ನದಿ ಜೋಡಣೆ ಹಾಗೂ ನೀರಾವರಿ, ನಗರಾಭಿವೃದ್ಧಿ ಯೋಜನೆಗಳ ವಿಚಾರವಾಗಿ ಕೇಂದ್ರ ಸಚಿವರ ಜತೆ ಚರ್ಚೆ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದಾರೆ.

ಬೆಂಗಳೂರು (ಡಿ.23): ನದಿ ಜೋಡಣೆ ಹಾಗೂ ನೀರಾವರಿ, ನಗರಾಭಿವೃದ್ಧಿ ಯೋಜನೆಗಳ ವಿಚಾರವಾಗಿ ಕೇಂದ್ರ ಸಚಿವರ ಜತೆ ಚರ್ಚೆ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಇದೇ ವೇಳೆ ಅವಕಾಶ ಸಿಕ್ಕರೆ ಎಐಸಿಸಿ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದು, ಮಧ್ಯಾಹ್ನ 3 ಗಂಟೆಗೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ನದಿ ಜೋಡಣೆ ಹಾಗೂ ನೀರಾವರಿ ಯೋಜನೆಗಳ ವಿಚಾರವಾಗಿ ಚರ್ಚಿಸಲಿದ್ದಾರೆ.

ಮಂಗಳವಾರ ರಾತ್ರಿ ದೆಹಲಿಯಲ್ಲೇ ಉಳಿದುಕೊಳ್ಳಲಿರುವ ಡಿ.ಕೆ.ಶಿವಕುಮಾರ್‌ ಅವರು ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಬುಧವಾರ ನಗರಾಭಿವೃದ್ಧಿ ಯೋಜನೆಗಳ ವಿಚಾರವಾಗಿ ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೂ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಮೆಟ್ರೋಗೆ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಲಿದ್ದಾರೆ. ಜತೆಗೆ ಮಹದಾಯಿ, ಎತ್ತಿನಹೊಳೆ ವಿಚಾರವಾಗಿ ಅರಣ್ಯ ಸಚಿವರ ಭೇಟಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರ: ಇನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಡಿ.ಕೆ. ಶಿವಕುಮಾರ್‌ ಅವರಿಗೆ ನೋಟಿಸ್ ನೀಡಿದ್ದಾರೆ. ಪೊಲೀಸರ ನೋಟಿಸ್‌ಗೆ ಡಿ.ಕೆ. ಶಿವಕುಮಾರ್‌ ಉತ್ತರ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಂಚಾಯ್ತಿಯಿಂದ ಸಂಸತ್ತಿನವರೆಗೂ ಹೋರಾಟ: ‘ಹುಟ್ಟಿದ ಸೂರ್ಯ ಮುಳುಗಲೇ ಬೇಕು. ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರ ಬಿಜೆಪಿಯ ಅಂತ್ಯದ ದಿನಗಳು ಆರಂಭವಾಗಿವೆ. ಈ ಹೆಸರು ಬದಲಾವಣೆ ಹಿಂಪಡೆಯುವವರೆಗೂ ಪಂಚಾಯ್ತಿಯಿಂದ ಸಂಸತ್ತಿನವರೆಗೆ ಹೋರಾಟ ರೂಪಿಸುತ್ತೇವೆ. ಪಕ್ಷದ ಮುಂಬರುವ ಕಾರ್ಯಕಾರಿಣಿ‌ ಸಭೆಯಲ್ಲಿ ಹೋರಾಟದ ರೂಪುರೇಷೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಆರ್ಟಿಕಲ್-21 ರ ಮೂಲಕ ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಬಿಜೆಪಿ ಮುಟ್ಟುವ ಧೈರ್ಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ಈಗ ಮನರೇಗಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ನೋಡಿದರೆ ಬಿಜೆಪಿಯ ಅಂತ್ಯ ಪ್ರಾರಂಭವಾಗಿದೆ. ಕೇಂದ್ರವು ಬಡವರಿಗೆ ಕೊಟ್ಟ ಕಾರ್ಯಕ್ರಮದ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ದೇಶದ ಬಡಜನತೆಗೆ ಎಸಗುತ್ತಿರುವ ದ್ರೋಹವಿದು. ಇದಕ್ಕಿಂತ ದೊಡ್ಡ ಅವಮಾನವಿಲ್ಲ’ ಎಂದು ಕಿಡಿಕಾರಿದರು. ‘ಸರ್ಕಾರ ಮತ್ತು ಪಕ್ಷ ಒಟ್ಟಾಗಿ ನರೇಗಾ ಯೋಜನೆಯ ವಿರುದ್ದ ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ವಿರೋಧಿಸಿ ಹೋರಾಟ ಮಾಡುತ್ತೇವೆ. ಇದು ರಾಷ್ಟ್ರೀಯ ವಿಚಾರ. ಪಂಚಾಯತಿಗೆ, ಮತದಾರರಿಗೆ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳಿಗೆ ನೀಡಿರುವ ಹಕ್ಕನ್ನು ಕಾಂಗ್ರೆಸ್ ಪಕ್ಷ ಕಾಪಾಡಲಿದೆ. ಕಾಪಾಡಲು ಹೋರಾಟ ರೂಪಿಸಲಿದೆ’ ಎಂದು ಹೇಳಿದರು.

ಜನಾಭಿಪ್ರಾಯ ರೂಪಿಸುತ್ತೇವೆ

ಇಡೀ ಭಾರತದಲ್ಲಿಯೇ ನನ್ನ ಕನಕಪುರ ಕ್ಷೇತ್ರ ಅತಿ ಹೆಚ್ಚು ನರೇಗಾ ಕಾಮಗಾರಿಗಳನ್ನು ನಡೆಸಿದ ಕ್ಷೇತ್ರ. ಇಲ್ಲಿನ‌ ಕೆಲಸಗಳನ್ನು ನೋಡಿ ನನಗೆ ಎಲ್ಲಿ ಪ್ರಶಸ್ತಿ ನೀಡಬೇಕಾಗುತ್ತದೋ ಎಂದು ಕ್ಷೇತ್ರದ ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ಪ್ರಶಸ್ತಿ ನೀಡಿದರು. ಇದು ಬಿಜೆಪಿಯ ನಿಜ ಬಣ್ಣ ಎಂದು ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದರು.