ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಡೆಯುತ್ತಿದೆ. 14 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು 33 ವರ್ಷಗಳ ಬಳಿಕ ಸಿದ್ದಿವಿನಾಯಕನಿಗೆ ಮೂಡಪ್ಪ ಸೇವೆ ನಡೆಯುತ್ತಿದೆ. ನಟಿ ಅನುಷ್ಕಾ ಶೆಟ್ಟಿ 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಿಸಿದ್ದಾರೆ. ಗಜಪೃಷ್ಠಾಕೃತಿಯ ಈ ಪುರಾತನ ದೇವಸ್ಥಾನವನ್ನು ನವೀಕರಿಸಲಾಗಿದೆ. ಇಲ್ಲಿ ಶಿವ ಮತ್ತು ಗಣಪತಿ ಮುಖ್ಯ ಆರಾಧನಾ ಮೂರ್ತಿಗಳು. ಅಷ್ಟ ದ್ರವ್ಯ ಗಣಪತಿ ಹೋಮವನ್ನು ಸಂಪತ್ತು, ವ್ಯಾಪಾರ ಅಭಿವೃದ್ಧಿ ಮತ್ತು ವಿವಾಹ ವಿಳಂಬ ನಿವಾರಣೆಗೆ ಮಾಡಲಾಗುತ್ತದೆ. ಎಳ್ಳೆಣ್ಣೆ, ಬೆಲ್ಲ, ಕಬ್ಬು, ಜೇನುತುಪ್ಪ, ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು, ಅಕ್ಷತೆಗಳನ್ನು ಹೋಮಕ್ಕೆ ಬಳಸಲಾಗುತ್ತದೆ.
ಗಡಿನಾಡು ಕಾಸರಗೋಡಿನ ಅತ್ಯಂತ ಜನಪ್ರಿಯ, ಕಾರಣಿಕ ಕ್ಷೇತ್ರ ಮಧೂರಿನಲ್ಲಿರುವ ಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ. ಈ ದೇವಸ್ಥಾನದಲ್ಲಿ ಶಿವ ಹಾಗೂ ಗಣಪತಿ ಮೂಲ ಆರಾಧನ ಮೂರ್ತಿ. ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮತ್ತು ಮೂಡಪ್ಪ ಸೇವೆ ಅದ್ಧೂರಿಯಾಗಿ ನಡೆಯುತ್ತಿದೆ. ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಮೂಡಪ್ಪ ಸೇವೆ ಮಾಡಿಸಿದ್ದಾರೆ. 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಿಸಿದ್ದು, ಆದರೆ ಕಾರಣಾಂತರಗಳಿಂದ ನಟಿ ಇದರಲ್ಲಿ ಭಾಗಿಯಾಗಿಲ್ಲ. ಕ್ಷೇತ್ರದಕ್ಕೆ ಬರಲು ಆಗದ ಕಾರಣ ತನ್ನ ಹೆಸರಿನಲ್ಲಿ ಸೇವೆ ಮಾಡಿಸಿದ್ದಾರೆ. ಮಧೂರು ಮದನಂತೇಶ್ವರ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ 14 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದ್ದು 33 ವರ್ಷಗಳ ಬಳಿಕ ಸಿದ್ದಿವಿನಾಯಕನಿಗೆ ಮೂಡಪ್ಪ ಸೇವೆ ನಡೆದಿದೆ.
ಕೇರಳದ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಮಧೂರು ಗಣಪತಿ ಕ್ಷೇತ್ರವೂ ಒಂದಾಗಿದ್ದು, ಗಜಪೃಷ್ಠಾಕೃತಿಯ ಈ ದೇವಸ್ಥಾನವನ್ನು ಪುರಾತನ ಶೈಲಿ ಉಳಿದುಕೊಂಡು ಯಾವುದೇ ಧಕ್ಕೆ ಬರದಂತೆ ನವೀಕರಣ ಮಾಡಲಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಮಹಾಶಿವನಿಗೆ ಆರಾಧನೆ ನಡೆದರೆ, ಬಲಭಾಗದಲ್ಲಿ ಮಹಾಗಣಪತಿಗೆ ಆರಾಧನೆ ನಡೆಯುತ್ತದೆ. ದೇವಾಲಯದ ನವೀಕರಣ ಹಿನ್ನೆಲೆಯಲ್ಲಿ ಇಡೀ ಊರನ್ನೇ ಅದ್ಧೂರಿಯಾಗಿ ಅಲಂಕರಿಸಲಾಗಿದೆ. ಇಲ್ಲಿಗೆ ಹೆಚ್ಚಾಗಿ ನೆರೆಯ ದಕ್ಷಿಣ ಕನ್ನಡದ ಜನ ಕೂಡ ಭೇಟಿ ನೀಡುತ್ತಾರೆ.
ಅಷ್ಟ ದ್ರವ್ಯ ಗಣಪತಿ ಹೋಮ ಯಾಕೆ ಮಾಡುತ್ತಾರೆ?
ಗಣಪತಿಯ ಆಶೀರ್ವಾದ ಮತ್ತು ರಕ್ಷಣೆಗಾಗಿ ಹಲವು ಹೋಮಗಳನ್ನು ಮಾಡಲಾಗುತ್ತದೆ. ಅದರಲ್ಲಿ ಅಷ್ಟ ದ್ರವ್ಯ ಗಣಪತಿ ಹೋಮ ಕೂಡ ಒಂದಾಗಿದೆ. ಸಂಪತ್ತು, ಹಣಕಾಸು, ವ್ಯಾಪಾರ ಮತ್ತು ವೃತ್ತಿ ಜೀವನ ಸುಧಾರಣೆ ಮತ್ತು ಅಭಿವೃದ್ಧಿಗೆ ಈ ಹೋಮವನ್ನು ಮಾಡಲಾಗುತ್ತದೆ. ವಿವಾಹ ವಿಳಂಬ ಮತ್ತು ಸೂಕ್ತ ಜೀವನ ಸಂಗಾತಿಯನ್ನು ತ್ವರಿತವಾಗಿ ಹುಡುಕಲು ಕೂಡ ಈ ಯಾಗವನ್ನು ಮಾಡಲಾಗುತ್ತದೆ. ಗಣಪತಿಗೆ ಇಡೀ ಭೂಮಂಡಲದಲ್ಲಿ ಪ್ರಥಮ ಪೂಜೆ. ಹಿಂದೂ ಧರ್ಮದ 5 ಪ್ರಾಥಮಿಕ ದೇವರುಗಳಲ್ಲಿ ಗಣೇಶ ಕೂಡ ಒಬ್ಬ. ಉಳಿದ 4 ದೇವರೆಂದರೆ ಬ್ರಹ್ಮ, ವಿಷ್ಣು, ಶಿವ ಮತ್ತು ದುರ್ಗಾ ದೇವಿ.
ಯಾವ 8 ವಸ್ತುಗಳನ್ನು ಹೋಮಕ್ಕೆ ಬಳಸಲಾಗುತ್ತದೆ?
ಅಷ್ಟ ಎಂದರೆ 8 ಮತ್ತು ದ್ರವ್ಯ ಎಂದರೆ ವಸ್ತುಗಳು ಎಂಬ ಅರ್ಥವಿದೆ. ಈ ಹೋಮಕ್ಕೆ ಪ್ರಮುಖವಾಗಿ 8 ವಸ್ತುಗಳು ಬೇಕೇಬೇಕು. ಗಣಪತಿ ಹೋಮದ ಅಷ್ಟ ದ್ರವ್ಯ ಹೋಮದಲ್ಲಿ ಎಳ್ಳೆಣ್ಣೆ, ಜೋನಿ ಬೆಲ್ಲ, ಕಬ್ಬು, ಜೇನುತುಪ್ಪ, ತೆಂಗಿನಕಾಯಿ, ತುಂಡಾದ ಅಕ್ಕಿ, ಬಾಳೆಹಣ್ಣು, ಅಕ್ಷತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ 8 ವಸ್ತುಗಳೊಂದಿಗೆ ಗಣಪತಿ ಹೋಮವನ್ನು ಮಾಡಿದಾಗ ಅತ್ಯುತ್ತಮ ಫಲಿತಾಂಶ ಸಿಗುತ್ತದೆ. ಮತ್ತು ಜೀವನದ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ. ಕೇರಳದಲ್ಲಿ ಮಾಡುವ ಗಣಪತಿ ಹೋಮದಲ್ಲಿ ತೆಂಗಿನಕಾಯಿ, ಜೇನುತುಪ್ಪ, ಬೆಲ್ಲ, ಕಬ್ಬು, ಸಿಹಿ ಅಪ್ಪಂ, ಕಪ್ಪು ಎಳ್ಳು, ಸಿಹಿ ಕಡುಬು ಮತ್ತು ಬಾಳೆಹಣ್ಣು ಎಂಬ ಎಂಟು ವಸ್ತುಗಳನ್ನು ಬಳಸಲಾಗುತ್ತದೆ.
