ಟನಲ್ ರೋಡ್ ಎಂಬುದು ಗಾಳಿ ಗೋಪುರ. ಇದರಿಂದ ಬಂದ ಹಣ ಬಿಹಾರ ವಿಧಾನಸಭಾ ಚುನಾವಣೆಗೆ ಕಳುಹಿಸುವ ಪ್ಲ್ಯಾನ್ ಮಾಡಿದ್ದಾರೆ. ಇದು ಮತ್ತೊಂದು ಎತ್ತಿನಹೊಳೆ ಯೋಜನೆ ಆಗಲಿದೆ ಎಂದು ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಅ.28): ಟನಲ್ ರೋಡ್ ಎಂಬುದು ಗಾಳಿ ಗೋಪುರ. ಇದರಿಂದ ಬಂದ ಹಣ ಬಿಹಾರ ವಿಧಾನಸಭಾ ಚುನಾವಣೆಗೆ ಕಳುಹಿಸುವ ಪ್ಲ್ಯಾನ್ ಮಾಡಿದ್ದಾರೆ. ಇದು ಮತ್ತೊಂದು ಎತ್ತಿನಹೊಳೆ ಯೋಜನೆ ಆಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ನಗರದ ಪರಿಸರದ ಉಸಿರು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿದೆ. ಈಗ ಟನಲ್ ರೋಡ್ ಹೆಸರಿನಲ್ಲಿ ಲಾಲ್‌ಬಾಗ್‌ನಲ್ಲಿ ಸುರಂಗ ಕೊರೆಯಲು ಹೊರಟ್ಟಿದ್ದಾರೆ. ಮೂರು ಎಕರೆ ಮಾತ್ರ ಬಳಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿಗರಲ್ಲ. ನಾನು ಬೆಂಗಳೂರಿಗ. ಲಾಲ್‌ಬಾಗ್‌ನಲ್ಲಿ ಗಟ್ಟಿ ಕಲ್ಲಿದೆ. ಅದರ ಬುಡಕ್ಕೆ ಬೆಂಕಿ ಇಡುತ್ತಿದ್ದಾರೆ. ಇದರಿಂದ ನೀರಿನ ಸೆಲೆಗೆ ಹೊಡೆತ ಬೀಳಲಿದೆ ಎಂದು ಟನಲ್ ರೋಡ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಮತ್ತೊಂದು ಎತ್ತಿನಹೊಳೆ ಯೋಜನೆ: ಕೆಂಪೇಗೌಡರ ನಾಡನ್ನು ಐದು ಭಾಗ ಮಾಡಿದ್ದಾರೆ. ಶಾಶ್ವತವಾಗಿ ಕೆಂಪೇಗೌಡರ ಹೆಸರು ಅಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಟನಲ್ ರೋಡ್ ಬಗ್ಗೆ ಪುರಾತತ್ವ ಇಲಾಖೆ, ವಿಜ್ಞಾನಿಗಳು ಏನು ಹೇಳಿದ್ದಾರೆ? ಈ ಯೋಜನೆಯನ್ನು 8-10 ವರ್ಷಗಳಲ್ಲಿ ಮುಗಿಸಲು ಸಾಧ್ಯವಿಲ್ಲ. 38 ಸಾವಿರ ಕೋಟಿ ರು.ನ ಈ ಯೋಜನೆ ಮುಗಿಯುವುದಿಲ್ಲ. ಎತ್ತಿನಹೊಳೆಯಂತೆ ಇದೊಂದು ಮುಗಿಯದ ಯೋಜನೆ ಆಗಲಿದೆ. ಇದೇ ಹಣದಲ್ಲಿ ಡಬಲ್ ಮೆಟ್ರೋ ಮಾಡಬಹುದು. ಯೋಜನೆಯಿಂದ ಬರುವ ಹಣವನ್ನು ಬಿಹಾರ ಚುನಾವಣೆಗೆ ಕಳುಹಿಸುವ ಪ್ಲ್ಯಾನ್ ಇದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.
ಯೋಜನೆ ವಿರುದ್ಧ ಜನಾಂದೋಲನ: ಎರಡೇ ವರ್ಷಕ್ಕೆ ಮುಗಿಸುವಂತಹ ಕೆಲಸ ಮಾಡಿ. ಅಪೂರ್ಣ ಕೆಲಸ ಮಾಡಿದರೆ ಮುಗಿಸುವುದು ಯಾರು? ಡಿ.ಕೆ.ಶಿವಕುಮಾರ್ ಅವರೇ ಬೆಂಗಳೂರಿಗೆ ವಿಲನ್ ಆಗಬೇಡಿ. ಈ ಟನಲ್ ರೋಡ್ ಯೋಜನೆ ಕುರಿತು ವಾರದೊಳಗೆ ಬೆಂಗಳೂರಿನ ದಕ್ಷಿಣ ಭಾಗದ ಶಾಸಕರು ಸೇರಿ ಚರ್ಚಿಸುತ್ತೇವೆ. ಈ ಯೋಜನೆ ವಿರುದ್ಧ ಜನಾಂದೋಲನ ರೂಪಿಸುತ್ತೇವೆ. ಈ ಯೋಜನೆಯ ಕೆಲಸ ಶುರುವಾಗುವ ವೇಳೆಗೆ ಸಿದ್ದರಾಮಯ್ಯ ಇರುತ್ತಾರೋ ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗಿರುತ್ತಾರೋ ಎಂದು ಮಾರ್ಮಿಕವಾಗಿ ಹೇಳಿದರು.
ಡಾಂಬರೀಕರಣಕ್ಕೆ ಹಣ ಎಲ್ಲಿದೆ?
ಕಾಂಗ್ರೆಸ್ ಸರ್ಕಾರ ರಸ್ತೆಗಳ ಅಭಿವೃದ್ಧಿ ಮರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಲೇಯರ್ ಡಾಂಬರೀಕರಣಕ್ಕೆ ಸೂಚನೆ ನೀಡಿದ್ದಾರೆ. ಅದಕ್ಕೆ ಬೇಕಾದ 4-5 ಸಾವಿರ ಕೋಟಿ ರು. ಎಲ್ಲಿದೆ? ರಸ್ತೆಗುಂಡಿಯಿಂದಾಗಿ ಸುಮಾರು 12 ಮಂದಿ ಸತ್ತಿದ್ದು, ಇದು ಮೃತ್ಯುಕೂಪ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನಗರ ಪ್ರದಕ್ಷಿಣೆ ಮಾಡಿದರೆ ರಸ್ತೆಗುಂಡಿ ಕಾಣುವುದಿಲ್ಲ. ತೆರಿಗೆ ಪಾವತಿಸಲ್ಲ, ರಸ್ತೆಗುಂಡಿ ನಾವೇ ಮುಚ್ಚುತ್ತೇವೆ ಎಂದು ಜನ ಹೇಳುತ್ತಿದ್ದಾರೆ.
ಬೆಂಗಳೂರು ಸೇರಿ ಇಡೀ ರಾಜ್ಯದ ರಸ್ತೆಗಳಲ್ಲಿ ಎಷ್ಟು ಗುಂಡಿ ಇದೆ ಎಂದು ಸರ್ಕಾರ ತಿಳಿಸಿದರೆ, ಗಿನ್ನೆಸ್ ದಾಖಲೆಗೆ ಕಳುಹಿಸಬಹುದು ಎಂದು ವ್ಯಂಗ್ಯವಾಡಿದರು. ಒಂದು ಲೇಯರ್ ಡಾಂಬರೀಕರಣಕ್ಕೆ 4-5 ಸಾವಿರ ಕೋಟಿ ರು. ಬೇಕಾಗುತ್ತದೆ. ಗ್ರಂಥಪಾಲಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಸಂಬಳವೇ ಇಲ್ಲ. ಇನ್ನು ಇಷ್ಟೊಂದು ಹಣ ಎಲ್ಲಿದೆ? ಬಿಬಿಎಂಪಿ ಅಸ್ತಿತ್ವದಲ್ಲಿಲ್ಲದೆ ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಆಗುತ್ತಿಲ್ಲ. ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಮುಂದೆ ನಾವು ರದ್ದು ಮಾಡುತ್ತೇವೆ ಎಂದು ಅಶೋಕ್ ಹೇಳಿದರು.


