೆಂಬ ದೃಷ್ಟಿಯಿಂದ ರೈತರು ಕಷ್ಟಪಟ್ಟು ಕೃಷಿ ಮಾಡುತ್ತಾರೆ. ಅಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ತಾವು ಮಾಡಿದ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಹೌದು ಕೊಡಗಿನ ರೈತರ ಬದುಕಿನಲ್ಲೂ ಇದೇ ರೀತಿ ಆಗಿದೆ. ಅರೆಮಲೆನಾಡಿನಂತೆ ಇರುವ ಕುಶಾಲನಗರ ಭಾಗದ ಸಾವಿರಾರು ರೈತರು ಸಿಹಿಗೆಣಸು ಬೆಳೆದಿದ್ದರು. ಕೂಡಿಗೆ, ಹುದುಗೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರು ಹಾಗೂ ಸಿದ್ದಲಿಂಗಪುರ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಾವಿರಾರು ರೈತರು ಬೇಸಿಗೆಯಲ್ಲೂ ನೀರು ಹಾಯಿಸಿ ಸಿಹಿಗೆಣಸು ಬೆಳೆ ಉಳಿಸಿಕೊಂಡು ಉತ್ತಮ ಬೆಳೆ ಬೆಳೆದಿದ್ದರು.
ಎಕರೆಗೆ ನೂರೈವತ್ತರಿಂದ ಇನ್ನೂರು ಕ್ವಿಂಟಾಲ್ ವರೆಗೆ ಸಿಹಿ ಗೆಣಸು ಬೆಳೆದಿದ್ದಾರೆ. ಒಳ್ಳೆಯ ಬೆಳೆ ಬಂದಿರುವುದರಿಂದ ಕೈತುಂಬ ಆದಾಯ ಬರಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಬೆಳೆಗೆ ಉತ್ತಮ ಬೆಲೆ ಸಿಗದೇ ಇರುವುದರಿಂದ ಸಾವಿರಾರು ರೈತರು ನಷ್ಟ ಅನುಭವಿಸುವಂತೆ ಆಗಿದೆ. ಸಿಹಿಗೆಣಸು ನಮ್ಮ ಬದುಕನ್ನು ಸಿಹಿ ಮಾಡುತ್ತದೆ ಎಂದು ಬೆಳೆದಿದ್ದ ಅದೇ ಸಿಹಿ ಗೆಣಸು ಕಹಿ ನೀಡಿದೆ. ಎಕರೆಗೆ ನೂರಾರು ಕ್ವಿಂಟಾಲ್ ಬೆಳೆ ಬಂದಿದ್ದರೂ ಕೆ.ಜಿಗೆ ಕೇವಲ 8 ರೂಪಾಯಿ ಬೆಲೆ ಮಾತ್ರ ಇದೆ. ಪ್ರತೀ ವರ್ಷ ಕನಿಷ್ಠ 18 ರಿಂದ 20 ರೂಪಾಯಿ ಕೆ.ಜಿ. ಸಿಹಿ ಗೆಣಸಿಗೆ ಸಿಗುತಿತ್ತು. ಈ ವರ್ಷವೂ ಪ್ರತೀ ಕೆ.ಜಿ ಸಿಹಿ ಗೆಣಸಿಗೆ 28 ರೂಪಾಯಿವರೆಗೆ ಬೆಲೆ ಇತ್ತು.
ಆದರೆ ಇದ್ದಕ್ಕಿದ್ದಂತೆ ಬೆಲೆ ಕುಸಿತವಾಗಿ ಕೇವಲ 8 ರೂಪಾಯಿ ದೊರೆಯುತ್ತಿದೆ. ಇದರಿಂದ ರೈತರು ತಾವು ಮಾಡಿರುವ ವೆಚ್ಚವೂ ಕೈಗೆ ಸಿಗುತ್ತಿಲ್ಲ. ಕೆ.ಜಿ. ಸಿಹಿಗೆಣಸಿಗೆ ಕೇವಲ 8 ರೂಪಾಯಿ ಇರುವುದರಿಂದ ವ್ಯಾಪಾರಸ್ಥರು ಕೂಡ ಬಂದು ಖರೀದಿ ಮಾಡುತ್ತಿಲ್ಲ. ಇದರಿಂದ ರೈತರು ತಾವು ಬೆಳೆದಿರುವ ಗೆಣಸನ್ನು ಕಿತ್ತು ದನಕರುಗಳಿಗೆ ಹಾಕುತ್ತಿದ್ದಾರೆ. ಗೆಣಸು ಬೆಳೆಯಲು ಪ್ರತೀ ಎಕರೆಗೆ 20 ರಿಂದ 25 ಸಾವಿರ ವೆಚ್ಚ ಮಾಡಿದ್ದಾರೆ. ಆದರೀಗ ತಾವು ಬೆಳೆದಿರುವ ಸಿಹಿಗೆಣಸನ್ನು ಕೊಳ್ಳುವವರೇ ಇಲ್ಲದಿರುವುದರಿಂದ ರೈತರಿಗೆ ಸಿಹಿಗೆಣಸು ಕಹಿಯಾಗಿ ಮಾರ್ಪಟ್ಟಿದೆ. ಈ ಕುರಿತು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿರುವ ರೈತ ಕೃಷ್ಣೇಗೌಡ ಎರಡು ಎಕರೆಯಲ್ಲಿ 70 ಸಾವಿರ ಖರ್ಚು ಮಾಡಿ ಸಿಹಿ ಗೆಣಸು ಬೆಳೆದಿದ್ದೆ, ಉತ್ತಮ ಬೆಳೆಯೂ ಬಂದಿತ್ತು.
ವಿರಾಜಪೇಟೆಯ ನೆಹರು ನಗರದ ಬೃಹತ್ ಬೆಟ್ಟ ಕೊರೆತ: ಭೂಕುಸಿತಕ್ಕೆ ಆಹ್ವಾನ
ಆದರೆ ಈಗ ಬೆಳೆ ಕಿತ್ತು ಮಾರಾಟ ಮಾಡುವಾಗ ಬೆಲೆ ಸಿಗದೇ ಇರುವುದರಿಂದ ಬೇರೆ ದಾರಿಯಿಲ್ಲದೆ ಒಂದೆಡೆ ಸಂಗ್ರಹಿಸಿಟ್ಟು ಮನೆಯಲ್ಲಿರುವ ದನ ಕರುಗಳಿಗೆ ಹಾಕುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಮತ್ತೊಬ್ಬ ರೈತ ಕಾಳೇಗೌಡ ಅವರು ಮಾತನಾಡಿ ಪ್ರತೀ ವರ್ಷ ಒಂದು ಸ್ವಲ್ಪವಾದರೂ ಲಾಭ ಮಾಡಿಕೊಳ್ಳುತ್ತಿದ್ದೆವು. ಕೆಲವು ವರ್ಷ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದೇವೆ. ಆದರೆ ಈ ಬಾರಿ ಕೃಷಿಗೆ ಮಾಡಿರುವ ವೆಚ್ಚವೂ ಕೈಗೆ ಸಿಗುತ್ತಿಲ್ಲ. ಕನಿಷ್ಠ 15 ರೂಪಾಯಿ ಬೆಲೆ ಪ್ರತೀ ಕೆ.ಜಿ. ಗೆ ಸಿಕ್ಕಿದ್ದರೂ ನಾವು ಮಾಡಿರುವ ವೆಚ್ಚವನ್ನಾದರೂ ನಾವು ವಾಪಸ್ ಪಡೆದುಕೊಳ್ಳುತ್ತಿದ್ದೆವು. ಆದರೀಗ ಅದೂ ಕೂಡ ಸಿಗುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ.


