ಬಿಜೆಪಿ ನಾಯಕರು ದ್ವೇಷ ಬಿತ್ತುವ, ವೈಯಕ್ತಿಕ ನಿಂದನೆ ಮಾಡುವ ಪಿತಾಮಹರು. ಅವರು ದ್ವೇಷ ಭಾಷಣ ಮಾಡದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸುವರ್ಣ ವಿಧಾನಸೌಧ (ಡಿ.12): ಬಿಜೆಪಿ ನಾಯಕರು ದ್ವೇಷ ಬಿತ್ತುವ, ವೈಯಕ್ತಿಕ ನಿಂದನೆ ಮಾಡುವ ಪಿತಾಮಹರು. ಅವರು ದ್ವೇಷ ಭಾಷಣ ಮಾಡದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ದ್ವೇಷ ಭಾಷಣ ತಡೆ ವಿಧೇಯಕ ಮಂಡನೆಗೆ ಬಿಜೆಪಿ ವಿರೋಧದ ಕುರಿತು ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಬಿಜೆಪಿ ಅವರು ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ, ವೈಯಕ್ತಿಕ ನಿಂದನೆಯ ಪಿತಾಮಹರು. ಸಂವಿಧಾನದ ಆಶಯದಂತೆ ಅವರು ನಡೆದುಕೊಳ್ಳಲಿ.

ಸಂವಿಧಾನಕ್ಕೆ ಗೌರವ ನೀಡುವ ಇಚ್ಛೆ ಇದ್ದರೆ ವಿಧೇಯಕದಲ್ಲಿನ ಅಂಶಗಳನ್ನು ಪಾಲಿಸಲಿ. ದ್ವೇಷ ಭಾಷಣ ಮಾಡದಿದ್ದರೆ ಸಮಸ್ಯೆಯೇ ಇರುವುದಿಲ್ಲ. ಸಂವಿಧಾನ ರಕ್ಷಣೆಗೆ ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. ನೆಹರು ಹಾಗೂ ಇಂದಿರಾ ಗಾಂಧಿ ಮತಗಳ್ಳತನ ಮಾಡಿದ್ದರು ಎಂಬ ಅಮಿತ್‌ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ಅಮಿತ್‌ ಅವರು ಕನಿಷ್ಠ ಜ್ಞಾನ ಹೊಂದಿರಬೇಕು. ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತಿತ್ತು. ಹೀಗಿರುವಾಗ ಮತಗಳ್ಳತನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೆಎಸ್‌ಸಿಎ ಮನವಿ ಸಂಪುಟದಲ್ಲಿ ಚರ್ಚೆ: ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್ ಮನವಿ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್‌, ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು ನನ್ನನ್ನು ಮತ್ತು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಕೆಲ ಮನವಿ ಸಲ್ಲಿಸಿದ್ದಾರೆ. ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ಆಗಬಾರದಿತ್ತು. ಅನೇಕ ತಪ್ಪುಗಳು ನಡೆದಿವೆ. ಅವುಗಳನ್ನು ಸರಿಪಡಿಸಿ, ಪ್ರತ್ಯೇಕ ಮಾರ್ಗಸೂಚಿ ಅನುಸಾರ ಜನಸಂದಣಿ ನಿಯಂತ್ರಣ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕೇಂದ್ರದ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿ

ರಾಜ್ಯಕ್ಕೆ ಅನ್ಯಾಯವಾಗಿರುವುದು ಕೇಂದ್ರ ಸರ್ಕಾರದಿಂದ. ಹೀಗಾಗಿ ಬಿಜೆಪಿಯು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಕಬ್ಬು, ಮೆಕ್ಕೆಜೋಳ, ಸಕ್ಕರೆ, ಎಥೆನಾಲ್ ಸೇರಿದಂತೆ ಪ್ರತಿ ವಿಚಾರದಲ್ಲಿ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಬೇಕಾದ ಅನುದಾನ ಸರಿಯಾಗಿ ನೀಡುತ್ತಿಲ್ಲ. ರೈತರಿಗೆ ಸಹಾಯ ಮಾಡಲು ಮಹದಾಯಿ ಯೋಜನೆ ಬಗ್ಗೆ ತೀರ್ಮಾನ ಮಾಡಲು ಇದುವರೆಗೂ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.ಮೇಕೆದಾಟು ವಿಚಾರದಲ್ಲಿ ನಮ್ಮ ಹೋರಾಟದಿಂದ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ.

ಒಂದೇ ದಿನದಲ್ಲಿ ಅನುಮತಿ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ, ಇನ್ನೂ ಕೊಡಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ ₹5,400 ಹಣವನ್ನು ಇದುವರೆಗೂ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಭೂ ಸಂತ್ರಸ್ತ ರೈತರಿಗೆ ₹76 ಸಾವಿರ ಕೋಟಿ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಬಿಜೆಪಿಯ ಯಾವೊಬ್ಬ ಸಂಸದರು ಕೇಂದ್ರ ಸರ್ಕಾರದ ಜೊತೆ ಈ ವಿಚಾರವಾಗಿ ಮಾತನಾಡಿಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ತಿರುಗೇಟು ನೀಡಿದರು.