ಬಿಬಿಎಂಪಿ ಚುನಾವಣೆಯನ್ನು ವಿಳಂಬ ಮಾಡಬೇಕೆಂಬ ಉದ್ದೇಶದಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ರೇಟರ್‌ ಬೆಂಗಳೂರು ಕಾಯ್ದೆ ರಚನೆಗೆ ಮುಂದಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು. 

ಬೆಂಗಳೂರು (ಏ.26): ಬಿಬಿಎಂಪಿ ಚುನಾವಣೆಯನ್ನು ವಿಳಂಬ ಮಾಡಬೇಕೆಂಬ ಉದ್ದೇಶದಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ರೇಟರ್‌ ಬೆಂಗಳೂರು ಕಾಯ್ದೆ ರಚನೆಗೆ ಮುಂದಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ವಿಳಂಬ ಮಾಡಲು ಗ್ರೇಟರ್‌ ಬೆಂಗಳೂರು ರಚನೆಗೆ ಕಾಂಗ್ರೆಸ್‌ ಮುಂದಾಗಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಾಸ್‌ ಆಗಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಒಂದು ಗುಂಡಿಯನ್ನೂ ಮುಚ್ಚಿಲ್ಲ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಈ ಕಾಯ್ದೆ ವಾಪಸ್‌ ಪಡೆದು ಬಿಬಿಎಂಪಿಗೆ ಚುನಾವಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಭದ್ರತಾ ವೈಫಲ್ಯವಲ್ಲ: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯು ಭದ್ರತಾ ವೈಫಲ್ಯವಲ್ಲ. ಇದೊಂದು ವ್ಯವಸ್ಥಿತ ಸಂಚಾಗಿದ್ದು, ಕೇಂದ್ರ ಸರ್ಕಾರ ಉಗ್ರರ ಹೆಡೆಮುರಿ ಕಟ್ಟಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ತಡೆಯಲು ಕೇಂದ್ರ ಸಾಕಷ್ಟು ಕ್ರಮ ಕೈಗೊಂಡಿತ್ತು. ಇದು ಪಾಕಿಸ್ತಾನದ ಸಂಚಿನಿಂದ ನಡೆದ ಘಟನೆ. ಭಾರತೀಯರೆಲ್ಲರೂ ಇದನ್ನು ಖಂಡಿಸಬೇಕು. ಇಂತಹ ಕೃತ್ಯಗಳನ್ನು ಎಸಗಿದವರನ್ನು ಮಟ್ಟ ಹಾಕುವ ಕೆಲಸ ಕೇಂದ್ರ ಮಾಡುತ್ತದೆ ಎಂದರು. ಕೇಂದ್ರ ಸರ್ಕಾರ ಮುಂದಿನ 2-3 ದಿನಗಳಲ್ಲಿ ಉಗ್ರರನ್ನು ಮಟ್ಟ ಹಾಲಿದೆ. ಈ ಪಿಶಾಚಿಗಳಿಗೆ ಜಾತಿ, ಧರ್ಮ ಇಲ್ಲ. 

ಇಂತಹ ಹೀನ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿಯಾಗಲೇಬೇಕು. ಕಾಶ್ಮೀರಕ್ಕೆ ಲಕ್ಷಾಂತರ ಜನ ಪ್ರವಾಸಕ್ಕೆ ಹೋಗಿ ಬರುತ್ತಾರೆ. ಇದು ಭದ್ರತಾ ವೈಫಲ್ಯ ಎನ್ನುವ ಹಗುರ ಮಾತುಗಳನ್ನು ಕಾಂಗ್ರೆಸ್ ನಿಲ್ಲಿಸಬೇಕು. ಕೇಂದ್ರದ ಕ್ರಮಗಳನ್ನು ಸಹಿಸದೇ ಭಯೋತ್ಪಾದಕ ಶಕ್ತಿಗಳು ಈ ಕೃತ್ಯ ಎಸಗಿವೆ. ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದರು. ಉಗ್ರರ ಕೃತ್ಯವನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿಸುವುದಿಲ್ಲ. ಉಗ್ರರ ಹೆಡೆಮುರಿ ಹೇಗೆ ಕಟ್ಟುತ್ತಾರೆ ಎಂಬುದನ್ನು ಮುಂದಿನ ದಿನದಲ್ಲಿ ಗಮನಿಸಲಿದ್ದೀರಿ. ಭಯೋತ್ಪಾದಕರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಅವರ ದುರ್ಬುದ್ಧಿಗೆ ತಕ್ಕ ಬುದ್ಧಿ ಕಲಿಸಲಿದ್ದಾರೆ. ಭಾರತೀಯರನ್ನು ಮುಟ್ಟಿದರೆ ಏನು ಮಾಡುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಇಂಥ ತಪ್ಪಿಗೆ ಅವರು ಬೆಲೆ ತೆರಲೇಬೇಕು ಎಂದು ಹೇಳಿದರು.

ಈಗಿರುವ ಸಿದ್ದರಾಮಯ್ಯ ಹಿಂದಿನ ಸಿದ್ದರಾಮಯ್ಯ ಅಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಮೆಟ್ರೋ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಜೊತೆಗೆ ಪ್ರತ್ಯೇಕ ರೈಲು ವ್ಯವಸ್ಥೆ ಬೇಕೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸಭೆ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
-ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ.