ಮಹಿಳಾ ಮೀಸಲಾತಿ ಮಸೂದೆಯನ್ನು ತುರ್ತುಗತಿಯಲ್ಲಿ, ಸಮಗ್ರ ಚರ್ಚೆ ಮತ್ತು ಸಲಹೆಗಳಿಲ್ಲದೇ ಮುಂದುವರಿಸಲಾಗುತ್ತಿರುವ ಕ್ರಮ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ (ಏ.18): ಮಹಿಳಾ ಮೀಸಲಾತಿ ಮಸೂದೆಯನ್ನು ತುರ್ತುಗತಿಯಲ್ಲಿ, ಸಮಗ್ರ ಚರ್ಚೆ ಮತ್ತು ಸಲಹೆಗಳಿಲ್ಲದೇ ಮುಂದುವರಿಸಲಾಗುತ್ತಿರುವ ಕ್ರಮ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ನವದೆಹಲಿಯ ಸಂಸತ್ತಿನಲ್ಲಿ ನಡೆಯುತ್ತಿರುವ ಮೂರು ಮಸೂದೆಗಳ ಮಂಡನೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು “ಮೂರು ಮಸೂದೆಗಳನ್ನು ಮೂರು ದಿನಗಳಲ್ಲಿ ತರಲಾಗಿದೆ. ಯಾವುದೇ ಮುಕ್ತ ಶಾಸನಾತ್ಮಕ ಸಲಹೆ ಇಲ್ಲ, ಎಲ್ಲಾ ಪಕ್ಷಗಳೊಂದಿಗೆ ಚರ್ಚೆ ನಡೆದಿಲ್ಲ. ಚರ್ಚೆಗೆ ಕೆಲವೇ ದಿನಗಳ ಮೊದಲು ಪಠ್ಯ ಹಂಚಲಾಗಿದೆ. ಇದು ಸೂಕ್ಷ್ಮ ಆಡಳಿತವಲ್ಲ, ರಾಷ್ಟ್ರೀಯ ಒಪ್ಪಿಗೆಯನ್ನು ಅಗತ್ಯವಿರುವ ವಿಷಯದಲ್ಲಿ ತುರ್ತು ನಿರ್ಧಾರ ಮಾಡುವ ಕ್ರಮವಾಗಿದೆ” ಎಂದು ಹೇಳಿದರು.
ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಮಸೂದೆ ಕುರಿತು ವಿವರಿಸುವ ಮೊದಲು ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಏಕೆ ಕೇಳಲಿಲ್ಲ?” ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದಲ್ಲಿ ಸಂವಾದ ಮತ್ತು ಸಹಕಾರ ದೇಶದ ಸಮೃದ್ಧಿಗೆ ಅವಶ್ಯಕ ಎಂದು ಅವರು ಹೇಳಿದರು.
ಮಹಿಳಾ ಮೀಸಲಾತಿ ಕುರಿತು ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ ಅವರು, “ರಾಜೀವ್ ಗಾಂಧಿ ಅವರ ಕಾಲದಲ್ಲೇ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ವಿಸ್ತರಿಸಲಾಗಿದೆ. ನಮ್ಮ ಬದ್ಧತೆ ಯಾವತ್ತೂ ಷರತ್ತುಬದ್ಧವಾಗಿರಲಿಲ್ಲ” ಎಂದರು.
ಮರು ವಿನ್ಯಾಸಗೊಳಿಸುವುದು ಸೂಕ್ತವಲ್ಲ
ಪ್ರಸ್ತುತ ಮಸೂದೆ ಕುರಿತು ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿ, “ನಾರಿ ಶಕ್ತಿ” ಎಂಬ ಹೆಸರಿನಲ್ಲಿ “ನಾರಿ ಪ್ರತೀಕ್ಷಾ” ಸೃಷ್ಟಿಯಾಗುವ ಅಪಾಯವಿದೆ. ಜನಗಣತಿ ನವೀಕರಣವಿಲ್ಲದೆ, ವಲಸೆ ಕುರಿತ ಸ್ಪಷ್ಟ ಮಾಹಿತಿಯಿಲ್ಲದೆ, ಮುಂದಿನ ದಶಕಗಳ ರಾಜಕೀಯ ಪ್ರತಿನಿಧಿತ್ವವನ್ನು ಮರು ವಿನ್ಯಾಸಗೊಳಿಸುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಪರವಾಗಿ ಮಾತನಾಡಿದ ಅವರು, “ಕರ್ನಾಟಕವು ದೇಶದ ಜಿಡಿಪಿಗೆ ಸುಮಾರು 9% ಕೊಡುಗೆ ನೀಡುತ್ತದೆ. ಶಿಕ್ಷಣ, ಆರೋಗ್ಯ ಹಾಗೂ ಜನಸಂಖ್ಯಾ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿರುವ ರಾಜ್ಯಕ್ಕೆ ಕಡಿಮೆ ಪ್ರತಿನಿಧಿತ್ವ ನೀಡುವುದು ನ್ಯಾಯವೇ?” ಎಂದು ಪ್ರಶ್ನಿಸಿದರು. ಮಸೂದೆದಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡದಿರುವುದನ್ನು ಅವರು ಟೀಕಿಸಿ, “ಇದು ಸಂಪೂರ್ಣ ಪ್ರತಿನಿಧಿತ್ವವಲ್ಲ, ಆಯ್ದ ಪ್ರತಿನಿಧಿತ್ವ ಮಾತ್ರ” ಎಂದರು.


