‘ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದೇ ಅಂತಿಮ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಪದೇ ಪದೆ ಯಾಕೆ ಕೇಳುತ್ತೀರಿ’ ಎಂದು ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುವರ್ಣ ವಿಧಾನಸೌಧ/ಬೆಳಗಾವಿ (ಡಿ.12): ‘ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದೇ ಅಂತಿಮ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಪದೇ ಪದೆ ಯಾಕೆ ಕೇಳುತ್ತೀರಿ’ ಎಂದು ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಸುವರ್ಣ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ’ ಎಂದು ಹೇಳಿದರು.
ಬಳಿಕ ಯತೀಂದ್ರ ಹಾಗೂ ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬೆಳಗಾವಿಗೆ ತೆರಳಿದರು. ಸರ್ಕ್ಯೂಟ್ ಹೌಸ್ನಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಮಾತನಾಡಿದ ತಂದೆ-ಪುತ್ರರ ನಡುವೆ ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆ ಬಗ್ಗೆಯೇ ಚರ್ಚೆ ನಡೆದಿದೆ ಎನ್ನಲಾಗಿದೆ. ಸರ್ಕ್ಯೂಟ್ ಹೌಸ್ನಲ್ಲಿ ಎದುರಾದ ಸುದ್ದಿಗಾರರು ಯತೀಂದ್ರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಲ್ಲವೇ ಎಂದು ಕೇಳಿದಾಗ, ‘ಯತೀಂದ್ರ ಏನು ಹೇಳಿದ್ದಾನೆ? ಹೈಕಮಾಂಡ್ ಹೇಳಿದರೆ ಮಾತ್ರ ಎಂದೇ ನಾವು ಹೇಳುತ್ತಿದ್ದೇವೆ. ಮತ್ತೆ ಯಾಕೆ ಅದನ್ನೇ ಕೇಳುತ್ತಿರಾ?’ ಎಂದು ಸಿಡಿಮಿಡಿಗೊಂಡರು.
ಹೇಳಬೇಕಾಗಿದ್ದನ್ನು ಹೇಳಿದ್ದೇನೆ: ಬಳಿಕ ಪ್ರತಿಕ್ರಿಯಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ‘ಹೇಳಬೇಕಾಗಿದ್ದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಪದೇ ಪದೆ ಮಾತನಾಡುವುದಿಲ್ಲ. ಯಾರ್ಯಾರ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಹೇಳಬೇಕಾಗಿದ್ದು ಹೇಳಿದ್ದಾಗಿದೆ’ ಎಂದು ಹೇಳಿದರು.
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ
ಒಳಮೀಸಲಾತಿ ವಿಷಯ ಇತ್ಯರ್ಥವಾಗಿರುವುದರಿಂದ ಹಂತ ಹಂತವಾಗಿ ವಿವಿಧ ಇಲಾಖೆಯಲ್ಲಿನ ಒಟ್ಟು 1,88,037 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು, ಈಗಾಗಲೇ ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಅನುಮೋದನೆ ದೊರಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿಯ ಹಣಮಂತ ನಿರಾಣಿ ಹಾಗೂ ಡಾ. ಧನಂಜಯ ಸರ್ಜಿ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ವಿವಿಧ ಇಲಾಖೆಯಲ್ಲಿ 2,84,881 ಹುದ್ದೆಗಳು, ನಿಗಮ, ಮಂಡಳಿಗಳಲ್ಲಿ 1,01,420 ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಖಾಲಿ ಇವೆ. ಈ ಪೈಕಿ 8157 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದೆ. 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 32 ಇಲಾಖೆಗಳ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.


