ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮುಂದಿನ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಿದ್ದಾರೆ ಮತ್ತು ಸಿಎಂ ಪದವಿ ತಪ್ಪಿರುವ ಬಗ್ಗೆ ಅವರಿಗೆ ಯಾವುದೇ ವಿಷಾದವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ (ಜು.29): ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮುಂದಿನ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಅಲ್ಲದೆ, ಸಿಎಂ ಪದವಿ ತಪ್ಪಿರುವ ಬಗ್ಗೆ ಅವರಿಗೆ ಯಾವುದೇ ವಿಷಾದವಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮುಂದಿನ ರಾಜಕೀಯ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಅವರ ನಿರ್ಧಾರವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ‌ ಹಾಗೂ ಪ್ರಿಯಾಂಕಾ ಗಾಂಧಿ ಕೂಡಾ ಗೌರವಿಸುತ್ತಾರೆ ಎಂದರು.

‘ಕಾಂಗ್ರೆಸ್‌ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ತಾವು ಸಾಕಷ್ಟು ಶ್ರಮ ಹಾಕಿದರೂ, ಸಿಎಂ ಪದವಿ ಎಸ್‌.ಎಂ.ಕೃಷ್ಣ ಅವರ ಪಾಲಾಯ್ತು’ ಎಂಬ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯಸಭಾ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ತಮಗೆ ಸಿಎಂ ಕುರ್ಚಿ ಕೈತಪ್ಪಿದ್ದಕ್ಕೆ ವಿಷಾದಿಸಿಲ್ಲ. ಖರ್ಗೆಯವರು ಆಡಿರುವ ಮಾತಿನ ಸಂಪೂರ್ಣ ವಿಡಿಯೋ ನೋಡಿದಾಗ ಮಾತ್ರ ಅವರ ಮಾತಿನ ಅರ್ಥ ಆಗುತ್ತದೆ. ಪಕ್ಷಕ್ಕಾಗಿ ಅವರು ದುಡಿದಿದ್ದಾರೆ. ಕಲಬುರಗಿ, ಬೀದರ್‌ನ ಹಳ್ಳಿಯಿಂದ ದಿಲ್ಲಿಯವರೆಗೆ ಅವರು ಮುಟ್ಟಿದ್ದಾರೆ.