ಈಗಾಗಲೇ ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರು (ಸೆ.02): ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರ್‌ಎಸ್‌ಎಸ್‌ ವರ್ಸಸ್ ಆರ್‌ಎಸ್‌ಎಸ್ ಕಿತ್ತಾಟ. ಎಸ್‌ಐಟಿ ರಚಿಸುವವರೆಗೂ ಸುಮ್ಮನಿದ್ದು ಈಗ ಕೇಂದ್ರ ತನಿಖಾ ಸಂಸ್ಥೆಗೆ ಪ್ರಕರಣ ವಹಿಸಲು ಅವರು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ. ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಸಿಬಿಐ ಮತ್ತು ಎನ್ಐಎ ತನಿಖೆಗೆ ಬಿಜೆಪಿ ಒತ್ತಾಯ ಮಾಡುತ್ತಿದೆ.

ಕೇಂದ್ರ ಸರ್ಕಾರದ ಸಿಬಿಐ, ಎನ್ಐಎಯಲ್ಲಿ ಕರ್ನಾಟಕ ಪ್ರಕರಣಗಳು ಎಷ್ಟು ಬಾಕಿ ಇವೆ ಎಂಬ ಅರಿವು ಅವರಿಗೆ ಇದೆಯೇ? ಆರ್‌ಎಸ್‌ಎಸ್‌ ಜಗಳ ತಂದು ರಾಜ್ಯ ಸರ್ಕಾರಕ್ಕೆ ಮೆತ್ತುವ ಹುನ್ನಾರ ನಡೆದಿದೆ. ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಅವರ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಮಾಡುತ್ತಿರುವುದು. ಈ ಹಿಂದೆ ಬಿಜೆಪಿಯ ಸುನಿಲ್‌ಕುಮಾರ್, ಕಟೀಲ್‌ ಹೇಳಿದ್ದ ಮಾತುಗಳಿಗೆ ಮೊದಲು ಬಿಜೆಪಿಯವರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಎನ್‌ಐಗೆ ಕೊಡಲು ಏನು ಅಂತಹ ರಾಷ್ಟ್ರೀಯ ಭದ್ರತಾ ವಿಷಯವಿದೆ? ಹೀಗಾಗಿಯೇ ಗೃಹ ಸಚಿವರು, ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸೋತವರ ಚಲಾವಣೆಗೆ ದಸರಾ ವಿವಾದ: ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ವಿರೋಧ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ವಿರೋಧ ಮಾಡುತ್ತಿರುವವರೆಲ್ಲರೂ ಮಾಜಿ ಸಂಸದರು, ಮಾಜಿ ಶಾಸಕರು. ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರಬೇಕೆಂದರೆ ಏನಾದರೂ ಮಾಡಬೇಕು. ಹೀಗಾಗಿ ಸೋತವರು ಚಲಾವಣೆಯಲ್ಲಿರಲು ಈ ವಿವಾದ ಮಾಡುತ್ತಿದ್ದಾರೆ. ಟಿಪ್ಪು, ಹೈದರಾಲಿ ಇದ್ದಾಗ ದಸರಾ‌ ಆಚರಣೆ ನಿಂತಿತ್ತೇ? ಇವರೇ ಚಾಮುಂಡೇಶ್ವರಿ ತಾಯಿ ವಕ್ತಾರರ ರೀತಿ ಆಡುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ಮಾಡಿದರು.